ಕುಕನೂರು: ತಾಲೂಕಿನ ಅರಕೇರಿ ಗ್ರಾಮದಲ್ಲಿ ಸುಮಾರು 34 ವರ್ಷಗಳ ಬಳಿಕ ಗ್ರಾಮದ ಶ್ರೀ ಅರಕೇರಿ ದುರ್ಗಾದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ಜರುಗುತ್ತಿದೆ.
ಜಾತ್ರಾ ಮಹೋತ್ಸವ ಮೇ 9ರಿಂದ ಮೇ 17ರ ವರೆಗೆ ಜರುಗಲಿದೆ. ಗ್ರಾಮದಲ್ಲಿ ಹದಿನೈದು ದಿನಗಳ ಕಾಲ ವಿಜೃಂಭಣೆಯ ವಾತಾವರಣ ಇರಲಿದೆ. ಮೇ 9ರಂದು ಶ್ರೀ ದೇವಿಯ ಮಂದಿರದ ಕಳಸಾರೋಹಣ ಮತ್ತು ಕಂಕಣ ಬಂಧನ, ಮೇ 15ರಂದು ಶ್ರೀದೇವಿಯ ಬಾಳೆಯದಂಡಿಗೆ, ಮೇ 16ರಂದು ಅಕ್ಕಿಪಡಿ (ಪಾಯಸ) ಮತ್ತು ಕಾಯಿ ಪವಾಡ ಹಾಗೂ ಅಗ್ನಿಕೊಂಡ, ಮೇ 17ರಂದು ಶ್ರೀ ದೇವಿಯ ಮೆರವಣಿಗೆ ಜರುಗಲಿದೆ.
34 ವರ್ಷಗಳ ಬಳಿಕ ಜರುಗುತ್ತಿರುವ ಜಾತ್ರೆಗೆ ಗ್ರಾಮ, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಲು ಉತ್ಸುಕರಾಗಿದ್ದಾರೆ. ಜಾತ್ರೆಯ ವೈಭವಕ್ಕೆ ಜನರು ಕಾಯುತ್ತಿದ್ದಾರೆ. ಯುವ ಪೀಳಿಗೆಗೆ 34 ವರ್ಷದ ಬಳಿಕದ ಜಾತ್ರೆ ಹಬ್ಬದ ವಾತಾವರಣ ಮೂಡಿಸಿದೆ. ಈಗಿನ 60, 70 ವರ್ಷದ ಹಿರಿಯರು ಹಿಂದೆ ಕಂಡಿರುವ ಜಾತ್ರೆಯನ್ನು ಮರಳಿ 34 ವರ್ಷದ ಬಳಿಕ ಕಾಣುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿದೆ.ಅರಕೇರಿ ಗ್ರಾಮದಲ್ಲಿ ದೇವಿ ಜಾತ್ರೆ 34 ವರ್ಷಗಳ ಬಳಿಕ ಜರುಗುತ್ತಿದ್ದು, ಈಗಾಗಲೇ ನಾನಾ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ದೇವಿಯ ಜಾತ್ರೆಯನ್ನು ಗ್ರಾಮಸ್ಥರು ಶ್ರದ್ಧಾ, ಭಕ್ತಿಯಿಂದ ಮಾಡುತ್ತಿದ್ದಾರೆ. ದೇವಿ ಸಹ ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿದಾತಳಾಗಿದ್ದಾಳೆ ಎಂದು ಅರಕೇರಿ ಗ್ರಾಮದ ಮುಖಂಡ ದೇವಪ್ಪ ಅರಕೇರಿ ಹೇಳಿದರು.