ಮೂರು ದಿನದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಿ

KannadaprabhaNewsNetwork |  
Published : Jan 22, 2026, 03:30 AM IST
ಜಸಜಗಅಸ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸಂಪೂರ್ಣ ನಿಲ್ಲಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಘಟಪ್ರಭಾದ ಮೃತ್ಯುಂಜಯ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಘಟಪ್ರಭಾ

ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸಂಪೂರ್ಣ ನಿಲ್ಲಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಘಟಪ್ರಭಾದ ಮೃತ್ಯುಂಜಯ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಸತ್ತೆಪ್ಪ ಮಲ್ಲಾಪೂರೆ, ಇಂದು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಧಿಕಾರಿಗಳು ನೋಡಿಯು ನೋಡದಂತಿದ್ದಾರೆ. ಅಪ್ರಾಪ್ತ ಯುವಕರು ಕುಡಿತದ ಚಟಕ್ಕೆ ಬಿದ್ದು ಜೀವ ಕಳೆದು ಕೊಳ್ಳುತ್ತಿದ್ದರೆ, ಮಹಿಳೆಯರು ಮನೆ ನಡೆಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮೂರು ದಿನಗಳಲ್ಲಿ ಸಂಪೂರ್ಣ ಅಕ್ರಮ ಮದ್ಯ ಮಾರಾಟ ನಿಲ್ಲಿಸದಿದ್ದರೆ ಅಬಕಾರಿ ಅಧಿಕಾರಿಗಳನ್ನು ಕಟ್ಟಿ ಹಾಕುತ್ತೇವೆ ಎಂದು ಎಚ್ಚರಿಸಿದರು. ಈ ಎರಡು ತಾಲೂಕಿನಲ್ಲಿ ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 2 ಗಂಟೆ ತನಕ ಮದ್ಯ ಮಾರಾಟ ಮಾಡಲಾಗುತ್ತಿದೆ. ಕಾಲ ಮಿತಿಯನ್ನು ಪಾಲಿಸುತ್ತಿಲ್ಲ. ಸರ್ಕಾರ ಅಬಕಾರಿ ಇಲಾಖೆಯಿಂದ ಹೆಚ್ಚಿನ ಲಾಭ ಬರುತ್ತಿದೆ ಎಂದು ಮಾರಾಟಕ್ಕೆ ಕಡಿವಾಣ ಹಾಕುತ್ತಿಲ್ಲವೆಂದು ಆರೋಪಿಸಿದರು.ಅಬಕಾರಿ ಅಧಿಕಾರಿಗೆ ತರಾಟೆ:

ಈ ವೇಳೆ ಅಬಕಾರಿ ಇನ್ಸ್‌ಪೆಕ್ಟರನ್ನು ರೈತರು ತರಾಟೆಗೆ ತೆಗೆದುಕೊಂಡರು. ಅಕ್ರಮ ಮದ್ಯ ಮರಾಟಗಾರರು ನೀಡುವ ಲಂಚದಿಂದ ಜೀವನ ನಡೆಸುತ್ತಿದ್ದೀರಿ. ನಿಮಗೆ ಜೀವನ ನಡೆಸಲು ಸಂಬಳ ಸಾಕಾಗದಿದ್ದರೆ ರೈತರೆಲ್ಲ ಸೇರಿ ಮನೆಯಿಂದ ದೇಣಿಗೆ ಸಂಗ್ರಹಿಸಿ ನೀಡುತ್ತೇವೆ. ಆದರೆ, ಅಕ್ರಮ ಮದ್ಯ ಮರಾಟ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮನ್ನೇ ಜವಾಬ್ದಾರನನ್ನಾಗಿ ಮಾಡುತ್ತೇವೆ, ರೈತ ಸಂಘದವರೇ ಮುಂದೆ ನಿಂತು ಎಲ್ಲಾ ಕಡೆ ಮದ್ಯ ಮಾರಾಟ ಮಾಡುತ್ತೇವೆ.ಆಗ ನಮ್ಮ ಮೇಲೆ ಕೇಸ್ ಹಾಕಿ, ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನಾಗಲಿಂಗ ಪೋತದಾರ ಮಾತನಾಡಿದರು. ಸುಮಾರು 1 ಗಂಟೆ ಕಾಲ ರಸ್ತೆ ತಡೆ ನಡೆಸಿದ್ದರಿಂದ ಸಾರ್ವಜನಿಕರು ವಾಹನ ಸವಾರರು ಪರದಾಡಿದರು. ಸ್ಥಳದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಪಾಂಡುರಂಗ ಬೀರನಗಡ್ಡಿ, ವಾಸು ಪಂಡ್ರೋಳಿ, ಕುಮಾರ ಮರ್ದಿ, ಗೋಪಾಲ ಕೊಂಕನೂರ, ಮಂಜುನಾಥ ಪೂಜೇರಿ, ಸಿದ್ಲಿಂಗಪ್ಪ ಪೂಜೇರಿ, ವೀರಣ್ಣಾ ಸಸಾಲಟ್ಟಿ, ರಾಯಪ್ಪ ಗೌಡಪ್ಪನವರ, ಮಾಯಪ್ಪ ಹೆಗಡ್ಡೆ, ರಮೇಶ ತಿಗಡಿ, ಬೀರಪ್ಪಾ ತೋಳಿನವರ, ಲಾಲಸಾಬ ಶಿವಾಪೂರ ಹಾಗೂ ನೂರಾರು ರೈತರು, ಸಾರ್ವಜನಿಕರು ಹಾಜರಿದ್ದರು. ----

ಕೊಟ;-

ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಸುಮಾರು 200 ಜನ ಅಕ್ರಮ ಮದ್ಯ ಮಾರಾಟಗಾರರಿದ್ದಾರೆ. ಅವರು ಪ್ರತಿ ತಿಂಗಳು ಅಬಕಾರಿ ಇಲಾಖೆಗೆ ₹ 2 ರಿಂದ ₹ 3 ಲಕ್ಷ ಹಾಗೂ ಪೊಲೀಸ್ ಇಲಾಖೆಗೆ ₹ 2-3 ಲಕ್ಷ ಲಂಚ ನೀಡುತ್ತಿದ್ದಾರೆ. ಅದೇ ಕಾರಣಕ್ಕೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟವನ್ನು ತಡೆಯುತ್ತಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌