ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಯಿಂದ ನೂತನವಾಗಿ ನಿರ್ಮಾಣ ಮಾಡಿದ ಸುಮಾರು ₹65 ಲಕ್ಷದಲ್ಲಿ ಬಾವಿಗೆ ನಿರ್ಮಿಸಿದ್ದ ತಡೆಗೋಡೆ ಕುಸಿದು ಅಪಾರ ಪ್ರಮಾಣದ ಹಾನಿಯಾದ ಘಟನೆ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ನಡೆದಿದೆ.ರೈತ ಸಿದ್ದಪ್ಪ ಬೋಜಪ್ಪ ಸರಬಡಗಿ ಅವರು ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸುಮಾರು 14 ಎಕರೆ ಜಮೀನಿಗೆ ನೀರುಣಿಸಲು ಬಾವಿ ಕೊರೆದು ಸುತ್ತಲು ಕಲ್ಲಿನಿಂದ ತಡೆಗೋಡೆ ನಿರ್ಮಿಸಿ ಬಾವಿಯಲ್ಲಿ ಸುಮಾರು 7.5ಎಚ್.ಪಿ ಸಾಮರ್ಥ್ಯದ 2 ಮೋಟಾರ್ ಅಳವಡಿಸಿ ಡ್ರಿಪ್ ಮೂಲಕ ತೊಗರಿ ಬೆಳೆ ಬೆಳೆಯಲು ದೇವರಹಿಪ್ಪರಗಿ ಪಟ್ಟಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಿಂದ ಸುಮಾರು ₹30 ಲಕ್ಷ ಸಾಲ ಹಾಗೂ ಊರಲ್ಲಿ ಕೈ ಸಾಲ ₹35 ಲಕ್ಷ ಮಾಡಿ ಜೀವನ ಕಟ್ಟಿಕೊಳ್ಳಲು ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದ.ಮುಂಗಾರು ಒಂದೇ ಮಳೆಗೆ ಬಾವಿ ಕುಸಿತದಿಂದ ಬಾವಿ ತುಂಬೆಲ್ಲ ಕಲ್ಲು ಮಣ್ಣಿನಿಂದ ಆವರಿಸಿದೆ. ಸಾಲ ಮಾಡಿ ಕಟ್ಟಿಸಿದ ಬಾವಿ ಇಲ್ಲವಾಗಿದೆ. ಹಣವೂ ಬಾವಿಪಾಲಾಗಿದೆ. ಮುಂದೇನು ಎಂಬ ಚಿಂತೆಯಲ್ಲಿ ರೈತ ಕಂಗಾಲಾಗಿದ್ದಾನೆ. ಬರಗಾಲದ ಸಮಯದಲ್ಲಿ ಬಾವಿಗೆ ಸಾಕಷ್ಟು ಪ್ರಮಾಣದಲ್ಲಿ ನೀರಿತ್ತು. ಆದರೆ ಗಾಳ ಬೀಳುವ ಪ್ರಮಾಣ ಹೆಚ್ಚಾದ ಕಾರಣ ಶಾಶ್ವತ ಪರಿಹಾರ ಕಂಡುಕೊಳ್ಳಲು ಲಕ್ಷಾಂತರ ಹಣ ಖರ್ಚು ಮಾಡಿ ಬಾವಿಗೆ ತಡೆಗೋಡೆ ನಿರ್ಮಾಣ ಮಾಡಿದ್ದರು. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬಾವಿ ಕುಸಿದು ಮಣ್ಣು ಪಾಲಾಗಿದೆ. ಬಾವಿ ಕುಸಿದಿರುವ ಹಿನ್ನೆಲೆ ಮುಂದೆ ಕೃಷಿಗೆ ನೀರು ಪೂರೈಸುವುದು ಹೇಗೆ ಎಂದು ರೈತ ಚಿಂತಿತರಾಗಿದ್ದಾನೆ.
---------------------ಕೋಟ್.....
ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗುಡ್ಡದ ಕಲ್ಲುಗಳನ್ನು ಬಳಸಿ 110 ಅಡಿ ಆಳದ ಬಾವಿಗೆ 45 ಅಡಿ ಗೋಡೆ ನಿರ್ಮಿಸಿ ಬಾವಿಯ ಸೌಂದರ್ಯದ ಜೊತೆಗೆ ಹೆಚ್ಚಿನ ನೀರು ಸಂಗ್ರಹವಾಗಲು ನಿರ್ಮಾಣ ಮಾಡಲಾಗಿತ್ತು. ಜತೆಗೆ ಬಾವಿಯಲ್ಲಿ ಸುಮಾರು 7.5 ಎಚ್.ಪಿ ಸಾಮರ್ಥ್ಯದ 2 ಮೋಟಾರ್ ಅಳವಡಿಸಿ ಡ್ರಿಪ್ ಮೂಲಕ ಬೆಳೆಗೆ ನೀರುಣಿಸಲು ಮಾಡಿದ ₹65 ಲಕ್ಷ ಮಣ್ಣು ಪಾಲಾಗಿದೆ. ರೈತನ ಬಾಳಿಗೆ ಸರ್ಕಾರದ ಸಹಾಯಹಸ್ತ ಚಾಚಬೇಕು.-ಸಿದ್ದಪ್ಪ ಬೋಜಪ್ಪ ಸಬರಡಗಿ. ಮುಳಸಾವಳಗಿ ಗ್ರಾಮದ ರೈತ.