ಕನ್ನಡಪ್ರಭ ವಾರ್ತೆ ನಂಜನಗೂಡುನಂಜನಗೂಡು ನಗರಸಭೆಯಲ್ಲಿ 2024-25ನೇ ಸಾಲಿಗೆ 60.19 ಕೋಟಿ ರು. ಮೊತ್ತದ ಬಜೆಟ್ ನ್ನು ಸಿದ್ಧಪಡಿಸಲಾಗಿದ್ದು, ಸುಮಾರು 2.50 ಕೋಟಿ ರು. ಉಳಿತಾಯ ಬಜೆಟ್ನ್ನು ಮಂಡಿಸಲಾಗಿದೆ ಎಂದು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
ಪ್ರಾರಂಭಿಕ ಶುಲ್ಕ 16.61 ಕೋಟಿ ರು. ಸೇರಿದಂತೆ ಆಸ್ತಿ ತೆರಿಗೆ, ಖಾತೆ ಶುಲ್ಕ, ನೀರಿನ ಶುಲ್ಕ ಸೇರಿದಂತೆ ಇತರೆ ಮೂಲಗಳಿಂದ ಸುಮಾರು 20 ಕೋಟಿ ಆದಾಯ ಬರುವ ನಿರೀಕ್ಷೆಯಿದೆ. ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಸ್.ಎಫ್.ಸಿ ವೇತನ ಅನುದಾನ, ಬೀದಿ ದೀಪ ವಿದ್ಯುತ್, ನೀರು ಸರಬರಾಜು, 15ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ಸುಮಾರು 25 ಕೋಟಿ ಬರುವ ಸಾಧ್ಯತೆಯೊಂದಿಗೆ 2024-25ನೇ ಸಾಲಿಗೆ 62.7 ಕೋಟಿ ಆದಾಯ ನಿರೀಕ್ಷೆಯನ್ನು ಹೊಂದಲಾಗಿದ್ದು, ಇದರಲ್ಲಿ 60.19 ಕೋಟಿ ರು. ವೆಚ್ಚದಲ್ಲಿ ಬಜೆಟ್ ಸಿದ್ಧಪಡಿಸಲಾಗಿದೆ ಎಂದರು.
ನಗರಸಭೆ ಆಸ್ತಿ ರಚನೆಗೆ ಕ್ರಮ:ಈ ಬಾರಿ ನಗರಸಭೆಗೆ ಆದಾಯ ಬರುವ ಆಸ್ತಿಗಳನ್ನು ಸೃಷ್ಟಿ ಮಾಡಲು ಕ್ರಮವಹಿಸಲಾಗಿದೆ. ಅಲ್ಲದೆ ಕಪಿಲ ನದಿಯ ಸ್ವಚ್ಚತೆಯ ಹಿತದೃಷ್ಠಿಯನ್ನಿಟ್ಟುಕೊಂಡು ಬಜೆಟ್ ರಚನೆ ಮಾಡಲಾಗಿದೆ ಎಂದರಲ್ಲದೆ, ಎಲ್ಲ ವಾರ್ಡ್ಗಳಲ್ಲಿ ರಸ್ತೆ, ಪಾದಚಾರಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 9.5 ಕೋಟಿ, ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ 1.5 ಕೋಟಿ, ನೀರು ಸರಬರಾಜು ನಿರ್ವಹಣೆಗೆ 2.05 ಕೋಟಿ, ಉದ್ಯಾನಗಳ ಅಭಿವೃದ್ಧಿಗಾಗಿ 75 ಲಕ್ಷ, ನಗರಸಭೆ ಅಧಿಕಾರಿಗಳ ವೇತನಕ್ಕಾಗಿ 4.77 ಕೋಟಿ, ಬೀದಿದೀಪ ವಿದ್ಯುತ್ ಶುಲ್ಕ ಪಾವತಿಗಾಗಿ 5.75 ಕೋಟಿ, ನೀರು ಸರಬರಾಜು ವಿದ್ಯುತ್ ಶುಲ್ಕ ಪಾವತಿಗಾಗಿ 2.75 ಕೋಟಿ, ನೈರ್ಮಲ್ಯ ವೆಚ್ಚಾಗಿ 2 ಕೋಟಿ, ದುರಸ್ತಿ ಕಾರ್ಯಗಳಿಗಾಗಿ 1.55 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಮಾಜಿ ನಗರಸಭಾಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ ಮಾತನಾಡಿ, ಈ ಬಜೆಟ್ ಸಾರ್ವಜನಿಕ ಉಪಯೋಗಿ ಬಜೆಟ್ ಆಗಿಲ್ಲ, ಅಧಿಕಾರಿಗಳ ಉಪಯೋಗಿ ಬಜೆಟ್ ಆಗಿದೆ. ಕಳೆದ ಬಾರಿ ವಾಹನ ರಿಪೇರಿಗೆ 2 ಲಕ್ಷ ಮಾತ್ರ ಮೀಸಲಿಡಲಾಗಿತ್ತು. ಈ ಬಾರಿ 25 ಲಕ್ಷ ಮೀಸಲಿಟ್ಟಿದ್ದಾರೆ. ಸಾರ್ವಜನಿಕರ ಉಪಯೋಗಕ್ಕೆ ಬರುವ ಯಾವುದೇ ಕಾಮಗಾರಿಗಳಿಗೆ ಅನುದಾನ ನೀಡಿಲ್ಲ ಎಂದು ಆರೋಪಿಸಿದರು.
ಎಇಇ ಚಿನ್ನಸ್ವಾಮಿ ಅಸಮರ್ಪಕವಾಗಿ ಸಮಜಾಯಿಷಿ ನೀಡುವುದನ್ನು ಕಂಡು ಕೆರಳಿದ ಸದಸ್ಯರು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ವೇಳೆ ಮಧ್ಯೆಪ್ರವೇಶಿಸಿ ಮಾತನಾಡಿದ ಡಿಸಿ ಡಾ. ರಾಜೇಂದ್ರ, 40 ದಿನದೊಳಗಾಗಿ ಪ್ರತಿ ವಾರ್ಡಿಗೂ ಸದಸ್ಯರೊಂದಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆ ಆಲಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಆದೇಶಿಸಿದರು.
ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ, ನಗರಸಭಾ ಆಯುಕ್ತ ನಂಜುಂಡಸ್ವಾಮಿ, ನಗರಸಭಾ ಸದಸ್ಯರಾದ ಮಹೇಶ್ ಅತ್ತಿಖಾನೆ, ಕಪಿಲೇಶ್, ಸಿದ್ದರಾಜು, ಗಂಗಾಧರ್, ಶ್ರೀಕಂಠಸ್ವಾಮಿ, ನಗರಸಭಾ ಅಧಿಕಾರಿಗಳು ಮತ್ತು ಸದಸ್ಯರು ಇದ್ದರು.