ವ್ಯಕ್ತಿಯು ಅಶೋಕನಗರದ ಒಂದನೇ ಕ್ರಾಸ್‌ನಲ್ಲಿರುವ ಮನೆಯ ಕಾಂಪೌಂಡ್‌ನೊಳಗೆ ಓಡಿಹೋಗಿದ್ದು, ಮನೆಯ ಹಿಂಭಾಗದ ಗೋದಾಮು ಬಳಿ ಪೊಲೀಸರು ಆತನನ್ನು ಸೆರೆಹಿಡಿದರು.
ಕನ್ನಡಪ್ರಭ ವಾರ್ತೆ ಮಂಡ್ಯನಿಷೇಧಿತ ಡ್ರಗ್ಸ್‌ನ್ನು ಹೊಂದಿದ್ದ ಕೇರಳ ಮೂಲದ ಮೂವರನ್ನು ಮಂಡ್ಯ ಪೂರ್ವಠಾಣೆ ಪೊಲೀಸರು ಬಂಧಿಸಿದ್ದು, ಅವರ ಬಳಿ ಇದ್ದ ಎಂಡಿಎಂಎ ಡ್ರಗ್ಸ್‌ನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಗಸ್ತು ತಿರುಗುವ ವೇಳೆ ಅನುಮಾನಾಸ್ಪದವಾಗಿ ಕಾರಿನಿಂದ ಇಳಿದು ಓಡಿ ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಹಿಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಕೇರಳದ ಪಾಲಕ್ಕಾಡ್ ಜಿಲ್ಲೆಯ ಓಟ್ಟಂಪಾಲಂ ತಾಲೂಕಿನ ಕಪ್ಪೂರು ಗ್ರಾಮದ ಕೆ.ಎಂ.ಮುನೀರ್ (34), ಕೆ.ಎ.ಮೊಹಮ್ಮದ್ ಆಶಿಕ್ ಮತ್ತು ಕೆ.ಬಿ.ಅರುಣ್ ಬಂಧಿತ ಆರೋಪಿಗಳಾಗಿದ್ದಾರೆ. ಎರಡು ಪ್ಲಾಸ್ಟಿಕ್ ಕವರ್‌ನಲ್ಲಿದ್ದ ಡ್ರಗ್ಸ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ಸಂಜೆ 8.40ರ ಸಮಯದಲ್ಲಿ ಪೂರ್ವಠಾಣೆ ಪಿಎಸ್‌ಐ ಬಿ.ಎಸ್.ವೆಂಕಟೇಶ್ ಅವರು ಗಸ್ತು ತಿರುಗುವ ವೇಳೆ ನಗರದ ಮಹಾವೀರ ಸರ್ಕಲ್ ಬಳಿ ಬಿಳಿಯ ಬಣ್ಣದ ಕಾರು ನಿಂತಿತ್ತು. ಪೊಲೀಸ್ ಜೀಪ್‌ನ್ನು ಕಂಡ ಕಾರಿನೊಳಗಿದ್ದ ವ್ಯಕ್ತಿಯೊಬ್ಬ ಇಳಿದು ಬ್ಯಾಗ್‌ನೊಂದಿಗೆ ವಿ.ವಿ.ರಸ್ತೆ ಕಡೆ ಓಡಿಹೋದನು. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ಹಿಂಬಾಲಿಸಿಕೊಂಡು ಹೋದರು. ಆ ವ್ಯಕ್ತಿಯು ಅಶೋಕನಗರದ ಒಂದನೇ ಕ್ರಾಸ್‌ನಲ್ಲಿರುವ ಮನೆಯ ಕಾಂಪೌಂಡ್‌ನೊಳಗೆ ಓಡಿಹೋಗಿದ್ದು, ಮನೆಯ ಹಿಂಭಾಗದ ಗೋದಾಮು ಬಳಿ ಪೊಲೀಸರು ಆತನನ್ನು ಸೆರೆಹಿಡಿದರು. ನಂತರ ಆತನನ್ನು ವಿಚಾರಣೆಗೊಳಪಡಿಸಿದಾಗ ಆತ ಕೇರಳ ರಾಜ್ಯಕ್ಕೆ ಸೇರಿದ ವ್ಯಕ್ತಿ ಎಂಬುದು ಕಂಡುಬಂದಿತು. ಆತ ಮಲಯಾಳಂ ಮಾತನಾಡುತ್ತಿದ್ದರಿಂದ ಮಲಯಾಳಂ ಗೊತ್ತಿದ್ದ ಗುತ್ತಲಿನಲ್ಲಿರುವ ಜೀನತ್ ಹೋಟೆಲ್ ಮಾಲೀಕ ಸುಹೇಲ್ ಅವರನ್ನು ಕರೆಸಿ ಅವರ ಮುಖಾಂತರ ವಿಚಾರಿಸಿದಾಗ ಆತ ಕೆ.ಎಂ.ಮುನೀರ್ ಎನ್ನುವುದು ತಿಳಿದುಬಂದಿತು.ಆತನ ಬಳಿ ಎಂಡಿಎಂಎ ಡ್ರಗ್ಸ್ ಇದ್ದ ಕಾರಣ ಪೊಲೀಸರನ್ನು ನೋಡಿ ಗಾಬರಿಗೊಂಡು ಓಡಿಹೋಗಿದ್ದಾಗಿ ತಿಳಿಸಿದನು. ಆತನ ಬ್ಯಾಗ್‌ನ್ನು ತಪಾಸಣೆ ಮಾಡಿದಾಗ ಎರಡು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿದ್ದ ಎಂಡಿಎಂಎ ಡ್ರಗ್ಸ್ ಇರುವುದು ಪತ್ತೆಯಾಯಿತು. ತನ್ನ ಜೊತೆ ಆತನ ಸ್ನೇಹಿತರಾದ ಕೇರಳ ರಾಜ್ಯದ ಕೆ.ಎ.ಮೊಹಮ್ಮದ್ ಆಶಿಕ್ ಮತ್ತು ಕೆ.ಬಿ.ಅರುಣ್ ಅವರೂ ಸಹ ಬಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದನು.
ಆತ ನೀಡಿದ ಮಾಹಿತಿಯಂತೆ ಮಹಾವೀರ ಸರ್ಕಲ್ ಬಳಿ ಕಾರಿನೊಳಗಿದ್ದ ಇಬ್ಬರು ಸೇರಿದಂತೆ ಮೂವರನ್ನು ಬಂಧಿಸಿದರು. ಕಾರು ಮತ್ತು ಡ್ರಗ್ಸ್‌ನ್ನು ವಶಕ್ಕೆ ಪಡೆದುಕೊಂಡು ಮೂವರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಡ್ರಗ್ಸ್‌ನ್ನು ಕೇರಳದಿಂದ ತಂದು ಇಲ್ಲಿ ಮಾರಾಟ ಮಾಡುವುದಕ್ಕೆ ಸಂಚು ನಡೆಸಿದ್ದರೋ ಅಥವಾ ಬೆಂಗಳೂರಿನಿಂದ ಕೇರಳಕ್ಕೆ ಡ್ರಗ್ಸ್ ಸಾಗಣೆ ಮಾಡುತ್ತಿದ್ದರೋ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.ಡ್ರಗ್ಸ್ ಇಟ್ಟುಕೊಂಡು ಮಹಾವೀರ ಸರ್ಕಲ್ ಬಳಿ ಇದ್ದುದೇಕೆ. ಇಲ್ಲಿನ ವ್ಯಕ್ತಿಗಳಿಗೆ ಡ್ರಗ್ಸ್‌ನ್ನು ಮಾರಾಟ ಮಾಡುವ ಉದ್ದೇಶದಿಂದ ನಿಂತಿದ್ದರೋ ಎಂಬ ಬಗ್ಗೆಯೂ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ. ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಪೂರ್ವ ಪೊಲೀಸ್ ಠಾಣೆ ಪಿಎಸ್‌ಐ ಬಿ.ವೆಂಕಟೇಶ್ ಅವರೊಂದಿಗೆ ಎಎಸ್‌ಐ ಲಿಂಗರಾಜು, ಪೇದೆಗಳಾದ ಉಮರ್ ಅಹಮದ್, ಅನಿಲ್‌ಕುಮಾರ್, ದಕ್ಷಿಣಮೂರ್ತಿ ನೆರವಾಗಿದ್ದರು. ಪೂರ್ವಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.