ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ಮೂರು ದಿನಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ನಾಲ್ವರು ಬ್ಯಾಂಕಾಕ್ ಪ್ರವಾಸಿಗರನ್ನು ಸೆರೆಹಿಡಿದು 10.5 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹಾಗೆಯೇ ನಗರ ಪೊಲೀಸರು, ಪ್ರತ್ಯೇಕವಾಗಿ ಇಬ್ಬರು ವಿದೇಶಿ ಪ್ರಜೆಗಳು ಸೇರಿ 11 ಮಂದಿಯನ್ನು ಬಂಧಿಸಿ 5.14 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಯಲಹಂಕ ಉಪನಗರ, ಆಡುಗೋಡಿ, ಭಾರತಿನಗರ, ಜಾಲಹಳ್ಳಿ ಹಾಗೂ ಪುಲಿಕೇಶಿ ನಗರ ಠಾಣೆಗಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ 2.07 ಕೆಜಿ ಎಂಡಿಎಂಎ, 31.396 ಕೆಜಿ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ ಹಾಗೂ 162 ಗ್ರಾಂ ಹೆರಾಯಿನ್ ಸೇರಿದಂತೆ 2.25 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಆದರೆ ಪ್ರಸ್ತುತ ಮಾರುಕಟ್ಟೆದಲ್ಲಿ ಆ ಡ್ರಗ್ಸ್ ಮೌಲ್ಯವು 5.14 ಕೋಟಿ ಇದೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಪಂಜಾಬ್ ಗ್ಯಾಂಗ್ ಬಳಿ 2 ಕೋಟಿ ಡ್ರಗ್ಸ್:ನಗರದಲ್ಲಿ ಡ್ರಗ್ಸ್ ದಂಧೆಗಿಳಿದಿದ್ದ ನೇಪಾಳ ಪ್ರಜೆ ಸೇರಿ ಮೂವರನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್‌ನಿಂದ ಡ್ರಗ್ಸ್ ತಂದು ನಗರದಲ್ಲಿ ಸಿಂಗ್ ದಂಧೆ ನಡೆಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ಪಿಎಸ್ಐ ತಿಮ್ಮರಾಯ, ರಾಘವೇಂದ್ರ ತಂಡ ದಾಳಿ ನಡೆಸಿದೆ. ಪಂಜಾಬ್ ಮೂಲದ ಸಿಂಗ್ ಈ ತಂಡದ ಪ್ರಮುಖನಾಗಿದ್ದು, ತನ್ನೂರಿನಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ನಗರದಲ್ಲಿ ಆತ ಬಿಕರಿ ಮಾಡುತ್ತಿದ್ದ. ಈ ದಂಧೆಗೆ ಹಣದಾಸೆ ತೋರಿಸಿ ಅರ್ಜುನ್‌ನನ್ನು ಆತ ಬಳಸಿಕೊಂಡಿದ್ದಾನೆ. ಇನ್ನು ಸಂತೋಷ್ ವೃತ್ತಿಪರ ಪೆಡ್ಲರ್ ಆಗಿದ್ದು, ಆತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ. ಎರಡು ವರ್ಷದ ಹಿಂದೆ ಜೈಲಿನಿಂದ ಹೊರ ಬಂದಿದ್ದ ಸಂತೋಷ್ ಚಲನವಲನದ ಮೇಲೆ ನಿಗಾ ವಹಿಸಲಾಯಿತು. ಹೀಗಿದ್ದರೂ ಪೊಲೀಸರ ಭಯವಿಲ್ಲದೆ ಆತ ಮತ್ತೆ ಡ್ರಗ್ಸ್ ದಂಧೆಗಿಳಿದಿದ್ದ. ಇತ್ತೀಚೆಗೆ ಗಾಂಜಾ ಮಾರಾಟ ಮಾಡುವ ವೇಳೆ ಸಂತೋಷ್ ಖಾಕಿ ಬಲೆಗೆ ಬಿದ್ದಿದ್ದಾನೆ.
ಪರಿಚಯಸ್ಥ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸುತ್ತಿದ್ದ ಸ್ಯಾಮ್ಯುಯಲ್, ಗ್ರಾಹಕರು ಹೇಳಿದ ಸ್ಥಳಕ್ಕೆ ಡ್ರಗ್ಸ್ ಪೂರೈಸುತ್ತಿದ್ದ. ನಿರ್ದಿಷ್ಟ ಸ್ಥಳದಲ್ಲಿ ಡ್ರಗ್ಸ್ ಇಟ್ಟು ಆರೋಪಿ ಬರುತ್ತಿದ್ದ .ಆನ್‌ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ಗ್ರಾಹಕರ ಜತೆ ವ್ಯಾಟ್ಸಪ್ ಕರೆಗಳಲ್ಲಿ ಮಾತ್ರ ಸಂಪರ್ಕದಲ್ಲಿರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ ಪುಲಕೇಶಿನಗರ, ಭಾರತಿನಗರ ಹಾಗೂ ಜಾಲಹಳ್ಳಿ ಠಾಣೆಗಳ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಏಳು ಮಂದಿ ಗಾಂಜಾ ದಂಧೆಕೋರರು ಬಂಧಿತರಾಗಿದ್ದಾರೆ.