ಸಂಶುದ್ದೀನ್ ಸಂಪ್ಯ
ರಸ್ತೆ ಬದಿಯ ಗೇರುಬೀಜ, ಮಾವು, ಹಲಸು ಇನ್ನಿತರ ಬೆಳೆಗಳನ್ನು ನಗರಸಭೆ, ಲೋಕೋಪಯೋಗಿ ಇಲಾಖೆ, ಇನ್ನಿತರ ಅಭಿವೃದ್ಧಿ ಇಲಾಖೆಗಳು ಏಲಂ ಮೂಲಕ ವ್ಯಾಪಾರಿಗಳಿಗೆ ನೀಡುವ ಪದ್ಧತಿ ಇದೆ.
ಮುಖ್ಯವಾಗಿ ಜನ ಮಾವಿನ ಮಿಡಿಗಳನ್ನು ಕೀಳುತ್ತಾರೆ. ಮಿಡಿ ಮಾವಿಗೆ ಬೇಡಿಕೆ ಬಹಳವಿದೆ. ಮಾವಿನ ಮಿಡಿಗಳನ್ನು ಕೀಳುವ ಸಂದರ್ಭದಲ್ಲಿ ಕೆಲವರು ಮರದ ಕೊಂಬೆ(ಗೆಲ್ಲು)ಗಳನ್ನು ಕಡಿದು ಹಾಕುತ್ತಾರೆ. ತುದಿ ಭಾಗದಲ್ಲಿರುವ ಗೆಲ್ಲುಗಳನ್ನು ತುಂಡರಿಸುವ ಕಾರಣದಿಂದಾಗಿ ಮರಗಳಿಗೆ ಹಾನಿಯಾಗುತ್ತದೆ. ಅಲ್ಲದೆ ಅಂತಹ ಮರಗಳಲ್ಲಿ ಮುಂದಿನ ಮೂರು ವರ್ಷಗಳ ಕಾಲ ಫಲ ಕಂಡು ಬರುವುದಿಲ್ಲ.ಇನ್ನು ಕೆಲವು ಕಡೆಗಳಲ್ಲಿ ಮರಗಳಲ್ಲಿ ಕೆಂಪಿರುವೆ ಇದ್ದರೆ ಅದಕ್ಕೆ ಸ್ಪ್ರೇ ಮಾಡಿ ನಾಶ ಮಾಡುತ್ತಾರೆ. ಪೃಕೃತಿಯ ಸಮತೋಲನ ಕಾಪಾಡುವಲ್ಲಿ ಕೆಂಪಿರುವೆಗಳ ಪಾತ್ರವೂ ಬಹಳವಿದೆ. ಇದೆಲ್ಲದರಿಂದ ಮರಗಳಿಗೆ ಮತ್ತು ಪರಿಸರಕ್ಕೆ ಹಾನಿಯಾಗುತ್ತದೆ. ಮರನಾಶ ಮತ್ತು ಫಲಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಂತಹ ಗಟ್ಟಿ ನಿರ್ಧಾರಗಳು ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಸಾವಿರಾರು ರು. ಆದಾಯ: ರಸ್ತೆ ಬದಿಯಲ್ಲಿನ ಬೆಳೆ ಕೀಳುವುದಕ್ಕಾಗಿ ನೀಡುವ ಏಲಂನಲ್ಲಿ ರು. ೪೦ ಸಾವಿರದಷ್ಟು ಪುತ್ತೂರು ನಗರಸಭೆಗೆ ಸಿಗುತ್ತದೆ ಎನ್ನಲಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟು ಲಭಿಸುತ್ತದೆ ಎಂಬ ನಿಖರ ಮಾಹಿತಿ ಇಲ್ಲ. ಆದಾಗ್ಯೂ ಪುತ್ತೂರು ತಾಲೂಕಿನಾದ್ಯಂತ ಅಂದಾಜು ರು. ೧ ಲಕ್ಷದಷ್ಟು ಏಲಂನಿಂದ ಸಂಗ್ರಹ ಆಗುವುದು ಈ ನಿರ್ಧಾರದಿಂದ ತಪ್ಪಿದಂತಾಗಿದೆ. ಆದರೆ ವನ್ಯ ಜೀವಿಗಳಾದ ಮಂಗ, ಬಾವಲಿ, ಬೆರು ಸೇರಿದಂತ ಹಲವಾರು ಪಕ್ಷಿ ಮತ್ತು ಪ್ರಾಣಿಗಳು ಕೇವಲ ಹಣ್ಣುಗಳನ್ನೇ ತಿಂದು ಬದುಕುತ್ತಿದೆ. ಮಾವು ಹಣ್ಣಾಗಲು ಆರಂಭಗೊಂಡಾಗ ಬಹುತೇಕ ಮಂಗಗಳಿಗೆ ಸಾಕಷ್ಟು ಆಹಾರ ಅಲ್ಲಿ ಸಿಗುವ ಕಾರಣ ಕೃಷಿಗೆ ಹಾನಿ ಮಾಡುವುದು ತಪ್ಪುತ್ತದೆ. ಕನಿಷ್ಠ ೩ ತಿಂಗಳ ಮಟ್ಟಿಗೆ ಮಂಗಗಳ ಹಾವಳಿಯಿಂದ ಅಲ್ಪ ಮಟ್ಟಿಗಾದರೂ ಪಾರಾಗಬಹುದು ಎಂಬುದು ಕಾಡು ಪ್ರಾಣಿ ಉಪಟಳದಿಂದ ನೊಂದಿರುವ ಕೃಷಿಕರ ಮಾತು. ಶಾಸಕರ ವನ್ಯಜೀವಿ, ಪರಿಸರ ಪರ ಕಾಳಜಿ:ರಸ್ತೆ ಬದಿಯಲ್ಲಿರುವ ಮಾವು ಸೇರಿದಂತೆ ಹಣ್ಣು ಹಂಪಲುಗಳ ಮರಗಳನ್ನು ಏಲಂ ಮಾಡಬಾರದು. ಆ ಕಾಯಿಗಳು ಹಣ್ಣಾಗಲಿ, ಆ ಹಣ್ಣುಗಳನ್ನು ಪಕ್ಷಿಗಳು, ಪ್ರಾಣಿಗಳು ಜೊತೆಗೆ ಮಕ್ಕಳೂ ಹೆಕ್ಕಿ ತಿಂದು ಖುಷಿ ಅನುಭವಿಸಲಿ ಎಂಬುದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನಿಲುವು. ಅದಕ್ಕಾಗಿ ಅವರು ಅಧಿಕಾರಿಗಳಿಗೆ ಏಲಂ ಮಾಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.ಶಾಸಕರ ಈ ನಿಲುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಅಶೋಕ್ ಕುಮಾರ್ ರೈ ಅವರು ಶಾಸಕರಾದ ಮೊದಲ ವರ್ಷದಲ್ಲಿಯೇ ಈ ಸೂಚನೆ ನೀಡಿದ್ದರು. ರಸ್ತೆ ಬದಿಯಲ್ಲಿನ ಮಾವುಗಳು ಪಕ್ಷಿಗಳಿಗೆ ಬಳಕೆಯಾಗಲಿ ಎಂಬುದು ಅವರ ಕಾಳಜಿ.
ಕಾಟು ಮಾವು ಗಿಡ ನೆಡಲು ಸೂಚನೆ:ಸಾಮಾಜಿಕ ಅರಣ್ಯದ ವತಿಯಿಂದ ಪ್ರತಿ ವರ್ಷವೂ ಗಿಡ ನೆಡುವ ಕಾರ್ಯಕ್ರಮವು ನಡೆಯುತ್ತಿದ್ದು, ಕಳೆದ ೨ ವರ್ಷಗಳಲ್ಲಿ ಶಾಸಕರು ರಸ್ತೆ ಬದಿಯಲ್ಲಿ ಕಾಟುಮಾವು, ಹಲಸು, ಪುನರ್‌ಪುಳಿ, ಜಂಬೂನೇರಳೆಯಂತಹ ಹಣ್ಣು ಹಂಪಲುಗಳ ಗಿಡಗಳನ್ನು ಹೆಚ್ಚು ನೆಡುವಂತೆ ಮಾಡಿದ್ದಾರೆ. ಇದರಿಂದಾಗಿ ರಸ್ತೆ ಬದಿಯಲ್ಲಿ ಸಾಮಾನ್ಯವಾಗಿ ನೆಡಲಾಗುತ್ತಿದ್ದ ಮ್ಯಾಂಜಿಯಂ, ನೀಲಗಿರಿ, ಅಕೇಶಿಯಾ ಗಿಡಗಳು ನೆಡುವುದು ಕಡಿಮೆಯಾಗಿದೆ. ಬದಲಿಗೆ ತಿನ್ನವ ಹಣ್ಣುಗಳನ್ನು ನೀಡುವ ಗಿಡಗಳು ಹೆಚ್ಚಾಗಿ ಕಂಡು ಬರುತ್ತಿದೆ.ಅಲ್ಲದೆ ರಸ್ತೆ ಬದಿಯ ನೆಡುತೋಪು ಕಡಿಯುವ ಸಂದರ್ಭದಲ್ಲಿ ಮಾವು ಇನ್ನಿತರ ಹಣ್ಣುಗಳ ಮರಗಳಿದ್ದಲ್ಲಿ ಅದನ್ನು ತೆರವು ಮಾಡದಂತೆ ಸೂಚನೆ ನೀಡಿದ್ದೇನೆ ಎಂದು ಶಾಸಕರು ಹೇಳುತ್ತಾರೆ.
ಮನುಷ್ಯರಂತೆ ಪ್ರಾಣಿ ಪಕ್ಷಿಗಳಿಗೂ ಆಹಾರ ಮುಖ್ಯ. ಬಾವಲಿ, ಬೆರು, ಮಂಗ ಇನ್ನಿತರ ಪ್ರಾಣಿ ಪಕ್ಷಿಗಳು ಮರದಿಂದ ಸಿಗುವ ಹಣ್ಣು ಹಂಪಲುಗಳನ್ನು ಸೇವಿಸಿಯೇ ಬದುಕುತ್ತಿದೆ. ಇವುಗಳ ಆಹಾರಗಳಿಗೂ ಕೊರತೆಯಾಗದಂತೆ ನಾವು ನೋಡಿಕೊಳ್ಳಬೇಕಾಗಿದೆ. ಮಿಡಿ ಮಾವು ಕೊಯ್ಯುವ ಸಂದರ್ಭದಲ್ಲಿ ಮರದ ಗೆಲ್ಲು ಮತ್ತು ತುದಿಯನ್ನು ತುಂಡರಿಸುತ್ತಾರೆ. ಇದರಿಂದ ಮುಂದಿನ ೩ ವರ್ಷ ಅದು ಹೂ ಬಿಡುವುದಿಲ್ಲ. ಅಲ್ಲದೆ ಮರಗಳಿಗೂ ಹಾನಿಯಾಗುತ್ತದೆ. ಇದೀಗ ಸರ್ಕಾರವೂ ‘ಹಕ್ಕಿ ಹಬ್ಬ’ ಹೆಸರಿನಲ್ಲಿ ಪಕ್ಷಿಗಳಿಗೆ ಪೂರಕವಾಗಿರುವ ಮರಗಳನ್ನು ಬೆಳೆಸಲು ಮುಂದಾಗಿದೆ. ಮುಂದಿನ ೧೦ ವರ್ಷಗಳಲ್ಲಿ ಇಂತಹ ಮರಗಳು ಬೆಳೆದು ಹಣ್ಣು ಕೊಡುವ ಮೂಲಕ ಪರಿಸರ ಉಳಿಸುವ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವೂ ಸಾಧ್ಯವಾಗಲಿದೆ.-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು.