ಕಪ್ಪು ಬಣ್ಣಕ್ಕೆ ತಿರುಗಿದ ಒಣ ಮೆಣಸಿನಕಾಯಿ!

KannadaprabhaNewsNetwork |  
Published : Jul 07, 2024, 01:20 AM IST
ಸಸಸಸ | Kannada Prabha

ಸಾರಾಂಶ

ಅಲ್ಪಸ್ವಲ್ಪ ಮಳೆಯಿಂದ ಮೆಣಸಿನಕಾಯಿ ಬೆಳೆದ ರೈತರಿಗೆ ಜನವರಿಯಲ್ಲಿ ಹುಬ್ಬಳ್ಳಿ, ಬ್ಯಾಡಗಿ, ಗದಗ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹50 ರಿಂದ 60 ಸಾವಿರ ದೊರೆತಿದೆ.

ಶಿವಕುಮಾರ ಕುಷ್ಟಗಿ ಗದಗ

ಕಳೆದ ಐದು ತಿಂಗಳಿಂದ ಕೋಲ್ಡ್‌ ಸ್ಟೋರೇಜ್‌ನಲ್ಲಿ ದಾಸ್ತಾನು ಮಾಡಲಾಗಿರುವ ಕೆಂಪು ಒಣ ಮೆಣಸಿನಕಾಯಿ, ದಿನದಿಂದ ದಿನಕ್ಕೆ ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಒಣ ಮೆಣಸಿನಕಾಯಿ ಬಂಪರ್‌ ಬೆಳೆ ಬಂದಾಗ್ಯೂ ಬೆಲೆ ಕುಸಿತದಿಂದಾಗಿ ರೈತರು ಉತ್ತಮ ಬೆಲೆಗಾಗಿ ಎದುರು ನೋಡುತ್ತ ಕೋಲ್ಡ್ ಸ್ಟೋರೇಜ್‌ನಲ್ಲಿ ದಾಸ್ತಾನು ಮಾಡಿದ್ದರು. ಈಗ ಅದಕ್ಕೂ ಕುತ್ತು ಬಂದಿದೆ. ಈಗಲೂ ದರ ಕುಸಿಯುತ್ತಲೇ ಸಾಗಿದೆ.

ಗದಗ -ಬೆಟಗೇರಿ ಅವಳಿ ನಗರದಲ್ಲಿ ಖಾಸಗಿ ಒಡೆತನದ ಮೂರು ಕೋಲ್ಡ್ ಸ್ಟೋರೇಜ್ ಹಾಗೂ ಗ್ರಾಮೀಣ ಭಾಗದಲ್ಲಿ ರೈತರು ದಾಸ್ತಾನಿಗೆ ಮನೆಗಳನ್ನು ಆಶ್ರಯಿಸಿದ್ದಾರೆ. ಆದರೆ ಸಂಗ್ರಹಿಸಿಟ್ಟಿರುವ ಕೆಂಪು ಮೆಣಸಿನಕಾಯಿ ಬೆಳೆ ಕಪ್ಪಾಗುತ್ತಿದ್ದು, ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಂಗಾರು ಮಳೆ ಆರಂಭವಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂಗ್ರಹ ಮಾಡಿರುವ ಕೆಂಪು ಮೆಣಸಿನಕಾಯಿ ಕಪ್ಪಾಗುತ್ತಿದ್ದು. ಅವುಗಳನ್ನು ಬಿಸಿಲಿಗೂ ಹಾಕಲು ಆಗದೇ ರೈತರು ಪರದಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಹ ಉತ್ತಮ ಬೆಲೆ ಇಲ್ಲದ ಕಾರಣ ಸಂಗ್ರಹಿಸಿಟ್ಟಿರುವ ಮೆಣಸಿನಕಾಯಿ ರೈತರು ಮಾರಲು ಆಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಮಾರುಕಟ್ಟೆಯಿಂದ ಮನೆಗೆ: ಅಲ್ಪಸ್ವಲ್ಪ ಮಳೆಯಿಂದ ಮೆಣಸಿನಕಾಯಿ ಬೆಳೆದ ರೈತರಿಗೆ ಜನವರಿಯಲ್ಲಿ ಹುಬ್ಬಳ್ಳಿ, ಬ್ಯಾಡಗಿ, ಗದಗ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹50 ರಿಂದ 60 ಸಾವಿರ ದೊರೆತಿದೆ. ಆದರೆ ಫೆಬ್ರುವರಿ ಆರಂಭದಿಂದ ಇಲ್ಲಿಯವರೆಗೂ ನಿರೀಕ್ಷಿತ ಬೆಲೆ ಕಾಣುತ್ತಿಲ್ಲ. ಸದ್ಯ 6 ರಿಂದ 15 ಸಾವಿರಕ್ಕೆ ಬೆಲೆ ಇಳಿದಿದೆ. ಇದರಿಂದ ಕೆಲ ರೈತರು ಮೆಣಸಿನಕಾಯಿ ಚೀಲಗಳನ್ನು ಮಾರುಕಟ್ಟೆಯಿಂದ ಮರಳಿ ತಂದು ಮನೆಯಲ್ಲಿಯೇ ಸಂಗ್ರಹಿಸಿದ್ದಾರೆ.

ಉತ್ತಮ ಬೆಲೆ ಬರಬಹುದು ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತ ರೈತರ ಮನೆಯಲ್ಲಿ ಮೆಣಸಿನಕಾಯಿ ಇಟ್ಟಲ್ಲೇ ಬೂಸ್ಟ್‌ ಬಂದು ಹಾಳಾಗುತ್ತಿದ್ದು, ಬೆಳೆಯನ್ನು ಇಟ್ಟುಕೊಳ್ಳಲಾರದೆ ತಿಪ್ಪೆಗೆ ಚೆಲ್ಲುವ ಪರಿಸ್ಥಿತಿ ಬಂದಿದೆ. ಜಿಲ್ಲಾದ್ಯಂತ ಮೆಣಸಿನಕಾಯಿ ಬೆಳೆದ ರೈತರ ಸ್ಥಿತಿ ಶೋಚನಿಯವಾಗಿದೆ.

ಮೆಣಸಿನಕಾಯಿ ಸಂಗ್ರಹ: ಗದಗ ಜಿಲ್ಲೆಯ ಪ್ರತಿ ಮನೆಯಲ್ಲಿಯೂ ರೈತರು ಮೆಣಸಿನಕಾಯಿ ಸಂಗ್ರಹ ಮಾಡಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಕೆಲವು ರೈತರು ಖರ್ಚು ಮಾಡಿ ಸಂಗ್ರಹಗಾರದಲ್ಲಿ ಇಟ್ಟು ಬೆಲೆ ಇಲ್ಲದೆ ಕೈ ಚೆಲ್ಲಿ ಕುಳಿತಿದ್ದಾರೆ. ಮನೆಯಲ್ಲಿ ಸಂಗ್ರಹಿಸಿಟ್ಟ ನಿಟ್ಟನ್ನು ಬೆಲೆ ಕುಸಿತದಿಂದ ಹೆಚ್ಚು ಖರ್ಚು ಮಾಡಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ ₹60 ಸಾವಿರ ಇದ್ದ ಬೆಲೆಯು ಸದ್ಯ ₹6 ರಿಂದ 15 ಸಾವಿರಕ್ಕೆ ಇಳಿದಿದೆ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ.

ಸ್ಟೋರೇಜ್ ಶುಲ್ಕ ಹೊರೆ: ಕಳೆದ ಐದು ತಿಂಗಳಿಂದ ನಗರದ ಖಾಸಗಿ ಒಡೆತನದ ಕೋಲ್ಡ್‌ ಸ್ಟೋರೇಜ್ ನಲ್ಲಿ ಒಣಮೆಣಸಿನಕಾಯಿ ದಾಸ್ತಾನು ಮಾಡಲಾಗಿದೆ. ಚೀಲಕ್ಕೆ ತಿಂಗಳಿಗೆ ₹30 ಶುಲ್ಕ ಕೊಡಬೇಕು. ಎರಡು ತಿಂಗಳು ನಂತರ ಉತ್ತಮ ಬೆಲೆ ಬರುವ ನಿರೀಕ್ಷೆ ಇದೆ. ಆದರೆ ಸುಮಾರು ಐದು ತಿಂಗಳು ಕಳೆದರೂ ಯಾವುದೇ ರೀತಿಯ ಬೆಲೆ ಏರಿಕೆ ಕಾಣದ ಹಿನ್ನೆಲೆಯಲ್ಲಿ ಕೋಲ್ಡ್‌ ಸ್ಟೋರೇಜ್‌ನ ಶುಲ್ಕ ರೈತರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ.

ಒಣ ಮೆಣಸಿನಕಾಯಿಗೆ ಸರ್ಕಾರ ಸೂಕ್ತ ಬೆಲೆ ನಿಗದಿ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಸಂಗ್ರಹಿಸಿಟ್ಟಿರುವ ಮೆಣಸಿನಕಾಯಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ರೈತರಾದ ಮಲ್ಲೇಶ ಬೂದಿಹಾಳ, ಸಂಗಪ್ಪ ಜಿಗೇರಿ, ನಾಗಪ್ಪ ಕುರಹಟ್ಟಿ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!