- ಕಮಲನಗರ ಸುತ್ತಲಿನ ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಕಡಿತ । ಮನೆಗಳಿಗೆ ನೀರು, ಹೊಲಗಳಲ್ಲಿರುವ ಶೇಂಗಾ, ಕಬ್ಬು ಬೆಳೆಹಾನಿಕನ್ನಡಪ್ರಭ ವಾರ್ತೆ, ಕಮಲನಗರ
ಗುರುವಾರ ಸಂಜೆಯಿಂದ ಸುರಿದ ಮಳೆಯಿಂದ ಕೆಲವರ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ರೈತರ ಹೊಲಗಳಲ್ಲಿ ನೀರು ನಿಂತುಕೊಂಡಿದೆ ಮತ್ತು ಮಣ್ಣಿನ ಒಡ್ಡು ಒಡೆದು ಹೋಗಿದೆ. ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ.
ಬಾಲೂರ ಗ್ರಾಮದ ರೈತರಾದ ಬಾಲಾಜಿ ಪಾಟೀಲ್ ಅವರ ಜಮೀನಿನಲ್ಲಿ ಬೆಳೆದ ತರಕಾರಿ, ಶೇಂಗಾ ಹಾಗೂ ಇನ್ನಿತರ ವಾಣಿಜ್ಯ ಬೆಳೆಯಾದ ಕಬ್ಬು ಸಂಪೂರ್ಣವಾಗಿ ಹಾಳಾಗಿದೆ. ಸತತ ಮಳೆಯಿಂದ ಬಾಲೂರ (ಕೆ) ಗ್ರಾಮದ ದೇವನಾಲಾ ( ದೇವ ನದಿ) ಬಾಂದಾರ ಸೇತುವೆ ಗೇಟ್ ಬಂದ್ ಮಾಡಿದ್ದರಿಂದ ಸುಮಾರು 100 ಎಕರೆ ಜಮಿನು ಜಲಾವೃತಗೊಂಡು ಫಲವತ್ತಾದ ಮಣ್ಣು ಸಹ ಕೊಚ್ಚಿಕೊಂಡಿ ಹೋಗಿದೆ.ರೈತರು ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಅಧಿಕಾರಿಗಳು ಬಾಂದಾರದ ಗೇಟ್ ತೆಗೆಯದಿರುವದರಿಂದ ಬಾಲೂರ ಹಾಗೂ ಮುರುಗ ಗ್ರಾಮಗಳ ಜಮೀನು ಸಂಪೂರ್ಣ ಜಲಾವೃತಗೊಂಡು ಹಾಳಾಗಿದೆ ಎಂದು ರೈತರು ಆರೋಪಿಸಿದ್ದಾರೆ.
----* ಕೋಟ್-1
ಕಮಲನಗರ ತಾಲೂಕಿನಲ್ಲಿ ಸತತ ಭಾರಿ ಮಳೆಯಿಂದ ಬಾಲೂರ ಗ್ರಾಮದ ದೇವನಾಲಾ ಸೇತುವೆ ಗೇಟ್ ಬಂದ್ ಮಾಡಿದ ಕಾರಣ ಮಳೆ ನೀರು ಹೊಲಗಳಿಗೆ ನುಗ್ಗಿದೆ. ಆದ ಕಾರಣ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಾನು ದೂರವಾಣಿ ಮುಖಾಂತರ ಗೇಟ್ ತೆಗೆಯಲು ಸೂಚನೆ ನೀಡಿರುವೆ.- ಅಮಿತಕುಮಾರ ಕುಲಕರ್ಣಿ ತಹಸೀಲ್ದಾರ್, ಕಮಲನಗರ
----* ಕೋಟ್- 2
50 ಸಾವಿರ ರು. ಸಾಲ ಪಡೆದು ಹೊಲದಲ್ಲಿ ಒಂದೂವರೆ ಎಕರೆ ತರಕಾರಿ, ಒಂದೂವರೆ ಎಕರೆ ಶೇಂಗಾ ಹಾಗೂ 5 ಎಕರೆಯಲ್ಲಿ ಕಬ್ಬು ಬೆಳೆ ನಾಟಿ ಮಾಡಿದ್ದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಎಲ್ಲ ಬೆಳೆಗಳೂ ಸಂಪೂರ್ಣವಾಗಿ ನಾಶವಾಗಿದ್ದರಿಂದ ಪರೀಶಿಲನೆ ಮಾಡಿ ಸರ್ಕಾರದಿಂದ ಪರಿಹಾರ ನೀಡಬೇಕಾಗಿ ಮನವಿ ಮಾಡುತ್ತೇನೆ.- ಬಾಲಾಜಿ ಪಾಟೀಲ್, ಬಾಲೂರ (ಕೆ) ಗ್ರಾಮದ ರೈತ
----* ಕೋಟ್-3
ಮಳೆ ಹೆಚ್ಚಾಗಿದ್ದ ಕಾರಣ ನಾವು ಪರಿಶೀಲನೆ ಮಾಡಿ ಪ್ರತಿ ಬಾಂದಾರ ಸೇತುವೆಯ ಎರಡೆರಡು ಗೇಟ್‌ಗಳನ್ನು ತೆಗೆದು ನೀರು ಹೋಗಲು ದಾರಿ ಮಾಡಿದ್ದೇವೆ. ಬಾಲೂರ (ಕೆ), ಕಮಲನಗರ, ಡಿಗ್ಗಿ, ಹೋಳಸಮುದ್ರ , ಸಾವಳಿ ಈ ಗ್ರಾಮಗಳಲ್ಲಿನ ಬಾಂದಾರದ ಗೇಟ್ ತೆಗದಿರುತ್ತೇವೆ ಹಾಗೆಯೇ ಬಾಲೂರ ಗ್ರಾಮದ ಹತ್ತಿರ ಸೇತುವೆ ಪಕ್ಕದ ಖಡ್ಡಗಳನ್ನು ಬೇರೆ ಕಡೆಯಿಂದ ಮುರುಮ ತಂದು ಭರ್ತಿ ಮಾಡಿರುತ್ತೇವೆ.- ವಿರೇಶ ಜೀರ್ಗೆ, ಸಣ್ಣ ನೀರಾವರಿ ಇಲಾಖೆಯ ಕಿರಿಯ ಅಭಿಯಂತರರು