ರಾಮನಗರ: ಪ್ರಥಮ ದರ್ಜೆ ಸಹಾಯಕನೊಬ್ಬ ಹೊರಗುತ್ತಿಗೆ ಆಧಾರದ ಮೇಲೆ ವ್ಯಕ್ತಿಯೊಬ್ಬರನ್ನು ನರೇಗಾ ತಾಂತ್ರಿಕ ಸಹಾಯಕ ಅಭಿಯಂತರರನ್ನಾಗಿ ನೇಮಕ ಮಾಡಿರುವ ನಕಲಿ ಆದೇಶ ಪತ್ರ ಹೊರಡಿಸಿರುವ ಪ್ರಕರಣ ಜಿಲ್ಲಾ ಪಂಚಾಯಿತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲಾ ಪಂಚಾಯತಿ ನರೇಗಾ ಶಾಖೆಯಲ್ಲಿ ವಿಷಯ ನಿರ್ವಾಹಕರಾಗಿರುವ ಪ್ರಥಮ ದರ್ಜೆ ಸಹಾಯಕ ಎಚ್.ಎಂ.ಅಭಿಷೇಕ್ , ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ ಅಭಿಯಂತರ ಹುದ್ದೆಗೆ ಆಯ್ಕೆಯಾಗಿದ್ದ ಆರ್.ಮಧು ಅವರನ್ನು ನೇಮಕ ಮಾಡಿಕೊಳ್ಳುವ ಮುಂಚಿತವಾಗಿ ನಿಯಮಾನುಸಾರ ನೇಮಕ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಮುಂದಿನ ಆದೇಶಕ್ಕೂ ಮೊದಲು ಕಚೇರಿ ಟಿಪ್ಪಣಿ ಸಿದ್ದಪಡಿಸಿದ್ದ. ಅಲ್ಲದೆ, ಕಚೇರಿ ಅಧೀಕ್ಷಕರು, ಸಹಾಯಕ ಯೋಜನಾ ಅಧಿಕಾರಿ, ಯೋಜನಾ ನಿರ್ದೇಶಕರ ಷರಾದೊಂದಿಗೆ ಸಿಇಒ ಅಧಿಕೃತ ಗಮನಕ್ಕೆ ತಂದಿಲ್ಲ.
ಕಳೆದ ಆಗಸ್ಟ್ 26ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಇನ್ ವೆನ್‌ಸಿಸ್ಸ್ ಟೆಕ್ನಾಲಜಿಸ್ ಕಂಪನಿಯವರಿಗೆ ನರೇಗಾ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್.ಮಧು ಅವರನ್ನು ಚನ್ನಪಟ್ಟಣ ತಾಲೂಕಿಗೆ ತಾಂತ್ರಿಕ ಸಹಾಯಕ ಅಭಿಯಂತರರಾಗಿ ನಿಯೋಜಿಸುವಂತೆ ಸುಳ್ಳು ಆದೇಶ ಪತ್ರವನ್ನು ಸೃಷ್ಟಿ ಮಾಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಹಿಯುಳ್ಳ ಬೇರೊಂದು ಪತ್ರಕ್ಕೆ ಆತ ಸೃಷ್ಟಿಸಿದ್ದ ಸುಳ್ಳು ಆದೇಶದ ಮಾಹಿತಿಯ ಪತ್ರವನ್ನು ಜೆರಾಕ್ಸ್ ಮೂಲಕ ಜೋಡಿಸಿ ನಕಲಿ ಆದೇಶ ಹೊರಡಿಸಿದ್ದಾನೆ.ಈ ಆದೇಶದ ಮೇರೆಗೆ ಆರ್.ಮಧು ಚನ್ನಪಟ್ಟಣ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಭಿಷೇಕ್ ಸದರಿ ವಿಚಾರವಾಗಿ ಕಡತವನ್ನು ಆನ್‌ಲೈನ್‌ನಲ್ಲಿ ಇ-ಆಫೀಸ್ ತಂತ್ರಾಂಶದಲ್ಲಿ ಸಲ್ಲಿಸದೆ ಕಡತದಲ್ಲಿ ದಾಖಲಾತಿಗಳನ್ನು ನಿರ್ವಹಣೆ ಮಾಡಿಲ್ಲ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಹಿಯುಳ್ಳ ಬೇರೊಂದು ಪತ್ರವನ್ನು ದುರುಪಯೋಗಪಡಿಸಿಕೊಂಡು ಆರ್.ಮಧುಗೆ ಸಹಾಯಕ ಅಭಿಯಂತರರಾಗಿ ನೇಮಕಗೊಳಿಸಿರುವ ಕುರಿತು ನಕಲಿ ಆದೇಶ ಸೃಷ್ಟಿಸಿ ಅಕ್ರಮ ಎಸಗಿರುವುದು ಕಂಡು ಬಂದಿದೆ.
ಈ ಸಂಬಂಧ ಜಿಪಂ ಯೋಜನಾ ನಿರ್ದೇಶಕರಾದ ಎಚ್.ಎನ್ .ಮಂಜುನಾಥಸ್ವಾಮಿರವರು ಪ್ರಥಮ ದರ್ಜೆ ಸಹಾಯಕಎಚ್.ಎಂ.ಅಭಿಷೇಕ್ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿ ಅಭಿಷೇಕ್ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
7ಕೆಆರ್ ಎಂಎನ್ 5,6.ಜೆಪಿಜಿ5.ಎಚ್.ಎಂ.ಅಭಿಷೇಕ್
6.ರಾಮನಗರ ಜಿಪಂ.