ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ನಿಶಾ ಮುಕ್ತ ಭಾರತ ಅಭಿಯಾನ, ಧ್ವನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ನಗರದ ಧ್ವನಿ ಸಂಸ್ಥೆ ಆವರಣದಲ್ಲಿ ನಡೆದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಸರ್ಕಾರಗಳು ಪ್ರಜೆಗಳಿಗೆ ಉತ್ತಮ ವಾತಾವರಣ, ಮೂಲಭೂತ ಸೌಲಭ್ಯ, ಶಿಕ್ಷಣ, ಆರೋಗ್ಯವನ್ನು ನೀಡಬೇಕು. ಆದರೆ, ಇಂತಹ ಕೆಲಸವನ್ನು ಮಾಡದೆ ನಮ್ಮ ನಾಯಕರೆನಿಸಿಕೊಂಡವರು ಒಂದು ಕಡೆ ಮದ್ಯಪಾನ ಮಾಡಿ ಎನ್ನುವುದು, ಮತ್ತೊಂದು ಕಡೆ ಮದ್ಯಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುವುದು. ಇದರಿಂದಾಗಿ ಜನತೆ ಗೊಂದಲಕ್ಕೊಳಗಾಗಿ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ ಎಂದು ಕಿಡಿಕಾರಿದರು.ಕೊರೋನಾ ಲಾಕ್‌ಡೌನ್ ನಂತರದ ದಿನಗಳಲ್ಲಿ ಜನ ದಿನಸಿ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲಲಿಲ್ಲ. ಬದಲಿಗೆ ಮದ್ಯದಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದನ್ನು ನೋಡಿದ್ದೇವೆ. ಒಂದು ಕಡೆ ಕುಡಿಸುವುದು, ಮತ್ತೊಂದು ಕಡೆ ತಪ್ಪಿಸುವಂತಹ ಇಬ್ಬಗೆಯ ನೀತಿ ಸರಿಯಲ್ಲ. ಈ ಬಗ್ಗೆ ಸರ್ಕಾರ ಬೇರೆಯದ್ದೇ ಚಿಂತನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮಕ್ಕಳನ್ನು ಸಮಾಜದ ಸತ್ಪ್ರಜೆಗಳನ್ನಾಗಿ ಮಾಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ. ನಮ್ಮ ಮಕ್ಕಳು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಆ ಮೂಲಕ ಸಮಾಜ ಒಳ್ಳೆಯ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂಬುದನ್ನು ನೋಡಬೇಕು ಎಂದು ಸಲಹೆ ನೀಡಿದರು.
ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಜೊತೆಗೆ ತಮ್ಮದೇ ಆದ ಜೀವನ ಇರುತ್ತದೆ. ಕುಟುಂಬವೂ ಇರುತ್ತದೆ. ಅದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ದುಶ್ಚಟಗಳಿಗೆ ದಾಸರಾಗದೆ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಮನುಷ್ಯನಿಗೆ ವಿವೇಚನೆ ಇದೆ. ಚಿಂತನೆ ಮಾಡುವ ಶಕ್ತಿ ಇದೆ. ಇದನ್ನು ಒಳ್ಳೆಯದಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಅದು ಬಿಟ್ಟು ಮಾದಕ ವ್ಯಸನಿಗಳಾಗಬಾರದು ಎಂದ ಅವರು, ಬಾಲ್ಯಾವಸ್ಥೆಯಲ್ಲಿದ್ದಾಗ ಪೋಷಕರು ನೋಡಿಕೊಳ್ಳುತ್ತಾರೆ. ಹದಿಹರೆಯದ ವಯಸ್ಸಿಗೆ ಬಂದಾಗ ದೈಹಿಕ ಮತ್ತು ಮಾನಸಿಕ, ಬೌದ್ಧಿಕ ಬೆಳವಣಿಗೆಯಾಗುತ್ತೆ. ಬೆಳವಣಿಗೆ ಹೊಂದುತ್ತಾರೆ. ಹಾಗಾಗಿ ಸ್ವಲ್ಪ ಸ್ವಾತಂತ್ರ್ಯ ನೀಡುತ್ತಾರೆ. ಇದನ್ನು ದುಶ್ಚಟಗಳ ಬಳಕೆಗೆ ಉಪಯೋಗಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.