ಚಿಪ್ಪು ಸುಡುವ ದಟ್ಟ ಹೊಗೆಯಿಂದ ಪರಿಸರಕ್ಕೆ ತೀವ್ರ ಧಕ್ಕೆ

KannadaprabhaNewsNetwork | Published : Mar 15, 2024 1:17 AM

ಸಾರಾಂಶ

ನಗರದ ಹಾಸನ ರಸ್ತೆಯಿಂದ ಅನಗೊಂಡನಹಳ್ಳಿ ಮಾರ್ಗದಲ್ಲಿ ಕೊಬ್ಬರಿ ಚಿಪ್ಪುಗಳನ್ನು ಕೃಷಿ ಭೂಮಿಯಲ್ಲಿ ಸುಡುವ ಕೈಗಾರಿಕೆಗಳು ಇದ್ದು, ಇದರಿಂದ ಉಂಟಾಗುತ್ತಿರುವ ದಟ್ಟ ಹೊಗೆ ಕಿಲೋಮೀಟರ್‌ಗಟ್ಟಲೆ ಹರಡಿ ಪರಿಸರಕ್ಕೆ ಧಕ್ಕೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಹಾಸನ ರಸ್ತೆಯಿಂದ ಅನಗೊಂಡನಹಳ್ಳಿ ಮಾರ್ಗದಲ್ಲಿ ಕೊಬ್ಬರಿ ಚಿಪ್ಪುಗಳನ್ನು ಕೃಷಿ ಭೂಮಿಯಲ್ಲಿ ಸುಡುವ ಕೈಗಾರಿಕೆಗಳು ಇದ್ದು, ಇದರಿಂದ ಉಂಟಾಗುತ್ತಿರುವ ದಟ್ಟ ಹೊಗೆ ಕಿಲೋಮೀಟರ್‌ಗಟ್ಟಲೆ ಹರಡಿ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಜೊತೆಗೆ ವಿಪರೀತ ತಾಪಮಾನ ಕೃಷಿ, ತೋಟಗಾರಿಕೆಗಳ ಇಳುವರಿ ಮೇಲೆ ತೀವ್ರ ಪ್ರಭಾವ ಬೀರುತ್ತಿದೆ. ಪರಿಸರ ಇಲಾಖೆ ಅಥವಾ ತಾಲೂಕು ಆಡಳಿತ ಯಾವುದೇ ಕ್ರಮಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ತಾಲೂಕಿನ ಅನೇಕ ಭಾಗಗಳಲ್ಲಿ ಕೃಷಿಗೆ ಯೋಗ್ಯವಾಗಿರುವ ಬಯಲು ಪ್ರದೇಶದ ಜಮೀನುಗಳನ್ನೇ ಆಯ್ಕೆ ಮಾಡಿಕೊಂಡು ತಂದುಕೊಡುವ ಚಿಪ್ಪು ಸುಡುವ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಕೃಷಿ ಭೂಮಿಯಲ್ಲೇ ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆದು ಲೋಡುಗಟ್ಟಲೆ ಕೊಬ್ಬರಿ ಚಿಪ್ಪುಗಳನ್ನು ಸುರಿದು ಬೆಂಕಿ ಹಚ್ಚುತ್ತಿದ್ದು, ದಟ್ಟ ಹೊಗೆ ಕೃಷಿ ಭೂಮಿಯ ದುಷ್ಟರಿಣಾಮ ಬೀರುತ್ತಿದೆ. ಇದರಿಂದಾಗಿ ಗಿಡ-ಮರಗಳಿಗೆ ಸುಟ್ಟ ರೋಗ ಬಂದಂತಾಗಿದೆ.

ಹೊಗೆಯಿಂದ ರೈತ ಉಪಕಾರಿಗಳಾದ ಜೇನು ಮತ್ತಿತರೆ ಕೀಟಗಳು, ಪಕ್ಷಿ ಸಂಕುಲಗಳು ನಾಶವಾಗಿ ಬೆಳೆಗಳ ಇಳುವರಿ ವಿಪರೀತವಾಗಿ ಕಡಿಮೆಯಾಗಿದೆ. ಅತಿಯಾದ ತಾಪಮಾನಕ್ಕೆ ಖುಷ್ಕಿ ಬೆಳೆಗಳಾದ ರಾಗಿ, ತೊಗರಿ ಜೋಳ ಸೇರಿದಂತೆ ತೆಂಗು, ಅಡಿಕೆ ಮತ್ತು ಬಾಳೆ ನಾನಾ ರೋಗ-ರುಜಿನೆಗಳಿಗೆ ಈಡಾಗುತ್ತಿವೆ. ಇದರಿಂದ ರೈತನಿಗೆ ತೀವ್ರ ಹೊಡೆತ ಬೀಳುತ್ತಿದೆ. ಅಲ್ಲದೆ ಕೆಲ ಭಾಗಗಳಲ್ಲಿ ರಸ್ತೆಯ ಪಕ್ಕದಲ್ಲಿಯೇ ಚಿಪ್ಪು ಸುಡುತ್ತಿರುವ ಕಾರಣ ಹೊಗೆಯಿಂದ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ.

ಕೃಷಿ ಜಮೀನುಗಳಿಗೆ ಕಂಟಕ ತರುತ್ತಿರುವ ಈ ಉದ್ಯಮಗಳು ಯಾವುದೇ ಇಲಾಖೆಗಳ ಪರವಾನಗಿ ಪಡೆಯದಿದ್ದರೂ ಸ್ಥಳೀಯ ಆಡಳಿತ, ತಾಲೂಕು ಆಡಳಿತದವರು ಕ್ರಮ ಕೈಗೊಳ್ಳುತ್ತಿಲ್ಲ. ಚಿಪ್ಪು ಸುಡುವ ಉದ್ಯಮ ಪ್ರಶ್ನಿಸಬೇಕಾದ ಕಂದಾಯ, ಪರಿಸರ, ಕೈಗಾರಿಕೆ ಇಲಾಖೆ ಸೇರಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಾಣ ಕರುಡು ಪ್ರದರ್ಶನ ಮಾಡುತ್ತಿದ್ದಾರೆ. ಅವೈಜ್ಞಾನಿಕ ಚಿಪ್ಪು ಸುಡುವ ಉದ್ಯಮಗಳನ್ನು ಕೂಡಲೇ ಬಂದ್ ಮಾಡಿಸುವ ಮೂಲಕ ಈ ಉದ್ಯಮಕ್ಕೆ ವೈಜ್ಞಾನಿಕ ನೆಲೆ ಕಲ್ಪಿಸಬೇಕಾಗಿದೆ. -----------------------------

ನಮ್ಮ ಜಮೀನು ಪಕ್ಕದಲ್ಲಿಯೇ ಚಿಪ್ಪು ಸುಡುವ ಉದ್ಯಮ ನಡೆಯುತ್ತಿದ್ದು, ಇದರಿಂದ ತೆಂಗು ಮತ್ತು ಅಡಿಕೆ ಮರಗಳ ಸುಳಿಯ ಮೇಲೆ ಹೊಗೆಯ ಧೂಳು ಕುಳಿತುಕೊಂಡು ಸುಳಿ ಬೀಳುವಂತಾಗಿವೆ. ಯಾವುದೇ ತರಕಾರಿ ಬೆಳೆಗಳನ್ನು ಬೆಳೆದರೂ ಒಣಗುತ್ತಿವೆ. ನಾವು ಸಾಲಮಾಡಿಕೊಂಡು ಬೆಳೆ ಬೆಳೆಯುತ್ತೇವೆ. ಆದರೆ ಹೊಗೆಯ ಪರಿಣಾಮ ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಚಿಪ್ಪು ಸುಡುವ ಮಾಲೀಕರಿಗೆ ಹೇಳಿದರೂ ಅವರು ಕಿವಿಕೊಡುತ್ತಿಲ್ಲ. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕಿದ್ದು ಕೂಡಲೆ ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕು.

- ಕಿರಣ್, ರೈತ, ತಿಪಟೂರು

Share this article