ಕನ್ನಡಪ್ರಭವಾರ್ತೆ ಚಿತ್ರದುರ್ಗಚಿತ್ರದುರ್ಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆಯ ಶೋಭಾಯಾತ್ರೆ ಸೆಪ್ಟಂಬರ್ 28 ರಂದು ನಡೆಯಲಿದೆ. ಈ ಸಂಬಂಧ ಐತಿಹಾಸಿಕ ಚಿತ್ರದುರ್ಗ ಸಿಂಗಾರಗೊಂಡಿದೆ. ರಾಜ್ಯದ ವಿವಿಧ ಮೂಲೆಗಳಿಂದ ಮೂರು ಲಕ್ಷಕ್ಕೂ ಅಧಿಕ ಜನರ ಆಗಮನದ ಹಿನ್ನಲೆ ರಸ್ತೆ ಸೇರಿದಂತೆ ಪ್ರತಿಮೆಗಳಿಗೆ ವಿಶೇಷ ಅಲಂಕಾರ ಮಾಡಿ ಅದಕ್ಕೊಂದು ಐತಿಹಾಸಿಕ ಹಿನ್ನಲೆಯ ಸ್ಪರ್ಶ ನೀಡಲಾಗಿದೆ.ಮದಕರಿನಾಯಕನ ಕಂಚಿನ ಪ್ರತಿಮೆ ಹಿಂಭಾಗ ಐತಿಹಾಸಿಕ ಕೋಟೆಯ ಅಲಂಕಾರ ಮಾಡಲಾಗಿದ್ದು ಮೇಲ್ಭಾಗದಲ್ಲಿ ಶಿವನ ವಿಗ್ರಹದ ಜತೆ ತ್ರಿಶೂಲ ಪ್ರತಿಷ್ಠಾಪನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿನ ಒನಕೆ ಓಬವ್ವ ಪ್ರತಿಮೆ ಹಿಂಭಾಗ ಕೋಟೆ ಅಲಂಕಾರ ಮಾಡಲಾಗಿದ್ದು, ಇದು ಹೈದರಾಲಿ ಸೈನಿಕರನ್ನು ಸದೆ ಬಡಿಯುವ ಚಿತ್ರಕ್ಕೆ ಸೂಕ್ತವಾದ ಹೊಂದಾಣಿಕೆಯಾಗಿದೆ.
ನಗರ ಪೋಲಿಸ್ ಠಾಣೆಯ ಮುಂಭಾಗದಲ್ಲಿನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೂ ಅಲಂಕಾರ ಮಾಡಿ ಮಂಟಪ ನಿರ್ಮಿಸಲಾಗಿದೆ. ಮಹಾವೀರ ವೃತ್ತದಲ್ಲಿ ಕಲಾವಿನದ ಕೈ ಚಳಕ ಮನಮೋಹಕವಾಗಿದೆ. ಅರಮನೆ ನಿರ್ಮಿಸಿ ಅಕ್ಕ ಪಕ್ಕದಲ್ಲಿ ಎರಡು ದೊಡ್ಡ ಗಂಟೆಗಳನ್ನು ಇರಿಸಲಾಗಿದೆ. ವಾಸವಿ ವೃತ್ತವೂ ವಿಶೇಷ ಅಲಂಕಾರಕ್ಕೆ ಒಳಗಾಗಿದೆ. ಕಂಬಗಳ ಸೃಷ್ಟಿಸಿ ನಡುವೆ ವಾಸವಿ ದೇವಿಯ ಪ್ರತಿಮೆ ಇಡಲಾಗಿದೆ.ಹೊಳಲ್ಕೆರೆ ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಹಿಂಭಾಗ ಅರಮನೆ ಚಿತ್ರಿಸಿ ಪರಾಕ್ರಮವ ತೋರಿಸಲಾಗಿದೆ. ಕನಕ ಪ್ರತಿಮೆಗೂ ವಿಶೇಷ ಅಲಂಕಾರ ಮಾಡಿ, ಇಲ್ಲಿ ಕನಕ ಮೂರ್ತಿಯ ಅಕ್ಕ-ಪಕ್ಕದಲ್ಲಿ ಶಂಕ- ಚಕ್ರ ನಿರ್ಮಾಣ ಮಾಡಲಾಗಿದೆ. ಅದರ ಮೇಲೆ ನವಿಲು, ಕನಕನ ಮೂರ್ತಿಯ ಮೇಲೆ ತಿರುಪತಿ ತಿಮ್ಮಪ್ಪನ ನಾಮವನ್ನು ಚಿತ್ರಿಸಲಾಗಿದೆ. ಇದರೊಂದಿಗೆ ಅಕ್ಕ-ಪಕ್ಕದಲ್ಲಿ ಕಂಬಗಳನ್ನು ಇರಿಸಿ ಅದಕ್ಕೆ ಛತ್ರಿಗಳನ್ನು ಜೋಡಿಸಿ ಶಿಲಾಬಾಲಕಿಯರನ್ನು ಚಿತ್ರಿಸಲಾಗಿದೆ.
ಚಿತ್ರದುರ್ಗದಲ್ಲಿನ ಎಲ್ಲ ಪ್ರತಿಮೆಗಳೂ ದೃಶ್ಯ ಕಾವ್ಯಗಳಾಗಿ ಗೋಚರಿಸುತ್ತಿವೆ. ಶೋಭಾಯಾತ್ರೆ ಸಾಗುವ ಇಕ್ಕೆಲಗಳಲ್ಲಿ ದೀಪದ ಅಲಂಕಾರ ಮಾಡಲಾಗಿದೆ. ಪ್ರಮುಖ ರಸ್ತೆ ಸೀಳಿರುವ ಡಿವೈಡರ್ ಗಳೂ ಸಿಂಗಾರಗೊಂಡಿರುವುದು ವಿಶೇಷ.ಗಮನ ಸೆಳೆದ ಬೈಕ ರ್‍ಯಾಲಿ
ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಅಂಗವಾಗಿ ಗುರುವಾರ ನಗರದ ವಿವಿಧ ಬಡಾವಣೆಗಳಲ್ಲಿ ಬೈಕ್ ರ್‍ಯಾಲಿ ನಡೆಸಲಾಯಿತು. ಹೊಳಲ್ಕೆರೆ ರಸ್ತೆಯಲ್ಲಿನ ಕನಕ ವೃತ್ತದಿಂದ ಆರಂಭವಾದ ಬೈಕ್ ರ್‍ಯಾಲಿಗೆ ಶಾಸಕ ಕೆ.ಸಿ. ವಿರೇಂದ್ರ ಪಪ್ಪಿ, ವಿಶ್ವ ಹಿಂದೂ ಪರಿಷತ್‍ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ , ಉಮೇಶ್ ಕಾರಜೋಳ, ಅನಿತ್ ಸಿದ್ದೇಶ್ವರ ಚಾಲನೆ ನೀಡಿದರು.ಕೈಯಲ್ಲಿ ಕೇಸರಿ ಧ್ವಜ ಹಿಡಿದು, ಕೇಸರಿ ರುಮಾಲು ಕಟ್ಟಿಕೊಂಡ ಯುವಕರು ಬೈಕ್ ಚಾಲನೆ ಮಾಡಿದರು. ರ್‍ಯಾಲಿ ನಗರದ ಕನಕ ವೃತ್ತದಿಂದ ಪ್ರಾರಂಭವಾಗಿ ಸಂಗೊಳ್ಳಿರಾಯಣ್ಣ ವೃತ್ತ, ಬುರುಜನಹಟ್ಟಿ , ಆನೆ ಬಾಗಿಲು, ಚಿಕ್ಕಪೇಟೆ, ಏಕನಾಥೇಶ್ವರಿ ಪಾದಗುಡಿ, ಕರುವಿನ ಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ, ಜಟ್ ಪಟ್ ನಗರ ಸ್ಟೇಡಿಯಂ ರಸ್ತೆ, ಬಿ.ಡಿ ರಸ್ತೆ, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಂತ್ಯಗೊಂಡಿತು.