ಮಾಣಿ ಜನಭವನದಲ್ಲಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಸಪರಿವಾರ ಶ್ರೀರಾಮ ದೇವರ ಪ್ರತಿಷ್ಠಾ ವರ್ಧಂತಿ, ಮಂಗಳೂರು ಹೋಬಳಿಯ ವಾರ್ಷಿಕೋತ್ಸವ ಧರ್ಮ ಸಭೆ
ಪುತ್ತೂರು: ಜ್ಞಾನದ ದಾರಿಗೆ ಸ್ಥಾನ, ಧರ್ಮದ ಮಾರ್ಗಕ್ಕೆ ಸೂತ್ರದ ಅಗತ್ಯವಿದೆ. ಕಷ್ಟಗಳನ್ನು ಕೇಳುವ, ಉದ್ಧಾರಕ್ಕೆ ದಾರಿ ತೋರಿಸುವ ಜತೆಗೆ ಹತ್ತು ಹಲವು ಶುಭಚಿಂತನೆಗಳನ್ನು ಇಟ್ಟುಕೊಂಡು ಮಠ ನಿರ್ಮಾಣವಾಗಿದೆ. ಗುರು ಪರಂಪರೆ ಹಾಗೂ ಶಿಷ್ಯರು ಸಂಗಮಗೊಳ್ಳುವ ಮಠಕ್ಕೆ ವಿಶೇಷ ಮಹತ್ವವಿದೆ. ಮಠದ ಸತ್ವ, ಪ್ರೇರಣೆ ನಮ್ಮ ಒಳಗೆ ಬರಬೇಕು ಎಂದು ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.ಮಾಣಿ ಜನಭವನದಲ್ಲಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಸಪರಿವಾರ ಶ್ರೀರಾಮ ದೇವರ ಪ್ರತಿಷ್ಠಾ ವರ್ಧಂತಿ, ಮಂಗಳೂರು ಹೋಬಳಿಯ ವಾರ್ಷಿಕೋತ್ಸವ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ವೇದ ಶಾಸ್ತ್ರಗಳು ನಮ್ಮ ಮೂಲವಾಗಿದ್ದು, ನಮಗೆ ಅದರ ಅರಿವು ಇರಬೇಕು. ಸಮಾಜದಲ್ಲಿ ಧರ್ಮ ಪ್ರವೃತ್ತಿ ಜಾಗೃತವಾಗಿದೆ. ಪರಂಪರೆಗಳನ್ನು ಬಿಡಬಾರದು. ಮಠಕ್ಕೆ ಕೊಟ್ಟಿರುವುದು ಸಮಾಜಕ್ಕೆ ಅರ್ಪಣೆಯಾಗುತ್ತದೆ. ಮಠ ಯಾರನ್ನೂ ಏನನ್ನೂ ಕೇಳದೆ ಅದರಷ್ಟಕ್ಕೇ ನಡೆದುಕೊಂಡು ಹೋಗಬೇಕು ಎಂದ ಶ್ರೀಗಳು, ಪರಂಪರೆ ಅಡಕೆಯನ್ನು ಮಂಗಲವಾಗಿ ಕಂಡಿದೆ. ಆದರೆ ಬೇರೆಬೇರೆ ವಸ್ತುಗಳ ಸಹವಾಸದಿಂದ ಅಡಕೆಗೆ ಅಪಕೀರ್ತಿ ಬಂದಿದೆ ಎಂದು ಅಭಿಪ್ರಾಯಪಟ್ಟರು.ಸಮರ್ಪಣೆ, ವಿವಿಧ ಕಾರ್ಯಕ್ರಮ:ಶ್ರೀಕರಾರ್ಚಿತ ದೇವರಿಗೆ ಕನಕಾಭಿಷೇಕ, ಪೂಗ ಪೂಜೆ, ಮಹಾ ಗಣಪತಿ ಹವನ, ಪೂರ್ಣ ನವಗ್ರಹ ಶಾಂತಿ, ರಾಮತಾರಕ ಹವನ, ಆಂಜನೇಯ ಹವನ ನಡೆಯಿತು. ಆಂಜನೇಯ ದೇವರಿಗೆ ರಜತ ಕವಚದ ರುದ್ರಾಕ್ಷಿ ಮಾಲೆ ಸಮರ್ಪಣೆ ನಡೆಯಿತು. ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ ಮಾಡಿದರು. ನೂತನ ಗುರಿಕ್ಕಾರರಿಗೆ ಸಾಟಿ ಸನ್ನದು ಪ್ರದಾನ ಮಾಡಲಾಯಿತು. ರಾಮಕೃಷ್ಣ ಭಟ್ ಕುಕ್ಕಿನಡ್ಕ ರಾಮನೈವೇದ್ಯಕ್ಕೆ ಭತ್ತ ಸಮರ್ಪಣೆ ಮಾಡಿದರು. ರಘುರಾಮ ಭಟ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಯೋಜನೆಗೆ ಸಮರ್ಪಣೆಗಳು ನಡೆದವು.ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃ ಪ್ರಧಾನೆ ದೇವಿಕಾ ಶಾಸ್ತ್ರಿ, ಮಂಗಳೂರು ಮಂಡಲ ಅಧ್ಯಕ್ಷ ರಮೇಶ್ ಭಟ್, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅರವಿಂದ ದರ್ಬೆ, ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಸೇವಾ ಸಮಿತಿ ಕೋಶಾಧಿಕಾರಿ ಮೈಕೆ ಗಣೇಶ್ ಭಟ್, ಕಾರ್ಯದರ್ಶಿ ವೇಣುಗೋಪಾಲ ಕೆದ್ಲ ಮತ್ತಿತರರು ಉಪಸ್ಥಿತರಿದ್ದರು.
ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವಲೋಕನ ನಡೆಸಿ, ವಾರ್ಷಿಕ ವರದಿ ವಾಚಿಸಿದರು. ಪತ್ರಕರ್ತ ಉದಯಶಂಕರ ನೀರ್ಪಾಜೆ, ಸುರೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.