ಅಮಿತ್‌ ಶಾ ವಿರುದ್ಧ ಡಿಎಸ್ಎಸ್ ಪ್ರತಿಭಟನೆ

KannadaprabhaNewsNetwork | Published : Dec 22, 2024 1:32 AM

ಸಾರಾಂಶ

ಚನ್ನಗಿರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಂತ್ರಿಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ವತಿಯಿಂದ ಇಲ್ಲಿನ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಚನ್ನಗಿರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಂತ್ರಿಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ವತಿಯಿಂದ ಇಲ್ಲಿನ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಮಿತಿಯ ತಾಲೂಕು ಸಂಚಾಲಕ ನವಿಲೇಹಾಳ್ ಕೃಷ್ಣಪ್ಪ ಮಾತನಾಡಿ, ಸಂಸತ್ತಿನ ಅಧಿವೇಶನದಲ್ಲಿ ದೇಶದ ಗೃಹ ಸಚಿವರಾದ ಅಮಿತ್ ಶಾ ಅವರು ಮಾತನಾಡುವಾಗ ಸಂವಿಧಾನ ಶಿಲ್ಫಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಹಗುರವಾಗಿ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಮಾತನಾಡಿದ್ದು, ಅವರ ಮನಸ್ಥಿತಿ ಮತ್ತು ಆರ್‌ಎಸ್ಎಸ್ ಸಂಘ ಪರಿವಾರದ ಸಿದ್ಧಾಂತವನ್ನು ತೋರಿಸುತ್ತಿದೆ. ಇದನ್ನು ದಲಿತ ಸಂಘಟನೆಗಳ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ ಎಂದರು.ಈ ದೇಶಕ್ಕೆ ಸಂವಿಧಾನದಂತಹ ಭದ್ರಬುನಾಧಿಯನ್ನು ಹಾಕಿಕೊಟ್ಟಿರುವ ಬಾಬಾ ಸಾಹೇಬರ ಬಗ್ಗೆ ಹಗುರವಾಗಿ ಮಾತನಾಡಿರುವ ಅಮಿತ್ ಶಾ ಅವರು ಕೇಂದ್ರ ಗೃಹಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆಯೂ ಇಲ್ಲವಾಗಿದ್ದು, ಅವರ ರಾಜೀನಾಮೆಯನ್ನು ತಕ್ಷಣವೇ ಪಡೆಯಬೇಕು ಎಂದು ಆಗ್ರಹಿಸಿದರು.ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಹೇಳುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದ್ದು, ಅಂಬೇಡ್ಕರ್ ಅಂಬೇಡ್ಕರ್ ಎನ್ನುವ ಬದಲು ದೇವರ ಹೆಸರು ಹೇಳಿದರೆ ಏಳೇಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳಿರುವ ಅಮಿತ್ ಶಾ ಅವರೇ ದಲಿತ, ಶೋಷಿತ, ಹಿಂದುಳಿದ ವರ್ಗಗಳಿಗೆ ಅಂಬೇಡ್ಕರ್ ಅವರೇ ನಿಜವಾದ ದೇವರು ಎಂಬುದನ್ನು ತಿಳಿಯಬೇಕು ಎಂದರು.ಪ್ರತಿಭಟನೆಯಲ್ಲಿ ತಾಲೂಕು ಮಾದಿಗ ಸಮಾಜದ ಗೌರವ ಅಧ್ಯಕ್ಷ ಮಾಚನಾಯ್ಕನಹಳ್ಳಿ ಮಂಜುನಾಥ್, ಗಾಂಧಿನಗರ ಚಿತ್ರಲಿಂಗಪ್ಪ, ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ನೀತಿಗೆರೆ ಮಂಜಪ್ಪ, ದೇವರಾಜ್, ಆಂಜನೇಯ, ಚಿಕ್ಕೂಲಿಕೆರೆ ರಮೇಶ್, ಬಸವಾಪುರ ರಂಗನಾಥ್, ಕುಬೇಂದ್ರಸ್ವಾಮಿ, ಉಮಾಪತಿ ಮತ್ತಿತರರಿದ್ದರು.

Share this article