ಭಾರಿ ಮಳೆಯಿಂದ ಹೊಳೆನರಸೀಪುರ ಬೈಪಾಸ್ ರಸ್ತೆಯಲ್ಲಿ ನೀರು, ಸಂಚಾರ ದುಸ್ಥರ

KannadaprabhaNewsNetwork |  
Published : May 19, 2024, 01:46 AM IST
ಹೊಳೆನರಸೀಪುರ ಪಟ್ಟಣದ ಬೈಪಾಸ್ ರಸ್ತೆ ಶುಕ್ರವಾರ ಸುರಿದ ಜೋರು ಮಳೆಗೆ ಕೆರೆಯಂತಾಗಿದ್ದ ರಸ್ತೆಯಲ್ಲಿ ವಾಹನ ಸವಾರರು ವಾಹನ ಚಲಾಯಿಸಲು ಪರದಾಡಿದರು. | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕಿನಲ್ಲಿ ಶುಕ್ರವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೆ, ಪಟ್ಟಣದ ಬೈಪಾಸ್ ರಸ್ತೆಯ ನಿವಾಸಿಗಳಲ್ಲಿ ಕಣ್ಣೀರು ತರಿಸಿದೆ.

ಧಾರಾಕಾರ ಸುರಿದ ವರುಣನಿಂದ ರೈತರಲ್ಲಿ ಸಂತಸ । ಕೆರೆಯಂತಾದ ರಸ್ತೆ । ಕೊಳಚೆ ನೀರಿನಿಂದ ಜನ ಹೈರಾಣ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನಲ್ಲಿ ಶುಕ್ರವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೆ, ಪಟ್ಟಣದ ಬೈಪಾಸ್ ರಸ್ತೆಯ ನಿವಾಸಿಗಳಲ್ಲಿ ಕಣ್ಣೀರು ತರಿಸಿದೆ.

ಶುಕ್ರವಾರ ಸಂಜೆ 6 ಗಂಟೆ ಸುಮಾರಿನಲ್ಲಿ ಪ್ರಾರಂಭವಾದ ಮಳೆ ನಿರಂತರವಾಗಿ 8.30ರವರೆಗೂ ಜೋರಾಗಿ ಸುರಿದ ಪರಿಣಾಮ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯಲು ಸಾಧ್ಯವಾಗದೆ ಹಾಸನ-ಮೈಸೂರು ಹೆದ್ದಾರಿ ಮತ್ತು ರೈಲ್ವೆ ಸ್ಟೇಷನ್ ಸಮೀಪದ ಬೈಪಾಸ್ ರಸ್ತೆಗೆ ನುಗ್ಗಿದ ಪರಿಣಾಮ ಅದು ಕೆರೆಯಂತಾಗಿತ್ತು. ವಾಹನ ಸವಾರರು ಕೆರೆಯಂತಿದ್ದ ರಸ್ತೆಯಲ್ಲಿ ವಾಹನ ಚಲಾಯಿಸಲು ಪರದಾಡುತ್ತಿದ್ದರೆ, ಬೈಪಾಸ್ ಪಕ್ಕದ ಮನೆಗಳ ನಿವಾಸಿಗಳು ಮಳೆ ನೀರು ಜತೆಗೆ ಮಿಶ್ರಣವಾಗಿದ್ದ ಚರಂಡಿಯ ಕೊಳಚೆ ನೀರು ಮನೆ ಮುಂದಿನ ಹೊರಾಂಗಣಕ್ಕೆ ಬಾರದಂತೆ ತಡೆಯಲು ಶತ ಪ್ರಯತ್ನ ಮಾಡುತ್ತಿದ್ದರೂ ಕೊಳಚೆ ನೀರು ನೀರಿನ ಸಂಪಿನ ಒಳಕ್ಕೆ ಹರಿಯಿತು.

ಇದೇ ರೀತಿ 2023ರಲ್ಲಿಯೂ ಸಂಪಿನ ಒಳಗೆ ಕೊಳಚೆ ನೀರು ಸೇರಿಕೊಂಡಿದ್ದ ಕಾರಣದಿಂದ ಸಂಪು ಸ್ವಚ್ಛಗೊಳಿಸಿ, ಪುನಃ ನೀರು ತುಂಬಿಸುವ ತನಕ ನಿವಾಸಿಗಳಿಗೆ ನೆಮ್ಮದಿಯ ಜೀವನ ಮರೀಚಿಕೆಯಾಗಿತ್ತು. ಶುಕ್ರವಾರ ಸಂಜೆಯ ಮಳೆಯ ಅವಾಂತರವು ಬೈಪಾಸ್ ರಸ್ತೆಯ ನಿವಾಸಿಗಳ ನೆಮ್ಮದಿಯನ್ನು ಶನಿವಾರವೂ ಕಸಿದುಕೊಂಡಿದೆ.

ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ 2023ರಲ್ಲಿ ಮಳೆಯ ಅವಾಂತರ ಮತ್ತು ಬೈಪಾಸ್ ರಸ್ತೆಯ ನಿವಾಸಿಗಳ ಗೋಳನ್ನು ಪ್ರತ್ಯಕ್ಷವಾಗಿ ಕಂಡಿದ್ದ ಕಾರಣದಿಂದ ಶುಕ್ರವಾರ ರಾತ್ರಿ ಮಳೆ ಸರಾಗವಾಗಿ ಹರಿಯುವಂತೆ ಮಾಡಲು ನೀರಿನ ಹರಿದು ಬಂದ ತ್ಯಾಜ್ಯವು ಚರಂಡಿಯ ತಿರುವುಗಳಲ್ಲಿ ಶೇಖರಣೆ ಆಗಿದ್ದನ್ನು ಸ್ವಚ್ಛಗೊಳಿಸಲು ಮಳೆಯಲ್ಲೇ ನಿಂತು ನಿರ್ದೇಶನ ನೀಡುತ್ತಿದ್ದರು. ಆದರೂ ಮಳೆ ನೀರು ಬೈಪಾಸ್ ರಸ್ತೆಯ ಮನೆಗಳಿಗೆ ನುಗ್ಗಿದ್ದು, ತಾತ್ಕಾಲಿಕ ಕ್ರಮ ಕೈಗೊಂಡು ನೀರು ಹರಿಯಲು ಅಗತ್ಯ ವ್ಯವಸ್ಥೆ ಮಾಡುವ ಜತೆಗೆ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ