ದೇವಸ್ಥಾನದ ಆವರಣದಲ್ಲೇ ಕುಡುಕರ ಹಾವಳಿ!

KannadaprabhaNewsNetwork |  
Published : Mar 15, 2025, 01:01 AM IST
ಪೋಟೋ ಇದೆ. | Kannada Prabha

ಸಾರಾಂಶ

ಉದ್ಯಾನದ ಒಂದೊಂದು ಸಲಕರಣೆಯೂ ದುರಸ್ತಿಗಾಗಿ ಕಾಯುತ್ತಿದೆ. ಕೂರಲು ಹಾಕಿದ್ದ ಸಿಮೆಂಟ್‌ ಸೀಟುಗಳು ಕೆಲವೆಡೆ ಮುರಿದು ಬಿದ್ದಿವೆ.

ನರೇಗಲ್ಲ: ಪಟ್ಟಣ ಪಂಚಾಯಿತಿ ಹಿಂಭಾಗದಲ್ಲಿರುವ ಭೂತನಾಥೇಶ್ವರ ದೇವಸ್ಥಾನದ ಆವರಣ ಕುಡುಕರ ತಾಣವಾಗಿ ಮಾರ್ಪಟ್ಟಿದೆ.

ಆವರಣದಲ್ಲಿ‌ ಉದ್ಯಾನ ಹೆಸರಿಗೆ ಮಾತ್ರ ಇದೆ. ಅಲ್ಲಿ ಮದ್ಯದ ಪೌಚ್‌ಗಳು, ನೀರಿನ ಗ್ಲಾಸ್‌ಗಳು, ಸಿಗರೆಟ್‌ ಪ್ಯಾಕೆಟ್‌ಗಳು, ಬಿಯರ್ ಬಾಟಲಿಗಳು ರಾರಾಜಿಸುತ್ತಿರುತ್ತವೆ.

ಉದ್ಯಾನದ ಒಂದೊಂದು ಸಲಕರಣೆಯೂ ದುರಸ್ತಿಗಾಗಿ ಕಾಯುತ್ತಿದೆ. ಕೂರಲು ಹಾಕಿದ್ದ ಸಿಮೆಂಟ್‌ ಸೀಟುಗಳು ಕೆಲವೆಡೆ ಮುರಿದು ಬಿದ್ದಿವೆ. ಜೋಕಾಲಿ ಹರಿದು ಅದಕ್ಕೆ ಅಳವಡಿಸಿದ್ದ ಸರಪಳಿ ತಾನೇ ತೂಗುಯ್ಯಾಲೆ ಆಡುತ್ತಿದೆ. ಅಲ್ಲಲ್ಲಿ ಕಸದ ರಾಶಿ ಗುಡ್ಡೆ ಬಿದ್ದಿದೆ. ಆವರಣದಲ್ಲಿ ಕಸದ ಗಿಡಗಳು ಬೆಳೆದು ನಿಂತಿವೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಪಟ್ಟಣ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.

ದೇವಸ್ಥಾನ ಪ್ರಾಂಗಣದಲ್ಲಿರುವ ಉದ್ಯಾನದಲ್ಲಿ ಬಿಯರ್ ಬಾಟಲಿಗಳ ಚೂರು ಹರಡಿಕೊಂಡಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಅಥವಾ ಉದ್ಯಾನದಲ್ಲಿ ಆಟವಾಡುವ ಮಕ್ಕಳಿಗೆ ಅದರಿಂದ ಅಪಾಯವಾದರೆ ಹೊಣೆ ಯಾರು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ನಾವು ಬಹುದಿನಗಳಿಂದ ನರೇಗಲ್ಲ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿರುವ ಪ್ರಮುಖ ಸ್ಥಳಗಳಲ್ಲಿ ಕುಡುಕರ ಹಾವಳಿ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಹಗಲು ರಾತ್ರಿ ಎನ್ನದೇ ಸಿಬ್ಬಂದಿಯೊಂದಿಗೆ ರೇಡ್ ಮಾಡುತ್ತಿದ್ದೇವೆ. ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರ ಹಾವಳಿ ಕಡಿಮೆಯಾಗಿದೆ. ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿ, ಸರಿಯಾಗಿ ಮಾಹಿತಿ ನೀಡಿದಲ್ಲಿ ನಾವು ಮುಲಾಜಿಲ್ಲದೇ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ನರೇಗಲ್ಲ ಪಿಎಸ್‌ಐ ಐಶ್ವರ್ಯಾ ನಾಗರಾಳ ತಿಳಿಸಿದ್ದಾರೆ.

ಉದ್ಯಾನ ಕಾಳಜಿ ಇಲ್ಲದೇ ಹಾಳು ಕೊಂಪೆಯಂತಾಗಿದೆ. ಚಿಕ್ಕ ಮಕ್ಕಳನ್ನು ಅಲ್ಲಿ ಆಟವಾಡಲು ಕಳುಹಿಸಲು ಭಯವಾಗುತ್ತದೆ. ಅಲ್ಲಿ ಒಡೆದು ಬಿದ್ದಿರುವ ಗಾಜಿನ ಚೂರುಗಳು, ಕುಡಿದು ಬಿಸಾಡಿದ ಬಾಟಲಿಗಳು, ತ್ಯಾಜ್ಯದ ರಾಶಿ, ಹರಿದ ಬಟ್ಟೆಗಗಳಿಂದ ಆ ಜಾಗ ಮಲಿನವಾಗಿದೆ. ಪಪಂ ಹಿಂಭಾಗದಲ್ಲಿದ್ದರೂ ಅಧಿಕಾರಿಗಳು ಮಾತ್ರ ಇತ್ತ ಕಣ್ಣು ಹಾಯಿಸದಿರುವುದು, ಶುಚಿತ್ವ ಕಾಯ್ದುಕೊಳ್ಳದಿರುವುದು ಅವರ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ಸ್ಥಳೀಯ ಹುಚ್ಚಪ್ಪ ನವಲಗುಂದ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ