ಮೋಡಕಾ ಅಡ್ಡೆಗೆ ಪಾಲಿಕೆಯ ಒಣ ತ್ಯಾಜ್ಯ!

KannadaprabhaNewsNetwork |  
Published : Jan 20, 2026, 02:30 AM IST
ಮೋಡಕಾ ಅಡ್ಡೆಗಳಲ್ಲಿ ಒಣಕಸ ಮಾರಾಟ ಮಾಡುತ್ತಿರುವ ಕಸ ಸಂಗ್ರಹ ವಾಹನಗಳ ಸಿಬ್ಬಂದಿ. | Kannada Prabha

ಸಾರಾಂಶ

ತ್ಯಾಜ್ಯ ಸಂಗ್ರಹಿಸಲು ಬರುವ ಸಿಬ್ಬಂದಿ ರಟ್ಟು, ಪ್ಲಾಸ್ಟಿಕ್‌ ಬಾಟಲ್‌, ಇತರೆ ವಸ್ತು, ಕಬ್ಬಿಣದ ತುಂಡು ಸೇರಿದಂತೆ ವಿವಿಧ ವಸ್ತುಗಳನ್ನು ಕಾರವಾರ ರಸ್ತೆಯಲ್ಲಿರುವ ಮೋಡಕಾ ಅಡ್ಡೆಗೆ ಹಾಕುತ್ತಿದ್ದಾರೆ. ಹೀಗೆ ಪಾಲಿಕೆ ಸಿಬ್ಬಂದಿ ನೀಡುವ ವಸ್ತುಗಳಿಗಾಗಿಯೇ ಕೆಲ ಅಂಗಡಿಗಳು ಆರಂಭವಾಗಿವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ಮನೆ-ಮನೆ ಕಸ ಸಂಗ್ರಹಿಸುವ ತ್ಯಾಜ್ಯದಲ್ಲಿನ ಒಣ ಕಸವನ್ನು ಮೋಡಕಾ ಅಡ್ಡೆಗೆ ಮಾರಾಟ ಮಾಡುತ್ತಿದ್ದು, ಡಂಪಿಂಗ್‌ ಯಾರ್ಡ್‌ನಲ್ಲಿ ಹಸಿ ತ್ಯಾಜ್ಯವನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದೆ.

ತ್ಯಾಜ್ಯ ಸಂಗ್ರಹಿಸಲು ಬರುವ ಸಿಬ್ಬಂದಿ ರಟ್ಟು, ಪ್ಲಾಸ್ಟಿಕ್‌ ಬಾಟಲ್‌, ಇತರೆ ವಸ್ತು, ಕಬ್ಬಿಣದ ತುಂಡು ಸೇರಿದಂತೆ ವಿವಿಧ ವಸ್ತುಗಳನ್ನು ಕಾರವಾರ ರಸ್ತೆಯಲ್ಲಿರುವ ಮೋಡಕಾ ಅಡ್ಡೆಗೆ ಹಾಕುತ್ತಿದ್ದಾರೆ. ಹೀಗೆ ಪಾಲಿಕೆ ಸಿಬ್ಬಂದಿ ನೀಡುವ ವಸ್ತುಗಳಿಗಾಗಿಯೇ ಕೆಲ ಅಂಗಡಿಗಳು ಆರಂಭವಾಗಿವೆ.

ರಸ್ತೆಯಲ್ಲಿ ದುರ್ನಾತ:

ಹೀಗೇ ಸಂಗ್ರಹಿಸಿದ ಕಸವನ್ನು ಕಾರವಾರ ರಸ್ತೆಯಲ್ಲಿ ಡಂಪಿಂಗ್‌ ಯಾರ್ಡ್‌ಗೆ ತೆಗೆದುಕೊಂಡು ಹೋಗುವಾಗ ಮೋಡಕಾ ಅಡ್ಡೆ ಬಳಿ ಗಂಟೆಗಟ್ಟಲೇ ವಾಹನ ನಿಲ್ಲಿಸಲಾಗುತ್ತದೆ. ಈ ವೇಳೆ ಒಣ ತ್ಯಾಜ್ಯ ಬೇರ್ಪಡಿಸಿ ಅಂಗಡಿಗೆ ಹಾಕುತ್ತಾರೆ. ಇದರಿಂದ ಹಸಿ ತ್ಯಾಜ್ಯವೆಲ್ಲ ರಸ್ತೆಯಲ್ಲಿಯೇ ಸೋರುತ್ತದೆ. ಇದರಿಂದ ಆ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ. ಜತೆಗೆ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಹೀಗೇ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನ ಏಕೆ ನಿಲ್ಲಿಸುತ್ತೀರಿ ಎಂದು ಸ್ಥಳೀಯರು ಪ್ರಶ್ನಿಸಿದರೆ ಪಾಲಿಕೆ ಸಿಬ್ಬಂದಿ ದಬಾಯಿಸುತ್ತಾರೆಂಬ ಆರೋಪವೂ ಕೇಳಿ ಬರುತ್ತಿದೆ. ಈ ಕುರಿತು ಸಾರ್ವಜನಿಕರು ಪಾಲಿಕೆಯ ಆರೋಗ್ಯ ನಿರೀಕ್ಷಕರಿಗೆ, ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ.

ಕಸ ವಿಲೇವಾರಿಗೆ ಸಮಸ್ಯೆ:

ಮೋಡಕಾ ಅಡ್ಡೆ ಬಳಿಯೇ ಹೆಚ್ಚಿನ ಸಮಯವನ್ನು ಕಸ ಸಂಗ್ರಹಿಸುವ ವಾಹನಗಳು ತೆಗೆದುಕೊಳ್ಳುತ್ತಿರುವುದರಿಂದ ಬಡಾವಣೆಯಲ್ಲಿ ಕಸ ಸಂಗ್ರಹಿಸುವಲ್ಲೂ ವಿಳಂಬವಾಗುತ್ತಿದೆ. ಇದರಿಂದ ಕೆಲಸಕ್ಕೆ ಹೋಗುವ ಜನರು ಅನಿವಾರ್ಯವಾಗಿ ರಸ್ತೆ ಬದಿಯಲ್ಲಿಯೇ ತ್ಯಾಜ್ಯ ಬಿಸಾಕಿ ಹೋಗುತ್ತಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ದಿನ ಬಿಟ್ಟು ದಿನ ಬರಬೇಕಿದ್ದ ವಾಹನಗಳು ಮೂರು ದಿನಗಳಿಗೊಮ್ಮೆ ಬರುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇಂದೋರ್‌ ಪ್ರವಾಸ:

ಪಾಲಿಕೆ ಸದಸ್ಯರು, ಅಧಿಕಾರಿಗಳು ಕಸ ವಿಲೇವಾರಿ ಕುರಿತು ವೈಜ್ಞಾನಿಕ ಅಧ್ಯಯನಕ್ಕೆಂದು ವರ್ಷಕ್ಕೊಮ್ಮೆ ಇಂದೋರ್‌, ಅಹ್ಮದಬಾದ್‌ ಪ್ರವಾಸ ಮಾಡುತ್ತಾರೆ. ಮರಳಿದ ಬಳಿಕ ಅಲ್ಲಿನ ವ್ಯವಸ್ಥೆಯನ್ನು ಇಲ್ಲಿ ಜಾರಿಗೊಳಿಸಿ ಪರಿಸ್ಥಿತಿ ಸುಧಾರಿಸುವ ಗೋಜಿಗೆ ಹೋಗಿಲ್ಲ. ಕೇವಲ ಪ್ರವಾಸವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಹೊರತು ಅನುಷ್ಠಾನಗೊಳಿಸುವ ಆಸಕ್ತಿ ತೋರುತ್ತಿಲ್ಲ.

ಇನ್ನಾದರೂ ಮೋಡಕಾ ಅಡ್ಡೆ ಬಳಿ ನಿಲ್ಲುವ ಪಾಲಿಕೆ ವಾಹನಗಳಿಗೆ ಕಡಿವಾಣ ಹಾಕುವ ಮೂಲಕ ಸಮರ್ಪಕ ಕಸ ವಿಲೇವಾರಿಗೆ ಕ್ರಮಕೈಗೊಳ್ಳಲು ಪಾಲಿಕೆ ಆಯುಕ್ತರು, ಮೇಯರ್‌, ಉಪಮೇಯರ್‌ ಮುಂದಾಗಬೇಕೆಂದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.ಕಾರವಾರ ರಸ್ತೆಯಲ್ಲಿ ಐದಾರು ಮೋಡಕಾ ಅಡ್ಡೆಗಳಿವೆ. ಅಲ್ಲಿ ಪ್ರತಿನಿತ್ಯ ಕಸ ಸಂಗ್ರಹಿಸುವ ವಾಹನಗಳು ನಿಂತು ಒಣ ಕಸ ಮಾರಾಟ ಮಾಡುವ ದೃಶ್ಯ ಗೋಚರಿಸುತ್ತದೆ. ಇದರಿಂದ ಸಾರ್ವಜನಿಕರಿಗೆ ಎಷ್ಟೊಂದು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಪಾಲಿಕೆ ಕ್ರಮ ಕೈಗೊಳ್ಳಲಿ.

ಮಂಜುನಾಥ ಒಣಕುದರಿ, ಸಾರ್ವಜನಿಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ
ಫೆಬ್ರವರಿಯಿಂದ ರಾಜ್ಯದಲ್ಲಿ ಎಸ್‌ಐಆರ್‌?