ಅರಣ್ಯ ಇಲಾಖೆ ವಿರುದ್ಧ ರೈತರ ಪ್ರತಿಭಟನೆ

KannadaprabhaNewsNetwork | Published : Apr 18, 2025 12:34 AM

ಸಾರಾಂಶ

ಚಾಮರಾಜನಗರದ ತಹಸೀಲ್ದಾರ್ ಕಚೇರಿಯ ಮುಂದೆ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ನೇತೃತ್ವದಲ್ಲಿ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ವಾಸಿಸುವ 200ಕ್ಕೂ ಹೆಚ್ಚು ರೈತರಿಗೆ ಸಾಗುವಳಿ ನೀಡಿರುವ ತಾಲೂಕಿನ ಪುಣಜನೂರು ಹಾಗೂ ಹರದನಹಳ್ಳಿ ಸ್ಟೇಟ್ ಫಾರೆಸ್ಟ್‌ನಲ್ಲಿರುವ ಜಮೀನಿನಲ್ಲಿ ವ್ಯವಸಾಯ ಮಾಡಲು ಅರಣ್ಯ ಇಲಾಖೆಯವರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಅರೋಪಿಸಿ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ರೈತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಹಸೀಲ್ದಾರ್ ಕಚೇರಿಯ ಮುಂದೆ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ನೇತೃತ್ವದಲ್ಲಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ನಗರದ ಅಂಬೇಡ್ಕರ್ ಬಡಾವಣೆಯ 127 ಮಂದಿಗೆ ಪುಣಜನೂರು, ಹರದನಹಳ್ಳಿ ಸ್ಟೇಟ್ ಫಾರೆಸ್ಟ್ ವ್ಯಾಪ್ತಿಯ ಸವೇ ನಂ.3 ಮತ್ತು 5ರಲ್ಲಿ 2 ಎಕರೆ ಜಮೀನನ್ನು 1973-74ರಲ್ಲಿ ಅಂದಿನ ಅರಣ್ಯ ಸಚಿವರಾಗಿದ್ದ ಬಿ.ರಾಚಯ್ಯ ಮಂಜೂರು ಮಾಡಿಕೊಟ್ಟಿದ್ದರು. ಈ ಜಮೀನನ್ನು ಹದ್ದು ಬಸ್ತ್ ಮಾಡಿ, ಜಾಗ ಗುರುತಿಸಿ, ನಮಗೆ ವ್ಯವಸಾಯ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಅನೇಕ ಬಾರಿ ಸಚಿವರು, ಸಿಎಂ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, 50 ವರ್ಷಗಳ ಹಿಂದೆಯೇ ನಮ್ಮ ಬೀದಿಯ ದಲಿತ ಸಮುದಾಯದ ಬಂಧುಗಳಿಗೆ ಎಲ್‌ಡಿಆರ್ ಪಿಆರ್ 56/73-74 ರದಲ್ಲಿ ತಲಾ 2ಎಕರೆ ಜಮೀನು ಮಂಜೂರಾಗಿದೆ. ಈ ಜಮೀನು ಅರಣ್ಯ ವ್ಯಾಪ್ತಿಯಲ್ಲಿದೆ ಎಂದು ಅರಣ್ಯ ಇಲಾಖೆಯವರು ವ್ಯವಸಾಯ ಮಾಡಲು ಬಿಡುವುದಿಲ್ಲ. ಈ ಬಗ್ಗೆ ನಮ್ಮ ಹೋರಾಟದ ಫಲವಾಗಿ ಕಂದಾಯ, ಸರ್ವೇ, ಅರಣ್ಯ ಇಲಾಖೆಯವರು ಜಂಟಿ ಸರ್ವೇ ಮಾಡಿ, ಎಲ್ಲೇ ಗುರುತಿಸಿದ್ದಾರೆ. ಈ ಜಮೀನಿಗಳ ದುರಸ್ತಿ ಪಡಿಸಿ, ಫಲಾನುಭವಿಗಳ ಹೆಸರಿಗೆ ಆರ್‌ಟಿಸಿ ಬರುವಂತೆ ಮಾಡಬೇಕು. ಜೊತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನಮ್ಮ ತಂಟೆಗೆ ಬರದಂತೆ ಎಚ್ಚರಿಕೆ ನೀಡಬೇಕು. ಎಲ್ಲ ರೈತರು ತಮ್ಮ ಜಮೀನುಗಳಿಗೆ ಬೇಲಿ ಹಾಕಿಕೊಳ್ಳಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದು ಧರಣಿ ಕುಳಿತರು.

ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಗಿರಿಜಾ, ಪ್ರತಿಭಟನಾಕಾರ ಮನವೊಲಿಸಿ, ಈಗಾಗಲೇ ಈ ಸಂಬಂಧ ಅನೇಕ ಸಭೆಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಆಗಿದೆ. ಸಾಗುವಳಿ ಪತ್ರ ಹೊಂದಿರುವ ರೈತರು ಉಳುಮೆ ಮಾಡಲು ಯಾವುದೇ ತೊಂದರೆ ಇಲ್ಲ. ಅರಣ್ಯ ಇಲಾಖೆಯವರು ತೊಂದರೆ ಕೊಟ್ಟರೆ ನಮಗೆ ತಿಳಿಸಿ, ಇಂದು ಸಾಯಂಕಾಲದ ವರೆಗೆ ನಮ್ಮ ಕಚೇರಿಯಿಂದ ಪತ್ರ ನೀಡುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷ ಸಿ.ಎಂ. ಶಿವಣ್ಣ, ಆಟೋ ಉಮೇಶ್, ಯ. ಮಹದೇವಯ್ಯ, ಯ. ನಾಗರಾಜು, ಉಮೇಶ್‌ಕುಮಾರ್, ಸಿದ್ದಮ್ಮ, ಮಾದಮ್ಮ, ಬ್ಯಾಡಮೂಡ್ಲು ಬಸವಣ್ಣ, ಹಾಗೂ ನಗರದ ಡಾ.ಅಂಬೇಡ್ಕರ್ ಬಡಾವಣೆಯಲ್ಲಿರುವ ಸಾಗುವಳಿ ಹೊಂದಿರುವ 100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

Share this article