₹1.66 ಕೋಟಿ ಡ್ರಗ್ಸ್‌ ಜಪ್ತಿ: ಇಬ್ಬರು ವಿದೇಶಿಗರು ಸೇರಿ ಐವರ ಸೆರೆ

KannadaprabhaNewsNetwork | Published : Jan 13, 2024 1:36 AM

ಸಾರಾಂಶ

ವಿಜಯಪುರ ಜಿಲ್ಲೆಯಿಂದ ಗಾಂಜಾ ತಂದು ಬೆಂಗಳೂರಲ್ಲಿ ಮಾರಾಟ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಂಬೇಡ್ಕರ್ ನಗರದ ವಿಜಯ್‌ ಕುಮಾರ್‌, ವಿಜಯಪುರ ಜಿಲ್ಲೆಯ ವಿಜಯ್‌ ಕುಮಾರ್ ಅಲಿಯಾಸ್‌ ಪವರ್‌, ಐವರಿಕೋಸ್ಟ್‌ ದೇಶದ ಅರ್ಮೆಲ್ ಬಂಧಿತರಾಗಿದ್ದು, ಆರೋಪಿಗಳಿಂದ 203.46 ಗ್ರಾಂ ಎಂಡಿಎಂಎ, 156 ಗ್ರಾಂ ಎಕ್ಸ್‌ಟೈಸಿ ಹಾಗೂ 18.5 ಕೇಜಿ ಗಾಂಜಾ ಸೇರಿದಂತೆ ₹1.66 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಐವರನ್ನು ಪ್ರತ್ಯೇಕವಾಗಿ ಬಂಧಿಸಿ ₹1.66 ಕೋಟಿ ಮೌಲ್ಯದ ಡ್ರಗ್ಸನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಂಬೇಡ್ಕರ್ ನಗರದ ವಿಜಯ್‌ ಕುಮಾರ್‌, ವಿಜಯಪುರ ಜಿಲ್ಲೆಯ ವಿಜಯ್‌ ಕುಮಾರ್ ಅಲಿಯಾಸ್‌ ಪವರ್‌, ಐವರಿಕೋಸ್ಟ್‌ ದೇಶದ ಅರ್ಮೆಲ್‌, ಬೆಂಗಳೂರಿನ ಮುನೇಶ್ವರ ಲೇಔಟ್‌ನ ಇಕ್ರಾಂ ಅಹ್ಮದ್‌ ಖಾನ್‌, ಸಾದಿಕ್‌ವುಲ್ಲಾ, ಮೊಹಮ್ಮದ್‌ ತಬ್ರೇಜ್‌, ನೈಜೀರಿಯಾ ದೇಶದ ನ್ಯೂಚೇವುಬೆ ಡೋನಟ್ಸ್ ಅನೀಸ್‌ ಬಂಧಿತರಾಗಿದ್ದು, ಆರೋಪಿಗಳಿಂದ 203.46 ಗ್ರಾಂ ಎಂಡಿಎಂಎ, 156 ಗ್ರಾಂ ಎಕ್ಸ್‌ಟೈಸಿ ಹಾಗೂ 18.5 ಕೇಜಿ ಗಾಂಜಾ ಸೇರಿದಂತೆ ₹1.66 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ನಗರದಲ್ಲಿ ಈ ಐವರು ಪ್ರತ್ಯೇಕವಾಗಿ ಡ್ರಗ್ಸ್ ಮಾರಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮಹಾರಾಷ್ಟ್ರ ಗಡಿಯ ಕಾಡಲ್ಲಿ ಗಾಂಜಾ ಕೃಷಿ:

ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ ಗಡಿಯ ಅರಣ್ಯದಲ್ಲಿ ನೂರಾರು ಎಕೆರೆಯಲ್ಲಿ ಕೆಲವರು ಗಾಂಜಾ ಬೇಸಾಯ ನಡೆಸಿದ್ದು, ಅಲ್ಲಿಂದ ನಗರದ ಪೆಡ್ಲರ್‌ಗಳಿಗೆ ಗಾಂಜಾ ಪೂರೈಕೆಯಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ವೀರೇಶ್ ತಂಡವು, ವಿಜಯಪುರದ ನಗರದ ಪೆಡ್ಲರ್‌ಗಳಿಗೆ ಗಾಂಜಾ ಸರಬರಾಜಿಗೆ ಬಂದಾಗ ಗಿರಿನಗರ ಬಳಿ ವಿಜಯ್ ಕುಮಾರ್ ಹಾಗೂ ವಿಜಯ್‌ ಕುಮಾರ್‌ನನ್ನು ಬಂಧಿಸಿತು. ಬಳಿಕ ವಿಚಾರಣೆ ವೇಳೆ ಗಾಂಜಾ ಕೃಷಿ ಸಂಗತಿ ಬೆಳಕಿಗೆ ಬಂದಿದೆ. ಈ ಆರೋಪಿಗಳ ಮಾಹಿತಿ ಆಧರಿಸಿ ವಿಜಯಪುರ ಜಿಲ್ಲೆಗೆ ತೆರಳಿ ಕಾರ್ಯಾಚರಣೆ ನಡೆಸಿತು. ಆದರೆ ಪೂರೈಕೆದಾರರು ತಪ್ಪಿಸಿಕೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ.ಎಸ್‌ಐಯನ್ನೇ ತಳ್ಳಿ ಪರಾರಿ ಆಗಿದ್ದ ಪೆಡ್ಲರ್‌:

ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಐವರಿ ಕೋಸ್ಟ್‌ನ ಅರ್ಮೆಲ್‌, ಚಿಕ್ಕಜಾಲ ಸಮೀಪ ಕೊಂಡಯ್ಯ ಲೇಔಟ್‌ನಲ್ಲಿ ನೆಲೆಸಿದ್ದ. ಆನ್‌ಲೈನ್ ಮೂಲಕ ಆತ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದ. ವಾಟ್ಸ್‌ ಆ್ಯಪ್‌ನಲ್ಲಿ ಡ್ರಗ್ಸ್ ಬುಕ್ ಮಾಡಿದರೆ ನಿಗದಿತ ಸ್ಥಳದಲ್ಲಿ ಡ್ರಗ್ಸ್ ತಂದಿಟ್ಟು ಅರ್ಮೆಲ್ ತೆರಳುತ್ತಿದ್ದ. ಆ ಸ್ಥಳಕ್ಕೆ ತೆರಳಿ ಗ್ರಾಹಕರು ಡ್ರಗ್ಸ್ ತೆಗೆದುಕೊಂಡು ಹೋಗುತ್ತಿದ್ದರು. ಕೆಲ ತಿಂಗಳ ಹಿಂದೆ ಅರ್ಮೆಲ್‌ ಡ್ರಗ್ಸ್ ದಂಧೆ ಬಗ್ಗೆ ಮಾಹಿತಿ ಪಡೆದು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಲು ತೆರಳಿದ್ದರು. ಆ ವೇಳೆ ಪಿಎಸ್‌ಐ ರಾಜೇಶ್‌ ಗೌಡ ಅವರನ್ನು ತಳ್ಳಿ ಅರ್ಮೆಲ್ ತಪ್ಪಿಸಿಕೊಂಡಿದ್ದ. ಕೊನೆಗೆ ಆತನ ಬೆನ್ನ ಬಿದ್ದು ಸಿಸಿಬಿ ಪಿಐ ವೀರೇಶ್ ತಂಡ ಸೆರೆಹಿಡಿಯುವಲ್ಲಿ ಸೆರೆಹಿಡಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕೆಲ ತಿಂಗಳಿಂದ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಮತ್ತೊಬ್ಬ ವಿದೇಶಿ ಪ್ರಜೆ ಅನೀಸ್‌ನನ್ನು ಇನ್‌ಸ್ಪೆಪೆಕ್ಟರ್ ದೀಪಕ್ ತಂಡ ಬಂಧಿಸಿದೆ.

Share this article