ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಪಣತೊಡಿ

KannadaprabhaNewsNetwork |  
Published : Dec 08, 2024, 01:18 AM IST
ಕಾರ್ಯಕ್ರಮದಲ್ಲಿ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಸಮಾಜದಲ್ಲಿ ಏಡ್ಸ್‌ ಸೋಂಕಿಗೆ ತುತ್ತಾದವರನ್ನು ಗುರುತಿಸಿ ಜಾಗೃತಿ ಮೂಡಿಸಿ ಅನುಮಾನ ಮಾಡದೇ ಅವರನ್ನು ಗೌರವದಿಂದ ಕಾಣಬೇಕು

ಗದಗ: ಗದಗ ಜಿಲ್ಲೆಯನ್ನು ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಹೇಳಿದರು.

ನಗರದ ಡಿಜಿಎಂ ಆರ್ಯುವೇದ ಕಾಲೇಜಿನಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆ, ಜಿಮ್ಸ್ ರಕ್ತ ನಿಧಿ ಕೇಂದ್ರ, ಜಿಲ್ಲಾಸ್ಪತ್ರೆ ಹಾಗೂ ವಿವಿಧ ಪ್ಯಾರಾ ಮೆಡಿಕಲ್‌ ಕಾಲೇಜ್, ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವ ಏಡ್ಸ್ ಜಾಗೃತಿ ದಿನ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಏಡ್ಸ್‌ ಸೋಂಕಿಗೆ ತುತ್ತಾದವರನ್ನು ಗುರುತಿಸಿ ಜಾಗೃತಿ ಮೂಡಿಸಿ ಅನುಮಾನ ಮಾಡದೇ ಅವರನ್ನು ಗೌರವದಿಂದ ಕಾಣಬೇಕು. ವಿಶ್ವ ಏಡ್ಸ್‌ ಜಾಗೃತಿ ದಿನಾಚರಣೆ ಕಾರ್ಯಕ್ರಮದ ವರ್ಷದ ಘೋಷ ವಾಕ್ಯವಾದ ಸರಿಯಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯೋಣ, ನನ್ನ ಆರೋಗ್ಯ ನನ್ನ ಹಕ್ಕು ಎಂಬುದು ನಿಜವಾಗಿಯೂ ಎಲ್ಲರನ್ನು ಜಾಗೃತರನ್ನಾಗಿಸುತ್ತದೆ. ಈ ರೋಗ 10-15 ವರ್ಷದ ಹಿಂದೆ ಜಗತ್ತನ್ನು ತಲ್ಲಣಗೊಳಿಸಿತ್ತು, ಭಾರತದ ಬಿಸಿಲು ಇರುವ ಪ್ರದೇಶದ ಜನಾಂಗದಲ್ಲಿ ಈ ಸೋಂಕು ಜಾಸ್ತಿ ಕಾಣಿಸಿಕೊಂಡಿದ್ದು, ರೈಲು ಅಥವಾ ಸಾರ್ವಜನಿಕವಾಗಿ ಪ್ರಯಾಣ ಮಾಡುವಾಗ ಎಲ್ಲರಿಗೂ ಭಯ ಹುಟ್ಟಿಸಿ ಏಡ್ಸ್‌ ರೋಗವು ಎಲ್ಲರನ್ನು ನಿರ್ನಾಮ ಮಾಡುತ್ತದೆ ಎನ್ನುವ ಊಹೆಗೆ ತಲುಪಿತ್ತು, ಈಗಿನ ಅತ್ಯಾಧುನಿಕ ಚಿಕಿತ್ಸೆ, ಉಪಚಾರ, ಭಾರತೀಯ ವೈದ್ಯ ಪದ್ಧತಿ ನಿಯಂತ್ರಣ ಮತ್ತು ನಿರ್ಮೂಲನೆಗೆ ದೊಡ್ಡ ಕೊಡುಗೆ ನೀಡಿದೆ.ಏಡ್ಸ್‌ ರೋಗಕ್ಕೆ ಔಷಧಿ ಕಂಡುಹಿಡಿಯಲು ಶ್ರಮಿಸಿದ ಎಲ್ಲರಿಗೂ ಅತ್ಯಂತ ಋಣಿ ಆಗಿರಬೇಕು ಎಂದರು.

ಏಡ್ಸ್‌ ನಿರ್ಮೂಲನೆಗೆ ಜಿಲ್ಲೆಯ ತನ್ನದೆ ಆದ ಕೊಡುಗೆ ನೀಡಿದೆ. ಕಳೆದ 10 ವರ್ಷಗಳಲ್ಲಿ ಭವಿಷ್ಯದ ನಾಗರಿಕನಾದ ಯಾವೊಂದು ನವ ಶಿಶುವಿಗೂ ಏಡ್ಸ ಸೊಂಕು ಪಾಲಕರಿಂದ ತಗುಲದ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಸೇರಿದಂತೆ ಏಡ್ಸ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಏಡ್ಸ ಕುರಿತು ಜಾಗೃತಿ ಮೂಡಿಸಲು ಮೆಡಿಕಲ್ ಶಾಲಾ ಕಾಲೇಜು, ಸೇವಾ ತಂಡಗಳ ಪಾತ್ರ ಬಹಳವಿದೆ. ಯೋಜನೆ ತಯಾರಿಸಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರನ್ನು ಜಾಗೃತರನ್ನಾಗಿಸಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರ ಸರ್ಕಾರದಿಂದ ನೀಡಲಾಗುವುದು ಎಂದು ತಿಳಿಸಿದರು.

ಡಿಎಚ್‌ಓ ಎಸ್‌.ಎಸ್. ನೀಲಗುಂದ ಮಾತನಾಡಿ, ಜಿಲ್ಲೆಯಲ್ಲಿ ಏಡ್ಸ್‌ ಸೋಂಕಿಗೆ ತುತ್ತಾದವರ ಚಿಕಿತ್ಸೆಗೆ 8 ಐಸಿಟಿಸಿ ಕೇಂದ್ರಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಲಭ್ಯವಿದೆ ಹಾಗೂ ಏಡ್ಸ್‌ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ ಹಾಗೂ 100 ದಿನಗಳ ಟಿಬಿ ಕುರಿತು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಮಾತನಾಡಿ, ಇಲಾಖೆಯ ಹಲವಾರು ಜಾಥಾ ಹಾಗೂ ಜಾಗೃತಿ ಕಾರ್ಯಕ್ರಮಗಳಿಂದ ಎಚ್‌ಐವಿ ಸೊಂಕಿನ ಪ್ರಮಾಣ ಕಳೆದ ಹತ್ತು ವರ್ಷಗಳಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಎಚ್‌ಐವಿ ಸೊಂಕಿತರು ಭಯ ಪಡದೆ ಆಪ್ತಸಮಾಲೋಚಕರಿಂದ ನೈತಿಕ ಹಾಗೂ ಮಾನಸಿಕ ಬೆಂಬಲ ಸಾಮಾನ್ಯ ಜೀವನ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಹೆಚ್‌ಐವಿ ನಿಯಂತ್ರಣದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಿವಿಧ ತಾಲೂಕಿನ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಅಶೋಕ ಮಂದಾಲಿ, ಬಿ.ಎಸ್‌. ಪಾಟೀಲ, ಸಂತೋಷ ಬೆಳವಡಿ, ಡಾ.ಬಿ.ಸಿ. ಕರಿಗೌಡರ, ಡಾ. ಸಾಮುದ್ರಿ ಸತೀಶ ಘಾಟಗೆ, ಡಾ. ಪ್ರೀತ ಖೋನಾ, ಡಾ. ಮಹ್ಮದ್ ಅಶ್ರಫ್ ಉಲ್, ಡಾ. ಮಹೇಶ ಕೊಪ್ಪಳ, ಡಾ. ಬೂದೇಶ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಬಸವರಾಜ ಲಾಲಗಟ್ಟಿ ಸ್ವಾಗತಿಸಿದರು. ಭೂಮಿಕಾ ತೈಯಬಾ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ವಿಶ್ವ ಏಡ್ಸ್ ಜಾಗೃತಿ ದಿನ ಜನಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಸನಾತನ ಸಂಸ್ಕೃತಿ ಬೆಳೆಸಿ
ಗ್ರಾಪಂಗಳ ಶಕ್ತಿ ಕುಗ್ಗಿಸುತ್ತಿರುವ ಕೇಂದ್ರದ ವಿರುದ್ಧ ಹೋರಾಡುವ ಸ್ಥಿತಿ