ರಾಣಿಬೆನ್ನೂರಿನ ಎಪಿಎಂಸಿ ಮಾರುಕಟ್ಟೆಗೆ ಬೇಕಿದೆ ಡ್ರೈಯರ್ ಮಷಿನ್

KannadaprabhaNewsNetwork |  
Published : Aug 11, 2025, 12:33 AM IST
ಫೋಟೊ ಶೀರ್ಷಿಕೆ: 10ಆರ್‌ಎನ್‌ಆರ್1ರಾಣಿಬೆನ್ನೂರು ಎಪಿಎಂಸಿ ಮಾರುಕಟ್ಟೆಗೆ ಆವಕವಾಗಿರುವ ಮೆಕ್ಕೆಜೋಳ  | Kannada Prabha

ಸಾರಾಂಶ

ಇಲ್ಲಿಯ ಮಾರುಕಟ್ಟೆಗೆ ಜಿಲ್ಲೆಯ ಹಿರೇಕೆರೂರು, ರಟ್ಟೀಹಳ್ಳಿ, ಗುತ್ತಲ, ಶಿಕಾರಿಪುರ, ಸೊರಬ, ಕೊಪ್ಪಳ, ಹರಪನಹಳ್ಳಿ ತಾಲೂಕು ಸೇರಿದಂತೆ ವಿವಿಧ ಭಾಗದಿಂದ ಮೆಕ್ಕೆಜೋಳ ಆವಕವಾಗುತ್ತಿದೆ.

ಬಸವರಾಜ ಸರೂರ

ರಾಣಿಬೆನ್ನೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೆಕ್ಕೆಜೋಳ ಆವಕ ಪ್ರಮಾಣ ಹೆಚ್ಚಾಗುತ್ತಿದ್ದು, ರೈತರಿಗೆ ಅಗತ್ಯವಿರುವ ಡ್ರೈಯರ್ ಮಷಿನ್ (ಮೆಕ್ಕೆಜೋಳ ಒಣಗಿಸುವ ಯಂತ್ರ) ಅಗತ್ಯವಿದೆ ಎನ್ನುವ ಕೂಗು ಬಲವಾಗಿ ಕೇಳಿಬರುತ್ತಿದೆ.

ಇಲ್ಲಿಯ ಮಾರುಕಟ್ಟೆಗೆ ಜಿಲ್ಲೆಯ ಹಿರೇಕೆರೂರು, ರಟ್ಟೀಹಳ್ಳಿ, ಗುತ್ತಲ, ಶಿಕಾರಿಪುರ, ಸೊರಬ, ಕೊಪ್ಪಳ, ಹರಪನಹಳ್ಳಿ ತಾಲೂಕು ಸೇರಿದಂತೆ ವಿವಿಧ ಭಾಗದಿಂದ ಮೆಕ್ಕೆಜೋಳ ಆವಕವಾಗುತ್ತಿದೆ. ಇಲ್ಲಿ ಖರೀದಿಯಾಗುವ ಮೆಕ್ಕೆಜೋಳ ಅನೇಕ ವಿಧದ ಖಾದ್ಯಗಳಿಗೆ ಉಪಯೋಗವಾಗುತ್ತದೆ. ರೈಲು ಮೂಲಕ ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಇನ್ನೂ ಹಲವು ರಾಜ್ಯಗಳಿಗೆ ಪೂರೈಕೆಯಾಗುತ್ತಿದ್ದು, ನಗರದ ಎಪಿಎಂಸಿ ಮಾರುಕಟ್ಟೆ ಮೆಕ್ಕೆಜೋಳ ಮಾರಾಟಕ್ಕೆ ಹೆಸರಾಗಿದೆ.ಭೂಮಿಯಲ್ಲಿಯೇ ಹಾಳು: ನಗರದ ಎಪಿಎಂಸಿ ಮಾರುಕಟ್ಟೆ ರೈತರು ತಮ್ಮ ಉತ್ಪನ್ನವನ್ನು ಮಾರಾಟಕ್ಕೆ ತರುತ್ತಾರೆ. ಫಸಲನ್ನು ಒಣಗಿಸಲು ಎಪಿಎಂಸಿ ಆವರಣ, ಸುತ್ತಲಿನ ಪ್ರಮುಖ ಪ್ರದೇಶ, ರಸ್ತೆಗಳಲ್ಲಿ ಒಣಗಿಸಲು ಹಾಕುತ್ತಾರೆ. ಇದರಿಂದ ಅಲ್ಪ ಪ್ರಮಾಣದ ಫಸಲು ಭೂಮಿಯಲ್ಲಿ ಹಾಳಾಗುವ ಜತೆಗೆ ಅಕಾಲಿಕ ಮಳೆ ಬಂದರೆ ಹಾನಿಯಾಗುತ್ತದೆ. ಇನ್ನು ರಸ್ತೆಯ ಬದಿಯಲ್ಲಿ ಒಣಗಿಸುವ ಕಾರಣದಿಂದ ವಾಹನ ಸವಾರರು ತೊಂದರೆ ಎದುರಿಸುವುದು ಅನಿವಾರ್ಯವಾಗಿದೆ. ಇದರಿಂದ ಎಪಿಎಂಸಿ ವತಿಯಿಂದ ಡ್ರೈಯರ್ ಮಷಿನ್ ಅಳವಡಿಸಿದರೆ ಮೆಕ್ಕೆಜೋಳ ಒಣಗಿಸುವ ಜತೆಗೆ ರೈತರ ಫಸಲು ಹಾಳಾಗುವುದನ್ನು ತಪ್ಪಿಸಿದಂತಾಗುತ್ತದೆ. ಹೀಗಾಗಿ ಕೂಡಲೇ ಮೆಕ್ಕೆಜೋಳ ಒಣಗಿಸುವ ಯಂತ್ರವನ್ನು ಎಪಿಎಂಸಿ ವತಿಯಿಂದ ಅಳವಡಿಸಬೇಕು ಎನ್ನುವುದು ವರ್ತಕರ ಒತ್ತಾಯವಾಗಿದೆ.ಮೆಕ್ಕೆಜೋಳ ಪ್ರದೇಶ ಹೆಚ್ಚಳ: ಜಿಲ್ಲೆಯಲ್ಲಿಯೇ ಪ್ರಸಕ್ತ ವರ್ಷ ಮೆಕ್ಕೆಜೋಳ ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಶೇ. 80ರಷ್ಟು ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಮೆಕ್ಕೆಜೋಳ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಆದರೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ರಾಣಿಬೆನ್ನೂರು ಎಪಿಎಂಸಿ ಮಾರುಕಟ್ಟೆಗೆ ಅಗತ್ಯವಿರುವ ಡ್ರೈಯರ್ ಮಷಿನ್ ಅಳವಡಿಸಬೇಕಾಗಿದೆ ಎನ್ನುತ್ತಾರೆ ವರ್ತಕರು.

ರೈತರಿಗೆ ಹೆಚ್ಚಿನ ಅನುಕೂಲ: ರಾಣಿಬೆನ್ನೂರು ಎಪಿಎಂಸಿ ಮಾರುಕಟ್ಟೆಗೆ ಜಿಲ್ಲೆಯಲ್ಲಿಯೇ ಅತಿಹೆಚ್ಚು ಮೆಕ್ಕೆಜೋಳ ಆವಕವಾಗುತ್ತಿದೆ. ಹೀಗಾಗಿ ರೈತರ ಅನುಕೂಲಕ್ಕಾಗಿ ಮೆಕ್ಕೆಜೋಳ ಒಣಗಿಸುವ ಯಂತ್ರವನ್ನು ಅಳವಡಿಸಬೇಕು ಎಂದು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈಗ ಹೊಸದಾಗಿ ನಿರ್ಮಾಣಗೊಂಡಿರುವ ದೊಡ್ಡ ದೊಡ್ಡ ಗೋದಾಮಿನಲ್ಲಿಯೇ ಡ್ರೈಯರ್ ಮಷಿನ್ ಅಳವಡಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ರಾಣಿಬೆನ್ನೂರು ಎಪಿಎಂಸಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ತಿಳಿಸಿದರು.

ಸರ್ಕಾರಕ್ಕೆ ಪ್ರಸ್ತಾವನೆ: ಡ್ರೈಯರ್ ಮಷಿನ್ ಅಳವಡಿಕೆ ಬಗ್ಗೆ ಸಾಧಕ ಬಾಧಕಗಳ ಕುರಿತು ಅಧ್ಯಯನ ನಡೆಸಲಾಗುತ್ತದೆ. ವರ್ತಕರ ಮನವಿ ಮೇರೆಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುದಾನ ದೊರೆತ ನಂತರದಲ್ಲಿ ಮಷಿನ್ ಅಳವಡಿಸಲಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ಶೈಲಜಾ ತಿಳಿಸಿದರು.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ