- ಬೆಳೆಹಾನಿ ಸಮೀಕ್ಷೆ ಕೈಗೊಂಡು, ಶೀಘ್ರ ಪರಿಹಾರ ಒದಗಿಸಬೇಕು: ಬಿ.ಎಂ.ಸತೀಶ ಒತ್ತಾಯ
ನೀರಿಲ್ಲದೇ ಒಣಗಿರುವ ಕಬ್ಬಿನ ಬೆಳೆ, ತೆಂಗು, ಅಡಕೆ ಸೇರಿದಂತೆ ವಿವಿಧ ತೋಟದ ಬೆಳೆಗಳು ತಾಲೂಕಿನ ಕುಕ್ಕವಾಡ ಗ್ರಾಮದ ವ್ಯಾಪ್ತಿಯಲ್ಲಿ ಸಂಪೂರ್ಣ ಒಣಗುತ್ತಿವೆ. ಸರ್ಕಾರ ತಕ್ಷಣ ಸಮೀಕ್ಷೆ ಕೈಗೊಂಡು, ಬೆಳೆ ಪರಿಹಾರ ನೀಡುವಂತೆ ಬಿಜೆಪಿ ಜಿಲ್ಲಾ ವಕ್ತಾರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ತಾಲೂಕಿನ ಕುಕ್ಕವಾಡ ಗ್ರಾಮದ ದಾವಣಗೆರೆ ಸಕ್ಕರೆ ಕಂಪನಿ ವ್ಯಾಪ್ತಿಯಲ್ಲಿ ನೂರಾರು ಎಕರೆಯಲ್ಲಿ ಬೆಳೆದಿರುವ ಕಬ್ಬು, ಅಡಕೆ, ತೆಂಗಿನ ತೋಟಗಳು ಬಿರುಬೇಸಿಗೆಯಿಂದ ನೀರಿಲ್ಲದೇ, ಸಂಪೂರ್ಣ ಒಣಗಿವೆ. ಈ ಪ್ರದೇಶಕ್ಕೆ ಗ್ರಾಮದ ಮುಖಂಡರು, ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ, ಮಾತನಾಡಿದ ಅವರು, ಬರದಿಂದ ರೈತರಿಗೆ ತೀವ್ರ ಆರ್ಥಿಕ ಸಂಕಷ್ಟ ಬಂದೊದಗಿದೆ. ಜೀವನ ನಡೆಸುವುದೇ ಕಷ್ಟವಾಗಿದೆ ಎಂದರು.ಕುಕ್ಕುವಾಡ ಗ್ರಾಮದ ವ್ಯಾಪ್ತಿಯಲ್ಲಿ ಒಣಗಿರುವ ಕಬ್ಬು, ಅಡಕೆ, ತೆಂಗಿನ ತೋಟಗಳ ಸಮೀಕ್ಷೆಯನ್ನು ಕೈಗೊಳ್ಳಬೇಕು. ಭದ್ರಾ ಕಾಡಾ ಸಮಿತಿಯ ಅವೈಜ್ಞಾನಿಕ ವೇಳಾ ಪಟ್ಟಿಯಿಂದಾಗಿ ಭದ್ರಾ ನೀರು ದಾವಣಗೆರೆ ಅಚ್ಚುಕಟ್ಟು ಪ್ರದೇಶಕ್ಕೆ ಹರಿಯದಿರುವುದು ಒಂದು ಕಡೆಯಾದರೆ, ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಕಷ್ಟವಾಗಿ, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ದೂರಿದರು.
ಕೊಳವೆ ಬಾವಿಗಳೂ ಸಂಪೂರ್ಣ ನೀರು ಇಲ್ಲದೇ, ಬತ್ತಿಹೋಗಿವೆ. ಹಾಗಾಗಿ, ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಬೆಳೆಗಳಿಗೆ, ತೋಟಕ್ಕೆ ನೀರುಣಿಸಲು ಆಗದಂತಹ ಪರಿಸ್ಥಿತಿಗೆ ತಲುಪಿದ್ದಾರೆ. ನೀರಿಲ್ಲದೇ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಭೀಕರ ಬರದಿಂದಾಗಿ ರೈತರೂ ಕಂಗೆಟ್ಟಿದ್ದಾರೆ. ರೈತರ ಇಂತಹ ಹೀನಾಯ ಪರಿಸ್ಥಿತಿಯನ್ನು ಸರ್ಕಾರ ತನ್ನ ಕಣ್ಣುಗಳನ್ನು ತೆರೆದು ನೋಡಿ, ರೈತರಿಗೆ ನೆರವಿನ ಹಸ್ತ ನೀಡಲಿ ಎಂದು ಆಗ್ರಹಿಸಿದರು.
- - -
- ಬಿ.ಎಂ.ಸತೀಶ ಕೊಳೇನಹಳ್ಳಿ, ಬಿಜೆಪಿ ಮುಖಂಡ
ದಾವಣಗೆರೆ ತಾಲೂಕು ಕುಕ್ಕವಾಡ ಸುತ್ತಮುತ್ತ ಕಬ್ಬು, ಅಡಕೆ, ತೆಂಗಿನ ತೋಟಗಳು ಸಂಪೂರ್ಣ ಒಣಗಿರುವುದನ್ನು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಇತರರು ಪರಿಶೀಲಿಸಿದರು. -8ಕೆಡಿವಿಜಿ15, 16: