ಉಂಡ ಮನೆಗೆ ದ್ರೋಹ ಬಗೆದ ದುಂತೂರು ವಿಶ್ವನಾಥ್: ಆರೋಪ

KannadaprabhaNewsNetwork |  
Published : May 30, 2026, 01:30 AM IST
ಕೆ ಕೆ ಪಿ ಸುದ್ದಿ 01: ನಗರದ ಕೋಟೆ ಗಣಪತಿ ದೇವಸ್ಥಾನ ದಲ್ಲಿ ತಾಲ್ಲೂಕು ಜೆಡಿಎಸ್ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು.  | Kannada Prabha

ಸಾರಾಂಶ

ಕನಕಪುರ: ಪಕ್ಷದಿಂದ ಗೌರವ, ಜನರ ಪ್ರೀತಿ ಜೊತೆಗೆ ಲಾಭವನ್ನೂ ಪಡೆದು ಈಗ ಪಕ್ಷಕ್ಕೆ ಹಾಗೂ ನಮ್ಮ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ದುಂತೂರು ವಿಶ್ವನಾಥ್ ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದು ಜೆಡಿಎಸ್ ಮುಖಂಡ ವಕೀಲ ನಂಜೇಗೌಡ ತಿಳಿಸಿದರು

ಕನಕಪುರ: ಪಕ್ಷದಿಂದ ಗೌರವ, ಜನರ ಪ್ರೀತಿ ಜೊತೆಗೆ ಲಾಭವನ್ನೂ ಪಡೆದು ಈಗ ಪಕ್ಷಕ್ಕೆ ಹಾಗೂ ನಮ್ಮ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ದುಂತೂರು ವಿಶ್ವನಾಥ್ ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದು ಜೆಡಿಎಸ್ ಮುಖಂಡ ವಕೀಲ ನಂಜೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವಿಧಾನಸಭಾ ಟಿಕೆಟ್ ನೀಡಿ ತಾಲೂಕಿನ ಹಾಗೂ ಜಿಲ್ಲೆಯ ಜನ ಗುರುತಿಸುವಂತೆ ಮಾಡಿದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ವಿರುದ್ಧ ಮಾತನಾಡಲು ನೈತಿಕತೆ ಇಲ್ಲ. ಪಕ್ಷ ಮತ್ತು ನಮ್ಮ ನಾಯಕರಿಂದ ಲಾಭ ಪಡೆದು ಈಗ ಉಂಡ ಮನೆಗೆ ದ್ರೋಹ ಮಾಡುವಂತಹ ಕೆಲಸ ಮಾಡುತ್ತಿರುವ ವಿಶ್ವನಾಥ್ ಗೆ ಆತ್ಮಸಾಕ್ಷಿ ಇದ್ದರೆ ನಮ್ಮ ಕಾರ್ಯಕರ್ತರ ಪ್ರಶ್ನೆಗೆ ಮೊದಲು ಉತ್ತರ ನೀಡಲಿ ಎಂದರು.

ಹಿರಿಯ ಮುಖಂಡ ಸೊಣ್ಣಪ್ಪ ಮಾತನಾಡಿ, ನಮ್ಮ ಪಕ್ಷಕ್ಕೆ ಬರುವ ಮುನ್ನ ಎಲ್ಲಾ ಪಕ್ಷಗಳಿಗೂ ಹಾರಿ ಬಂದಿದ್ದನ್ನು ಮರೆತಿರುವ ವಿಶ್ವನಾಥ್ ಗೆ ಸಾತನೂರು ತಾಲೂಕು ಪಂಚಾಯಿತಿ ಚುನಾವಣೆ ಎಣಿಕೆ ಸಂದರ್ಭ ನೆನಪು ಮಾಡಿಕೊಳ್ಳಲಿ ಸಾಕು. ಅಂದು ಪುಟ್ಟಣ್ಣನಿಗೆ ಆಗಿದ್ದ ಟಿಕೆಟ್ ಅನ್ನು ನಾವು ನಿಮಗೆ ಕೊಡಿಸಿ ನೀಡಿದ ಶಕ್ತಿಯಿಂದ ನೀವು ಇಷ್ಟು ಬೆಳೆಯಲು ಸಾಧ್ಯವಾಯ್ತು ಎಂಬುದನ್ನು ಮರೆತು ಪಕ್ಷದ ಉಪಕಾರ ಸ್ಮರಣೆಯೇ ಇಲ್ಲದೆ ನಮ್ಮ ನಾಯಕರ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಿರುವ ನಿಮಗೆ ಮುಂದಿನ ದಿನಗಳಲ್ಲಿ ಭಗವಂತನೇ ಉತ್ತರ ಕೊಡಲಿದ್ದಾನೆ ಎಂದು ಕಿಡಿಕಾರಿದರು.

ಯುವ ಮುಖಂಡ ಚಿನ್ನಸ್ವಾಮಿ ಮಾತನಾಡಿ, ಸತತವಾಗಿ ಎರಡು ಬಾರಿ ಸೋತಿರುವ ನಿಮಗೆ ನಿಖಿಲ್ ಕುಮಾರಸ್ವಾಮಿ ಹಾಗೂ ದೇವೇಗೌಡರು ಮತ್ತು ಕುಮಾರಸ್ವಾಮಿ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ, ಅರ್ಹತೆ ಎರಡೂ ಇಲ್ಲ. ನಿಮಗೆ ಕನಿಷ್ಠ ಪ್ರಜ್ಞೆ ಏನಾದರೂ ಇದ್ದಿದ್ದರೆ, ಈ ಮಟ್ಟದಲ್ಲಿ ತಮ್ಮ ನಾಯಕರನ್ನು ಒಲೈಸಿಕೊಳ್ಳಲು ಹೋಗುತ್ತಿದ್ದು ನಿಮ್ಮ ಈಗಿನ ನಾಯಕ ಡಿ.ಕೆ.ಶಿವಕುಮಾರ್‌ ಬಿಡದಿ ವಿಚಾರವಾಗಿ ಮಾತನಾಡಲು ನಿಖಿಲ್ ಸ್ಟೇಟಸ್ ಏನು ಅಂತ ಕೇಳಿದ್ದು ಅದಕ್ಕೆ ಅವರ ಮಟ್ಟದಲ್ಲಿ ಅವರು ಉತ್ತರ ನೀಡುತ್ತಾರೆ. ಅದು ಬಿಟ್ಟು ನೀವು ಯಾರನ್ನು ಮೆಚ್ಚಿಸಲು ವೈಯಕ್ತಿಕ ಟೀಕೆಗೆ ಇಳಿದಿರುವುದು ಎಂದು ಪ್ರಶ್ನಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು ಮಾತನಾಡಿ, ದೇವೇಗೌಡರು, ಕುಮಾರಸ್ವಾಮಿಯವರ ಪಾದದ ಧೂಳಿಗೂ ಸಮವಲ್ಲದ ನೀವು ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಏನೇನು ಪ್ರಯೋಜನ ಪಡೆದುಕೊಂಡಿದ್ದೀರಿ, ತಾಲೂಕಿನ ಜನರು ಮೊದಲು ನನ್ನ ಭೇಟಿ ಮಾಡಿ ನಂತರ ಕುಮಾರಣ್ಣನ ಭೇಟಿ ಮಾಡುವಂತ ವಾತಾವರಣ ಸೃಷ್ಟಿಸಿಕೊಂಡಿದ್ದ ನೀವು, ಈಗ ಡಿ.ಕೆ.ಸಹೋದರರನ್ನ ಮೆಚ್ಚಿಸಲು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಏಕವಚನದಲ್ಲಿ ನಿಂದಿಸುತ್ತಿರುವುದು ಅಕ್ಷಮ್ಯ ಅಪರಾಧ. ಜಿಲ್ಲಾ ಪಂಚಾಯತಿಯಲ್ಲಿ ಸೋತು ಮನೆ ಸೇರಿದ್ದ ರಾಮನಗರ ಮಾಜಿ ಶಾಸಕರಾದ ರಾಜು ಅಲಿಯಾಸ್ ಬೂಟ್ ರಾಜು ತಾವು ಈ ಮಟ್ಟಕ್ಕೆ ಬರಲು, ನೀವು ಕನಸಿನಲ್ಲೂ ಊಹಿಸಿಕೊಳ್ಳದ ಶಾಸಕ ಸ್ಥಾನಕ್ಕೆ ಯಾರು ಕಾರಣ ಎಂಬುದನ್ನು ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ. ನಿಮಗೆ ನಿಜವಾಗಲೂ ತಾಕತ್ತಿದ್ದರೆ ಮುಂದಿನ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷದ ಟಿಕೆಟ್ ಪಡೆದು ಬಂದು ಮಾತನಾಡಿ ಎಂದು ಸವಾಲು ಹಾಕಿದರು.

ನೀವು ಮತ್ತು ನಿಮ್ಮ ಪಟಾಲಂ ನಮ್ಮ ನಾಯಕರ ಕ್ಷಮೆ ಕೇಳಬೇಕು ಇಲ್ಲದಿದ್ದರೆ ನಿಮ್ಮ ಹಾಗೂ ನಿಮ್ಮ ನಾಯಕರ ವಿರುದ್ಧ ನಮ್ಮ ಪಕ್ಷದ ಕಾರ್ಯಕರ್ತರು ಜಿಲ್ಲಾದ್ಯಂತ ಪ್ರತಿಭಟನೆ ಮಾಡುವ ಮೂಲಕ ನಿಮ್ಮ ನಿಜ ಮುಖವನ್ನು ಬಯಲು ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಹಿರಿಯ ಮುಖಂಡರಾದ ಸಿದ್ದಮರೀಗೌಡ, ಶಿವಸ್ವಾಮಿ, ನಗರಸಭಾ ಮಾಜಿ ಸದಸ್ಯ ಲೋಕೇಶ್, ಸ್ಟುಡಿಯೋ ಚಂದ್ರು, ಯುವ ಮುಖಂಡ ಸಿದ್ದು, ಜೆಡಿಎಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಪವಿತ್ರ, ಜಿಲ್ಲಾ ಮುಖಂಡರಾದ ರಮ್ಯಸ್ವಾಮಿ, ಯುವ ಮುಖಂಡ ರಾಜೇಂದ್ರ,ಕುಮಾರ, ತಿಮ್ಮೇಗೌಡ, ಶಿವಕುಮಾರ್, ರಾಜೇಶ್ ಇತರರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರದಲ್ಲಿ ಜೆಡಿಎಸ್ ಮುಖಂಡ ವಕೀಲ ನಂಜೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆಗಳ ವಿಲೀನ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮನೆಗೆ ಸುಹಾಸ್ ಭೇಟಿ