ನರಗುಂದ: ಪ್ರಸಕ್ತ ವರ್ಷ ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತದೆ, ಇಂಥಾ ಸಮಯದಲ್ಲಿ ರಾಜ್ಯ ಸರ್ಕಾರ ಇ-ಸ್ಟ್ಯಾಂಪ್ ಶುಲ್ಕವನ್ನು ದಿಢೀರ್ ಹೆಚ್ಚಿಸಿದ್ದು ಮಧ್ಯಮ ವರ್ಗ ಹಾಗೂ ಬಡವರಿಗೆ ತೊಂದರೆಯಾಗಿದೆ. ಹಾಗಾಗಿ ಸರ್ಕಾರ
ಇ-ಸ್ಟ್ಯಾಂಪ್ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಲ್ಲೇಕನವರ ಆಗ್ರಹಿಸಿದರು. ಅವರು ಸೋಮವಾರ ಪಟ್ಟಣದ ಮಿನಿ ವಿಧಾನಸಭೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳೊಂದಿಗೆ ಆಗಮಿಸಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿ ಆನಂತರ ಮಾತನಾಡಿದರು. ದಿನನಿತ್ಯ ಸಾರ್ವಜನಿಕರು ಸರ್ಕಾರಿ ಸೌಲಭ್ಯ ಪಡೆಯಲು ಇತರೆ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ರು. 20 ಛಾಫಾ ಕಾಗದದಲ್ಲಿ ಆಫಿಡವಿಟ್ ಸಲ್ಲಿಸುತ್ತಿದ್ದರು. ಇದನ್ನು ರು. 100 ಹೆಚ್ಚಿಗೆ ಮಾಡಲಾಗಿದೆ. ಇದರಿಂದಾಗಿ ಬಡವರು ತಮ್ಮ ಒಂದು ದಿನದ ಕೂಲಿ ಬಿಟ್ಟು, ಹಚ್ಚಿಗೆ ಬೆಲೆಯನ್ನು ಕೊಡುವ ಪರಿಸ್ಥಿತಿಯನ್ನು ತಂದಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಸ್ಥಿರಾಸ್ತಿ ವ್ಯವಹಾರಗಳನ್ನು ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಛಾಪಾ ಕಾಗದ ಖರೀದಿಸಿ ವ್ಯವಹಾರ ಮಾಡಿಕೊಳ್ಳುತ್ತಿದ್ದು, ಇದನ್ನು ರು. ಒಂದು ಲಕ್ಷಕ್ಕೆ ಶೇ.0.5ರಷ್ಟು ಕಡ್ಡಾಯವಾಗಿ ಇ-ಸ್ಟ್ಯಾಂಪ್ ಖರೀದಿಸಬೇಕಾದ ಅನಿವಾರ್ಯತೆಯನ್ನು ತಂದು ಒಡ್ಡಿದ್ದಾರೆ. ಚರಾಸ್ತಿಗಳ ವ್ಯವಹಾರಕ್ಕೆ ಲಕ್ಷಕ್ಕೆ ಶೇ 1ರಿಂದ 3ರಷ್ಟು ಬೆಲೆಯ ಇ-ಸ್ಟ್ಯಾಂಪ್ ಖರೀದಿಸಬೇಕಾಗಿದೆ. ಇತರೆ ಸಣ್ಣಪುಟ್ಟ ಅಗ್ರಿಮೆಂಟ್ (ಕರಾರು ಪತ್ರ) ವ್ಯವಹಾರಕ್ಕೆ ಫಿಕ್ಸೆಡ್ ಸ್ಟ್ಯಾಂಪ್ ಡ್ಯೂಟಿ ರು. 500 ಗಳನ್ನು ಕಡ್ಡಾಯ ಮಾಡಲಾಗಿದೆ. ಹೀಗೆ ಎಲ್ಲ ವ್ಯವಹಾರಗಳಿಗೆ ಇ-ಸ್ಟ್ಯಾಂಪ್ ಬೆಲೆಯನ್ನು ಹೆಚ್ಚಿಗೆ ಮಾಡಲಾಗಿದೆ ಎಂದರು. ಸರ್ಕಾರ ಉಚಿತ ಯೋಜನೆಗಳನ್ನು ಕೊಟ್ಟು, ನೋಂದಣಿ ಶುಲ್ಕ ಹಾಗೂ ಇ-ಸ್ಟ್ಯಾಂಪ್ ಬೆಲೆಗಳನ್ನು ಹೆಚ್ಚಿಗೆ ಮಾಡಿದ್ದು, ಇದರಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗುವುದು ಸರ್ಕಾರಕ್ಕೆ ಗಮನಕ್ಕೆ ಬರುತ್ತಿಲ್ಲವೇಕೆ?, ಆದ್ದರಿಂದ ಸರ್ಕಾರವು ಈ ಕುರಿತು ಗಂಭೀರವಾದ ಚಿಂತನೆಯನ್ನು ಮಾಡಿ, ಇ-ಸ್ಟ್ಯಾಂಪ್ ಹಾಗೂ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಹೆಚ್ಚಿಗೆ ಮಾಡಿದ ಆದೇಶವನ್ನು ಹಿಂಪಡೆದು ಸಾರ್ವಜನಿಕರಿಗೆ ತೊಂದರೆಯಾಗದ ನಿಟ್ಟಿನಲ್ಲಿ ಈ ಹಿಂದೆ ಇದ್ದ ಯಥಾಸ್ಥಿತಿಯನ್ನು ಮುಂದುವರೆಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಉಪತಹಸೀಲ್ದಾರ್ ಪರಶುರಾಮ ಕಲಾಲ ಅವರು ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡಪರ ಒಕ್ಕೂಟಗಳ ಮುಖಂಡ ಚನ್ನು ನಂದಿ, ಕರವೇ ತಾಲೂಕು ಅಧ್ಯಕ್ಷ ನಬಿಸಾಬ ಕಿಲ್ಲೇದಾರ, ಮಂಜುನಾಥ ದೊಡ್ಡಮನಿ, ಪ್ರಕಾಶ ಹಾದಿಮನಿ, ದತ್ತಾತ್ರೇಯ ಜೋಗಣ್ಣವರ, ಶರಣು ಚಲವಾದಿ, ಗುರುನಾಥ ಕೆಂಗಾರಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.