ಜಾತ್ರೆ: ಏಳು ಹೊಡೆತಕ್ಕೆ ದುಗ್ಗಮ್ಮನ ಕೋಣ ಬಲಿ!

KannadaprabhaNewsNetwork |  
Published : Feb 26, 2026, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ದೇವಿ ಕೋಣವನ್ನು ಅಲ್ಲಿ ಒಯ್ಯುತ್ತಿದ್ದಾರೆ, ಇಲ್ಲಿ ಹೋಯ್ತಂತೆ, ಇಲ್ಲೋ ಮಾರಾಯ ಇನ್ನೂ ಕೋಣವನ್ನ ಸುತ್ತಾಡಿಸುತ್ತಿದ್ದಾರಂತೆ ಅಂತೆಲ್ಲಾ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಪ್ರದೇಶದಲ್ಲಿ ಸಾವಿರಾರು ಜನರ ಬಾಯಿಯಲ್ಲಿ ಮಾತು ಕೇಳಿ ಬರುತ್ತಿದ್ದಂತೆಯೇ ಬಸವರಾಜ ಪೇಟೆಯ ಚೌಡಮ್ಮ ದೇವಸ್ಥಾನ ಬಳಿ ನಸುಕಿನ 2.45ರ ವೇಳೆಗೆ ಬರೋಬ್ಬರಿ ಏಳು ಹೊಡೆತಕ್ಕೆ ದೇವಿಯ ಕೋಣ ಬಲಿ ಕೊಡಲಾಗಿದೆ.

- ಬಸವರಾಜ ಪೇಟೆ ಚೌಡಮ್ಮ ದೇವಸ್ಥಾನ ಬಳಿ ನಿರ್ಜನ ಪ್ರದೇಶದಲ್ಲಿ ವಧೆ । ಕೋಣದ ಕಾಲನ್ನು ಹಿಡಿದು ಜನರ ಮೇಲೆ ಹಲ್ಲೆ; ದೃಶ್ಯ ವೈರಲ್‌

- - -

* ಮುಖ್ಯಾಂಶಗಳು - ಕೋಣದ ತಲೆಗೆ ಕತ್ತರಿಸಿದ ಕಾಲನ್ನು ಬಾಯಿಗೆ ಅಡ್ಡ ಇಟ್ಟು ದುಗ್ಗಮ್ಮನ ದೇವಸ್ಥಾನ ಬಳಿಗೆ ತಂದಿದ್ದ ಭಕ್ತರು

- ದೇಗುಲ ಬಳಿಯಿಂದ ಮಿಂಚಿನ ವೇಗದಲ್ಲಿ ಗಾಂಧಿ ನಗರದ ಚೌಕಿಮನೆಗೆ ಕೋಣನ ತಲೆ ಸಾಗಿಸುವ ಆಚರಣೆ

- ದಾವಣಗೆರೆ ಹಳೇ ಭಾಗಕ್ಕೆ ಸಹಸ್ರಾರು ಯುವಕರು ಪುಟ್ಟಿಯಲ್ಲಿ ಜೋಳದ ಚರಗ ಚೆಲ್ಲುತ್ತಾ ಜಾತ್ರೆಗೆ ಮೆರಗು

- -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇವಿ ಕೋಣವನ್ನು ಅಲ್ಲಿ ಒಯ್ಯುತ್ತಿದ್ದಾರೆ, ಇಲ್ಲಿ ಹೋಯ್ತಂತೆ, ಇಲ್ಲೋ ಮಾರಾಯ ಇನ್ನೂ ಕೋಣವನ್ನ ಸುತ್ತಾಡಿಸುತ್ತಿದ್ದಾರಂತೆ ಅಂತೆಲ್ಲಾ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಪ್ರದೇಶದಲ್ಲಿ ಸಾವಿರಾರು ಜನರ ಬಾಯಿಯಲ್ಲಿ ಮಾತು ಕೇಳಿ ಬರುತ್ತಿದ್ದಂತೆಯೇ ಬಸವರಾಜ ಪೇಟೆಯ ಚೌಡಮ್ಮ ದೇವಸ್ಥಾನ ಬಳಿ ನಸುಕಿನ 2.45ರ ವೇಳೆಗೆ ಬರೋಬ್ಬರಿ ಏಳು ಹೊಡೆತಕ್ಕೆ ದೇವಿಯ ಕೋಣ ಬಲಿ ಕೊಡಲಾಗಿದೆ.

ಜಾತ್ರೆಯಲ್ಲಿ ಕೋಣ ಬಲಿ ತಡೆಯಲು ದುಗ್ಗಮ್ಮನ ದೇವಸ್ಥಾನ ಸುತ್ತಮುತ್ತ, ಸಮೀಪದ ಪ್ರದೇಶಗಳಲ್ಲಿ, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸ್ ಅಧಿಕಾರಿಗಳು, ಕ್ಷಿಪ್ರ ಕಾರ್ಯಾಚರಣೆ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಗೃಹ ರಕ್ಷಕ ದಳದ ಪಹರೆಯೂ ಇತ್ತು. ಈ ಮಧ್ಯೆಯೂ ವಾಹನವೊಂದರಲ್ಲಿ ಹಳೇ ಭಾಗದ ವಿವಿಧೆಡೆ ರಾತ್ರೋರಾತ್ರಿ ದೇವಿ ಕೋಣವನ್ನು ಸುತ್ತಾಡಿಸಿ, ಕಡೆಗೆ ಬಸವರಾಜ ಪೇಟೆಯ ಚೌಡಮ್ಮನ ದೇವಸ್ಥಾನ ಸಮೀಪದ ನಿರ್ಜನ ಪ್ರದೇಶದಲ್ಲಿ ದುಗ್ಗಮ್ಮನ ಕೋಣವನ್ನು ಜಾತ್ರೆ ಹೆಸರಿನಲ್ಲಿ ಬಲಿ ಕೊಡಲಾಯಿತು ಎನ್ನಲಾಗಿದೆ.

ಕೋಣದ ತಲೆ ಮೆರವಣಿಗೆ- ಪುಟ್ಟಿಯಲ್ಲಿ ಜೋಳದ ಚರಗ:

ದುಗ್ಗಮ್ಮನ ಗುಡಿ ಬಳಿ ಇದ್ದವರ ಮೊಬೈಲ್‌ಗೆ ಮೆಸೇಜ್‌, ವಾಟ್ಸಪ್ ವೀಡಿಯೋ, ಕರೆಗಳು ಬರುವುದರೊಂದಿಗೆ ನೋಡ ನೋಡುತ್ತಿದ್ದಂತೆಯೇ ದುಗ್ಗಮ್ಮನ ಉಘೇ... ಉಘೇ..., ದುಗ್ಗಮ್ಮ ನಿನ್ನಾಲ್ಕು ಉಧೋ.. ಉಧೋ... ಎಂಬ ಭಕ್ತಿ ಪರವಷತೆಯ ಘೋಷಣೆಗಳು ಮೊಳಗತೊಡಗಿದವು. ಬಲಿಯಾದ ಕೋಣದ ತಲೆ ಹಾಗೂ ಕೋಣದ ಕಾಲನ್ನು ಕತ್ತರಿಸಲಾಗಿತ್ತು. ಕತ್ತರಿಸಿದ ಕಾಲನ್ನು ಕೋಣದ ಬಾಯಿಗೆ ಅಡ್ಡ ಇಟ್ಟು, ದುಗ್ಗಮ್ಮನ ದೇವಸ್ಥಾನ ಬಳಿಗೆ ಮಿಂಚಿನ ವೇಗದಲ್ಲಿ ತಂದು, ಅಲ್ಲಿಂದ ಮತ್ತೆ ಗಾಂಧಿ ನಗರದ ಚೌಕಿಮನೆಗೆ ಒಯ್ಯುವುದರೊಂದಿಗೆ ಧಾರ್ಮಿಕ ಕಾರ್ಯ ನೆರವೇರಿತು. ಅನಂತರ ನಗರದ ಹಳೇ ಭಾಗಕ್ಕೆ ಸಹಸ್ರಾರು ಯುವಕರು ಪುಟ್ಟಿಯಲ್ಲಿ ಜೋಳದ ಚರಗ ಚೆಲ್ಲುತ್ತಾ ದುಗ್ಗಮ್ಮ ಜಾತ್ರೆಗೆ ಮೆರಗು ತಂದರು.

ಬಂದೋಬಸ್ತ್‌ ನಡುವೆಯೂ ಕೋಣ ವಧೆ:

ದುಗ್ಗಮ್ಮ ದೇವಸ್ಥಾನದ ಸುತ್ತಮುತ್ತಲಿನ 200 ಮೀಟರ್ ಪ್ರದೇಶದ ವ್ಯಾಪ್ತಿಯನ್ನು ಬಲಿ ನಿಷಿದ್ಧ ಪ್ರದೇಶವಾಗಿದ್ದರಿಂದ ಅಲ್ಲಿ ಹೆಚ್ಚು ಬಂದೋಬಸ್ತ್ ಮಾಡಲಾಗಿತ್ತು. ದೇವಸ್ಥಾನ ಹಾಗೂ ನಿಷೇಧಿತ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುತ್ತಿದ್ದರು. ಆದರೆ, ದುಗ್ಗಮ್ಮನ ಕೋಣವನ್ನು ಅಲ್ಲಿಗೆ ತರದೇ, ವಿವಿಧೆಡೆ ಸುತ್ತಾಡಿಸಿ, ನಂತರ ಬಸವರಾಜ ಪೇಟೆಯ ಚೌಡಮ್ಮ ದೇವಸ್ಥಾನ ಬಳಿ ಬಲಿ ಕೊಡಲಾಯಿತು. ಕೋಣದ ಬಲಿಯಾಗದೇ, ದುಗ್ಗಮ್ಮನ ಜಾತ್ರೆ ಆಗದೆಂಬ ಹಳೆ ಭಾಗದಲ್ಲಿ ಇರುವ ಮಾತು ಮತ್ತೊಂದು ಜಾತ್ರೆಯಲ್ಲೂ ಸಾಬೀತಾಯಿತು.

- - -

(ಬಾಕ್ಸ್-1)

* ದೇವಸ್ಥಾನ ಬಳಿ ನಿಷಿದ್ಧ ಪ್ರದೇಶ, ಬಂದೋಬಸ್ತ್ ದೇವಸ್ಥಾನದ ಸುತ್ತಮುತ್ತ, ಸಮೀಪ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಜೊತೆಗೆ ಪೊಲೀಸರು ಹದ್ದಿನ ಕಣ್ಣಿಟ್ಟು ಕಾದಿದ್ದರು. ಆದರೆ, ಬಸವರಾಜ ಪೇಟೆಯಲ್ಲಿ ಕೋಣ ಬಲಿಯಾದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಅಲ್ಲಿಗೆ ಹೋದರೆ ರಕ್ತ ಚೆಲ್ಲಾಪಿಲ್ಲಿಯಾಗಿದ್ದು ಬಿಟ್ಟರೆ ಬೇರೇನೂ ಅಲ್ಲಿ ಕಾಣಲಿಲ್ಲ. ಅಲ್ಲಲ್ಲಿ ಬಿದ್ದಿದ್ದ ಬೈಕ್‌ಗಳು, ನಿರ್ಜನ ರಸ್ತೆಗಳು ಪೊಲೀಸರ ಗಮನಕ್ಕೆ ಬಂದಿದ್ದಷ್ಟೆ. ದೇವಸ್ಥಾನ ಸಮೀಪ ಪ್ರಾಣಿ ಬಲಿ ತಡೆಗೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ, ಕೋಣ ಬಲಿ ತಡೆಗೆ ಮುಂದಾದರು. ಆದರೆ, ಬೇರೆ ಕಡೆ ದೇವಿ ಕೋಣ ಬಲಿಯಾಗುವ ಮೂಲಕ ಜಾತ್ರೆಗೆ ಆಚರಣೆಗೆ ಆಗಬೇಕಾದ ಕಾರ್ಯವೂ ನೆರವೇರಿದಂತಾಯಿತು.

ಭಕ್ತಿಯ ಉನ್ಮಾದದಲ್ಲಿ ದೊಡ್ಡ ದೊಡ್ಡ ಮಚ್ಚುಗಳನ್ನು ಹಿಡಿದು, ಒಂದು, ಎರಡು, ಮೂರು, ನಾಲ್ಕು ಅಂತಾ ಎಣಿಸುತ್ತಲೇ, ಏಳನೇ ಹೊಡೆತಕ್ಕೆ ಕೋಣ ಬಲಿ ಕೊಡುವ ಮೂಲಕ ಅದರ ರುಂಡ ಮತ್ತು ಮುಂಡ ಬೇರ್ಪಡಿಸಿದರು. ಕೋಣ ಬಲಿ ಸುದ್ದಿ ತಿಳಿಯುತ್ತಲೇ ದೇವಸ್ಥಾನ ಬಳಿ ಇದ್ದ ಭಕ್ತರಿಂದ ಹರ್ಷೋದ್ಘಾರ ಮುಗಿಲು ಮುಟ್ಟುವುದರೊಂದಿಗೆ ದುಗ್ಗಮ್ಮನ ಜಾತ್ರೆ ವಿಧ್ಯುಕ್ತ ಚಾಲನೆ ಪಡೆಯಿತು. ಜಾತ್ರೆವೇಳೆ ಕೋಣ ಸೇರಿದಂತೆ ಯಾವುದೇ ಪ್ರಾಣಿಗಳನ್ನು ಸಾರ್ವಜನಿಕವಾಗಿ ಬಲಿ ಕೊಡುವುದಕ್ಕೆ ಕಾನೂನಿನ ಪ್ರಕಾರ ಅವಕಾಶ ಇಲ್ಲ. ಒಂದುವೇಳೆ ಕೋಣ ಬಲಿಯಾಗಿದ್ದು ಸಾಬೀತಾದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮಕ್ಕೆ ಸನ್ನದ್ಧವಾಗಿದ್ದವು.

- - -

(ಬಾಕ್ಸ್‌-2)

* ಕೋಣದ ರಕ್ತ-ಧಾನ್ಯಗಳ ಮಿಶ್ರಣದ ಚರಗ ಆಚರಣೆ ಬಲಿ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಜೋಳ ಇತರೆ ಧಾನ್ಯಗಳಿಗೆ ಬಲಿಯಾದ ಕೋಣದ ರಕ್ತವನ್ನು ಬೆರೆಸಿ, ಬಿದಿರಿನ ಪುಟ್ಟಿಗಳಲ್ಲಿ ಊರಿನ ಅಷ್ಟದಿಕ್ಕುಗಳಿಗೂ ಚೆಲ್ಲುತ್ತಾ ಹುಲಿಗ್ಯೋ.... ಹುಲಿಗ್ಯಾ..., ಉಘೇ.. ಉಘೇ..., ದುಗ್ಗಮ್ಮ ನಿನ್ನಾಲ್ಕು ಉಧೋ... ಉಧೋ... ಎಂಬ ಘೋಷಣೆಗಳನ್ನು ಕೂಗುತ್ತಾ, ಸಾವಿರಾರು ಯುವಕರು ಒಂದು ಕ್ಷಣವನ್ನೂ ವ್ಯರ್ಥ ಮಾಡದಂತೆ ಚರಕ ಚೆಲ್ಲುವುದರಲ್ಲಿ ತಲ್ಲೀನರಾಗಿದ್ದರು. ಚರಗ ಚೆಲ್ಲುವುದರಿಂದ ಊರಿನಲ್ಲಿ ಶಾಂತಿ, ಸಾಮರಸ್ಯ, ಸಮೃದ್ಧಿ ನೆಲೆಸುತ್ತದೆ. ಮಳೆ, ಬೆಳೆ ಉತ್ತಮವಾಗಿ ನಡೆಯುತ್ತದೆಂಬ ಪ್ರತೀತಿ ಇದೆ. ಅದರಂತೆ ಚರಗ ಕಾರ್ಯವೂ ಸಾಂಗವಾಗಿ ನಡೆಯಿತು.

- - -

(ಬಾಕ್ಸ್‌-3) * ಬಲಿಯಾದ ಕೋಣದ ಕಾಲಿನಿಂದ ಹಲ್ಲೆ: ವೈರಲ್‌ದುಗ್ಗಮ್ಮನ ದೇವಸ್ಥಾನ ಬಳಿ ಇದ್ದವರು, ತಮ್ಮ ಮನೆಗಳ ಮುಂದೆ, ಮನೆಗಳ ಮೇಲೆ ನಿಂತವರು ಕೈಗೆ ಸಿಕ್ಕಷ್ಟು ಚರಗದ ಧಾನ್ಯವನ್ನು ಜೋಪಾನವಾಗಿ ಸಂಗ್ರಹಿಸಿ, ತಮ್ಮ ಮನೆ ಮೇಲೆ ಹಾಕಿಕೊಂಡು, ಹರ್ಷೋದ್ಘಾರ ಮಾಡುತ್ತಾ ಮನೆಗಳಲ್ಲಿ ಹಬ್ಬ ಮಾಡಲು ತೆರಳಿದರು. ಅಜ್ಞಾತ ಸ್ಥಳ‍ವೊಂದರಲ್ಲಿ ಕೋಣ ಬಲಿ ಕೊಡುವ ವೇಳೆ ಸೇರಿದ್ದ ಜನರ ಮೇಲೆ ವ್ಯಕ್ತಿಯೊಬ್ಬ ಕಡಿಯಲ್ಪಟ್ಟ ಕೋಣದ ಕಾಲಿನಿಂದ ಮನಸೋ ಇಚ್ಛೆ ಹೊಡೆಯುವ ದೃಶ್ಯವೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

* ಚೌಡೇಶ್ವರಿ ಕೋಣದ ಅವಾಂತರ

ಮತ್ತೊಂದು ಕಡೆ ವಿನೋಬ ನಗರ ಶ್ರೀ ಚೌಡೇಶ್ವರಿ ದೇವಸ್ಥಾನದ ಕೋಣವನ್ನು ಇಲ್ಲಿನ ಡಾ. ಎಂ.ಸಿ. ಮೋದಿ ವೃತ್ತದ ಗುಂಡಿ ಕಲ್ಯಾಣ ಮಂಟಪ ಪಕ್ಕ ಬಲಿ ಕೊಡಲು ಒಯ್ದಾಗ ಅದು ನಿಯಂತ್ರಣಕ್ಕೆ ಬಾರದೇ ಪಕ್ಕದ ಸಾಲು ಸಾಲು ತಿಂಡಿ ಗಾಡಿಗಳ ಮೇಲೆ ನುಗ್ಗಿದ್ದರಿಂದ ಗಾಡಿಗಳು ಚೆಲ್ಲಾಪಿಲ್ಲಿಯಾಗಿದ್ದವು.

- - -

-(ಫೋಟೋಗಳಿವೆ.)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೭೨ ರಾಸುಗಳ ಮಾಲೀಕರಿಗೆ ೧೬೮.೫ಗ್ರಾಂ ಚಿನ್ನ ಬಹುಮಾನ
ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿ: ರಾಮಕೃಷ್ಣೇಗೌಡ