ವಿದೇಶದಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಕಾರಣಕ್ಕಾಗಿ ಉದ್ಯೋಗ ಕಳೆದುಕೊಂಡಿದ್ದ ಪತಿ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡರೆ, ಪತಿಯ ಅಗಲಿಕೆಯ ನೋವಿನಿಂದ ಪತ್ನಿ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದೇಶದಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಕಾರಣಕ್ಕಾಗಿ ಉದ್ಯೋಗ ಕಳೆದುಕೊಂಡಿದ್ದ ಪತಿ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡರೆ, ಪತಿಯ ಅಗಲಿಕೆಯ ನೋವಿನಿಂದ ಪತ್ನಿ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ನಗರದ ಥಣಿಸಂದ್ರದ ಭಾರತಿ ಸಿಟಿ ಆವರಣದ ನಿಕ್ಕೋ ಹೋಮ್ಸ್ ಅಪಾರ್ಟ್‌ಮೆಂಟ್ ನಿವಾಸಿಗಳಾದ ಭಾನುಚಂದ್ರ ರೆಡ್ಡಿ (32) ಹಾಗೂ ಅವರ ಪತ್ನಿ ಬೀಬಿ ಶಾಜಿಯಾ ಸಿರಾಜ್ (31) ಮೃತ ದುರ್ದೈವಿಗಳು.ಅಪಾರ್ಟ್‌ಮೆಂಟ್‌ನ 8ನೇ ಹಂತದಲ್ಲಿರುವ ಫ್ಲ್ಯಾಟ್‌ನಲ್ಲಿ ಸೋಮವಾರ ಬೆಳಗ್ಗೆ ರೆಡ್ಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತವರು ಮನೆಗೆ ಹೋಗಿದ್ದ ಶಾಜಿಯಾ ರಾತ್ರಿ ಮನೆಗೆ ಮರಳಿದಾಗ ಪತಿ ಸಾವಿನ ವಿಚಾರ ಗೊತ್ತಾಗಿದೆ. ಇದರಿಂದ ಆಘಾತಗೊಂಡ ಆಕೆ, ಸೀದಾ 17ನೇ ಮಹಡಿಗೆ ತೆರಳಿ ಜಿಗಿದು ಪ್ರಾಣ ತ್ಯಾಗ ಮಾಡಿದ್ದಾಳೆ.
ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ ಕಂಡು ಪೊಲೀಸರಿಗೆ ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದಾಗ ಫ್ಲ್ಯಾಟ್‌ನಲ್ಲಿ ಮೃತಳ ಪತಿ ಭಾನು ರೆಡ್ಡಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ದುರಂತ ಅಂತ್ಯ:
ತಮ್ಮ ಪೋಷಕರ ವಿರೋಧದ ಮಧ್ಯೆ 9 ವರ್ಷಗಳ ಹಿಂದೆ ತೆಲಂಗಾಣ ರಾಜ್ಯದ ಹೈದರಾಬಾದ್ ನಗರದ ಭಾನುಚಂದ್ರ ರೆಡ್ಡಿ ಹಾಗೂ ಶಾಜಿಯಾ ಪ್ರೇಮ ವಿವಾಹವಾಗಿದ್ದರು. ಆದರೆ ರಿಜಿಸ್ಟರ್ಡ್ ಮ್ಯಾರೇಜ್ ಆಗಿದ್ದ ಅವರು ತಮ್ಮ ಮದುವೆ ಸಂಗತಿಯನ್ನು ಪೋಷಕರಿಗೆ ತಿಳಿಸದೆ ಗೌಪ್ಯವಾಗಿಟ್ಟಿದ್ದರು. ಹೈದರಾಬಾದ್‌ನ ನಗರದಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವಾಗ ರೆಡ್ಡಿ ಹಾಗೂ ಶಾಜಿಯಾ ಪರಸ್ಪರ ಪರಿಚಿತರಾಗಿದ್ದರು. ಬಳಿಕ ಇಬ್ಬರಲ್ಲಿ ಪ್ರೇಮವಾಯಿತು. ಆದರೆ ಧರ್ಮ ಮುಂದಿಟ್ಟು ಹೆತ್ತವರು ವಿರೋಧಿಸಿದಾಗ ಈ ಪ್ರೇಮಿಗಳು ಕಾನೂನಿನ ಮೂಲಕ ದಾಂಪತ್ಯದ ಬೆಸುಗೆ ಹಾಕಿದ್ದರು.
ಮದುವೆ ಬಳಿಕ ಮೂರು ವರ್ಷಗಳ ಹಿಂದೆ ಅಮೇರಿಕಾಕ್ಕೆ ತೆರಳಿ ಕೈತುಂಬ ಸಂಬಳದ ಉದ್ಯೋಗಕ್ಕೆ ಭಾನುರೆಡ್ಡಿ ಸೇರಿದ್ದ. ಇತ್ತ ಹೈದರಾಬಾದ್‌ನಲ್ಲಿ ಶಾಜಿಯಾ ಕೆಲಸ ಮುಂದುವರಿಸಿದ್ದರು. ಈ ಪ್ರೇಮಿಗಳ ಬದುಕು ಖುಷಿಯಿಂದ ಸಿಂಗಾರವಾಗಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು. ‘ಎಐ’ ರೂಪದಲ್ಲಿ ಅವರ ಸುಂದರ ಬದುಕಿಗೆ ಬೆಂಕಿ ಬಿದ್ದು ಭವಿಷ್ಯ ಜೀವನದ ಕನಸುಗಳು ಸುಟ್ಟು ಹೋದವು. ಅನಿರೀಕ್ಷಿತವಾಗಿ ತನ್ನ ಬದುಕಿನಲ್ಲಿ ಎದುರಾದ ಸವಾಲು ಭಾನು ರೆಡ್ಡಿ ಕಂಗೆಡಿಸಿತು. ವಾರ್ಷಿಕ ಒಂದು ಕೋಟಿ ರು.ವರೆಗೆ ಪ್ಯಾಕೇಜ್ ವೇತನ ಪಡೆಯುತ್ತಿದ್ದ ಉದ್ಯೋಗವನ್ನು ಆತ ಕಳೆದುಕೊಂಡ. ಎಐ ಸೃಷ್ಟಿಸಿದ ಆರ್ಥಿಕ ಹಿಂಜರಿತದಿಂದ ರೆಡ್ಡಿಯನ್ನು ಆತನ ಕಂಪನಿ ಕೆಲಸದಿಂದ ವಜಾಗೊಳಿಸಿತ್ತು.ಈ ಕಷ್ಟದಲ್ಲಿ ಪತಿ ಬೆನ್ನಿಗೆ ಶಾಜಿಯಾ ನಿಂತಳು. ಕೊನೆಗೆ ಅಮೇರಿಕಾ ತೊರೆದು ಮರಳಿದ ರೆಡ್ಡಿ, ಹೈದರಾಬಾದ್‌ಗೆ ಹೋಗದೆ ಬೆಂಗಳೂರಿಗೆ ಬಂದಿಳಿದ. ಬಳಿಕ ಪತ್ನಿಯನ್ನು ನಗರಕ್ಕೆ ಕರೆಸಿಕೊಂಡ ಆತ, ಥಣಿಸಂದ್ರದ ನಿಕ್ಕೋ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದರು. ಆದರೆ ಲಕ್ಷ ಲಕ್ಷ ಸಂಬಳದ ಉದ್ಯೋಗ ಕಳೆದುಕೊಂಡಿದ್ದು ಭಾನು ರೆಡ್ಡಿ ಮಾನಸಿಕ ಆಘಾತವಾಯಿತು. ಇದರಿಂದ ಖಿನ್ನತೆಗೊಳಗಾದ ಆತನಲ್ಲಿ ಹಲವು ಆರೋಗ್ಯ ಸಮಸ್ಯೆ ಎದುರಾದವು. ಈ ಸಮಸ್ಯೆಯಿಂದ ಆತ್ಮಹತ್ಯೆಗೆ ಆತ ಯತ್ನಿಸಿದ. ಆಗ ಪತಿಗೆ ಶಾಜಿಯಾ ಧೈರ್ಯ ತುಂಬಿದಳು. ಹೀಗಿದ್ದರೂ ರೆಡ್ಡಿ ಮಾನಸಿಕವಾಗಿ ಸುಧಾರಣೆ ಕಂಡಿರಲಿಲ್ಲ ಎಂದು ತಿಳಿದು ಬಂದಿದೆ.ಆತ್ಮಹತ್ಯೆಗೆ ನಿರ್ಧಾರವಾರದ ಹಿಂದೆ ತವರಿಗೆ ಶಾಜಿಯಾ ತೆರಳಿದ್ದಳು. ಆಗ ಮನೆಯಲ್ಲಿ ಏಕಾಂಗಿಯಾಗಿದ್ದ ರೆಡ್ಡಿ, ತನ್ನಿಂದ ಪತ್ನಿ ಕಷ್ಟಪಡುತ್ತಿದ್ದಾಳೆ ಎಂದು ಭಾವಿಸಿ ಆತ್ಮಹತ್ಯೆಗೆ ಯೋಜಿಸಿದ್ದಾನೆ. ಅಂತೆಯೇ ಶಾಜಿಯಾ ಸೋಮವಾರ ಮರಳುವಾಗ ಸಂಗತಿ ತಿಳಿದ ಆತ, ಫ್ಲ್ಯಾಟ್‌ನ ಮುಂಬಾಗಿಲು ಬೀಗ ಹಾಕದೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ನಿರಂತರವಾಗಿ ಕರೆ ಮಾಡಿದರೂ ಪತಿ ಪ್ರತಿಕ್ರಿಯಿಸದೆ ಹೋದಾಗ ಶಾಜಿಯಾಳಿಗೆ ಆತಂಕವಾಗಿದೆ. ತಕ್ಷಣವೇ ರಾತ್ರಿ ಮನೆಗೆ ಮರಳಿದ ಆಕೆ, ಮುಂಬಾಗಿಲು ದೂಡಿ ಮನೆಯೊಳಗೆ ಪ್ರವೇಶಿಸಿದ್ದಾಳೆ. ಆಗಲೂ ರೆಡ್ಡಿ ಸುಳಿವಿಲ್ಲ. ಕೊನೆಗೆ ಆತನ ಕೋಣೆ ಬಾಗಿಲು ಬಡಿದಾಗಲೂ ಪ್ರತಿಕ್ರಿಯೆ ಬಂದಿಲ್ಲ. ಆಗ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಆಕೆಗೆ ಖಚಿತವಾಗಿದೆ. ಈ ನೋವಿನಲ್ಲೇ ಅಪಾರ್ಟ್‌ಮೆಂಟ್‌ನ 17ನೇ ಮಹಡಿಗೆ ತೆರಳಿ ಅಲ್ಲಿಂದ ಜಿಗಿದು ಶಾಜಿಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೂಲಗಳು ವಿವರಿಸಿವೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಂಪತಿಯಿಂದ ವಿದಾಯ ಪತ್ರ
ಆತ್ಮಹತ್ಯೆಗೆ ಮುನ್ನ ಪ್ರತ್ಯೇಕವಾಗಿ ದಂಪತಿ ಮರಣ ಪತ್ರ ಬರೆದಿಟ್ಟಿದ್ದಾರೆ. ತನ್ನ ಆರೋಗ್ಯದ ಬಗ್ಗೆ ರೆಡ್ಡಿ ಹೇಳಿಕೊಂಡು ಕ್ಷಮೆ ಕೋರಿದರೆ, ಪ್ರೀತಿಸಿ ಮದುವೆಯಾದ ಪತಿ ಅಗಲಿಕೆ ನೋವಿನ ಬಗ್ಗೆ ಶಾಜಿಯಾ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.