ಸಿಂದೂರ ಯಶಸ್ಸಿಗೆ ದುಗ್ಗಮ್ಮಗೆ ಪೂಜೆ

KannadaprabhaNewsNetwork | Published : May 11, 2025 1:22 AM
10ಕೆಡಿವಿಜಿ1, 2-ಪಾಕಿಸ್ಥಾನದ ವಿರುದ್ದ ಆಪರೇಷನ್ ಸಿಂದೂರ್ ಕೈಗೊಂಡಿರುವ ಭಾರತೀಯ ಸೇನೆ, ಯೋಧರಿಗೆ ಇನ್ನೂ ಹೆಚ್ಚು ಶಕ್ತಿ ನೀಡುವಂತೆ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಜವಾಹರ ಬಾಲ್ ಮಂಚ್‌ನಿಂದ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ........................10ಕೆಡಿವಿಜಿ3, 4-ಪಾಕಿಸ್ಥಾನದ ವಿರುದ್ದ ಆಪರೇಷನ್ ಸಿಂದೂರ್ ಕೈಗೊಂಡಿರುವ ಭಾರತೀಯ ಸೇನೆ, ಯೋಧರಿಗೆ ಇನ್ನೂ ಹೆಚ್ಚು ಶಕ್ತಿ ನೀಡುವಂತೆ ದಾವಣಗೆರೆ ನಗರದ ಹಜರತ್ ಶಾ ವಲಿ ದರ್ಗಾದಲ್ಲಿ ಜವಾಹರ ಬಾಲ್ ಮಂಚ್‌ನಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಭಾರತೀಯ ಸೇನೆಗಳು, ನಮ್ಮ ವೀರ ಯೋಧರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡುವಂತೆ, ಭಾರತೀಯ ಸೇನೆ, ಯೋಧರ ಸುರಕ್ಷತೆಗೆ ನಗರ ದೇವಸ್ಥಾನ, ದರ್ಗಾಗಳಲ್ಲಿ ಜಿಲ್ಲಾ ಜವಾಹರ್ ಬಾಲ್ ಮಂಚ್‌ನಿಂದ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

ವಿಶ್ವ ಭೂಪಟದಲ್ಲಿ ಪಾಕಿಸ್ತಾನ ಅಸ್ತಿತ್ವ ಇಲ್ಲವಾಗಿಸುವ ಸಂಕಲ್ಪ । ದೇಗುಲ, ದರ್ಗಾದಲ್ಲಿ ಭಾರತೀಯ ಸೇನೆಗಾಗಿ ಪ್ರಾರ್ಥನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಪರೇಷನ್‌ ಸಿಂದೂರ ಮೂಲಕ ಪಾಕಿಸ್ತಾನ ಸೇನೆ, ಭಯೋತ್ಪಾದಕರಿಗೆ ಭಾರತ ಸೇನೆಯು ತಕ್ಕ ಉತ್ತರ ನೀಡಿದ್ದು, ಶತೃ ರಾಷ್ಟ್ರದ ವಿರುದ್ಧ ಹೋರಾಟ ನಡೆಸಿರುವ ಭಾರತೀಯ ಸೇನೆಗಳು, ನಮ್ಮ ವೀರ ಯೋಧರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡುವಂತೆ, ಭಾರತೀಯ ಸೇನೆ, ಯೋಧರ ಸುರಕ್ಷತೆಗೆ ನಗರ ದೇವಸ್ಥಾನ, ದರ್ಗಾಗಳಲ್ಲಿ ಜಿಲ್ಲಾ ಜವಾಹರ್ ಬಾಲ್ ಮಂಚ್‌ನಿಂದ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಹಾಗೂ ಕಡಕ್ ಶಾ ವಲಿ ದರ್ಗಾದಲ್ಲಿ ಬಾಲ ಮಂಚ್ ನೇತೃತ್ವದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿ ಭಾರತೀಯ ಸೇನೆಗಳು, ಭಾರತೀಯ ಯೋಧರಿಗೆ ದೇವರು ಇನ್ನೂ ಹೆಚ್ಚು ಶಕ್ತಿ ನೀಡಲಿ, ನಮ್ಮೆಲ್ಲಾ ಸೇನೆ, ಯೋಧರು ಸುರಕ್ಷಿತವಾಗಿ ಪಾಕಿಸ್ತಾನದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸುವ ಮೂಲಕ ಶತೃ ರಾಷ್ಟ್ರವನ್ನು ಮಟ್ಟ ಹಾಕಲಿ ಎಂಬುದಾಗಿ ಪ್ರಾರ್ಥಿಸಲಾಯಿತು.

ಇದೇ ವೇಳೆ ಮಾತನಾಡಿದ ಬಾಲ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ, ಶತೃ ರಾಷ್ಟ್ರ ಪಾಕಿಸ್ತಾನವು ಪದೇ ಪದೇ ಕಾಲು ಕರೆದು ಭಾರತವನ್ನು ಕೆಣಕುತ್ತಲೇ ಇತ್ತು. ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯ ಇಡೀ ಜಗತ್ತು ಎಂದಿಗೂ ಕ್ಷಮಿಸುವುದಿಲ್ಲ. ಉಗ್ರರ ಹಿಂದಿರುವ ದುಷ್ಟ ಶಕ್ತಿಗಳನ್ನು ಸಂಪೂರ್ಣ ನಾಶ ಮಾಡುವ ನಿಟ್ಟಿನಲ್ಲಿ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಪಾಕಿಸ್ತಾನದ ಭಯೋತ್ಪಾದನಾ ನೆಲೆಗಳ ಮೇಲೆ ನುಗ್ಗಿ ಹೊಡೆಯುತ್ತಿರುವ ಭಾರತವು ತಕ್ಕ ಉತ್ತರವನ್ನೇ ನೀಡುತ್ತಿದೆ. ಪಾಕಿಸ್ತಾನದ ಎಲ್ಲಾ ಷಡ್ಯಂತ್ರ ಬಯಲು ಮಾಡುತ್ತಿರುವ ಭಾರತ ಸೇನೆಯು ನೆರೆ ರಾಷ್ಟ್ರದೊಳಗೆ ಕ್ಷಿಪಣಿ ದಾಳಿ ನಡೆಸಿ ಹೊಡೆದು ಹಾಕುತ್ತಿದೆ. ಪಾಕಿಸ್ತಾನದ ಡ್ರೋನ್‌, ಕ್ಷಿಪಣಿ, ಬ್ಯಾಲಿಸ್ಟಿನ್‌ ಮಿಸೈಲ್‌ ಅನ್ನೇ ಹೊಡೆದುರುಳಿಸಿದೆ. ಭಾರತ-ಪಾಕ್ ಗಡಿಯಲ್ಲಿ ಎರಡೂ ರಾಷ್ಟ್ರಗಳ ಯೋಧರ ನಡುವೆ ಗುಂಡಿನ ಚಕಮಕಿಯೂ ಮುಂದುವರಿದಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಪಹಲ್ಗಾಮ್‌ನಲ್ಲಿ ದಾಳಿಗೆ ಪ್ರತೀಕಾರವಾಗಿ ಭಾರತವು ತೆಗೆದುಕೊಂಡ ರಾಜತಾಂತ್ರಿಕ ನಡೆ, ಆಪರೇಷನ್ ಸಿಂಧೂರ, ಭಯೋತ್ಪಾದನಾ ಶಿಬಿರಗಳ ಧ್ವಂಸ ಪ್ರತೀಕಾರದ ಭಾಗವಾಗಿವೆ. ಹಿಂದೂಗಳ ಹೆಸರು, ಧರ್ಮವನ್ನು ಕೇಳಿ ಗುಂಡು ಹಾರಿಸಿ ಹತ್ಯೆ ಮಾಡಿದ ಉಗ್ರರ ಪೈಶಾಚಿಕ ಕೃತ್ಯವನ್ನು ಕ್ಷಮಿಸಲಾಗದು. ಇಂತಹ ಪೈಶಾಚಿಕ ಕೃತ್ಯ ಎಸಗಿದ ಮತ್ತು ಸಹಕರಿಸಿದ, ಬೆಂಬಲಿಸಿದ ಪಾಕಿಸ್ತಾನಕ್ಕೆ ಸರಿಯಾಗಿಯೇ ಭಾರತ ಪಾಠ ಕಲಿಸುತ್ತಿದೆ. ವಿಶ್ವ ಭೂಪಟದಲ್ಲಿ ಪಾಕಿಸ್ತಾನ ದೇಶವೇ ಇಲ್ಲದಂತೆ ಮಾಡುವ ಕೆಲಸ ಭಾರತ ಮಾಡಬೇಕು ಎಂದರು.

ಬಾಲ್‌ಮಂಚ್ ಪದಾಧಿಕಾರಿ ಕೆ.ಎಚ್. ಪ್ರೇಮಾ, ಶಿಲ್ಪಾ ಪರಶುರಾಮ, ಯುವರಾಜ, ಮಂಜುನಾಥ, ಹರೀಶ, ಅಕ್ಬರ್ ಬಾಷಾ, ಫಯಾಜ್ ಅಹ್ಮದ್, ಅಯೂಬ್ ಖಾನ್, ಇಮಾಂ, ಗೌರವ್ ಇತರರು ಹಾಜರಿದ್ದರು.

PREV