ಕನ್ನಡಪ್ರಭ ವಾರ್ತೆ ದಾವಣಗೆರೆ
ಶಾಲಾ-ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಹಿನ್ನೆಲೆ ಪಿಎಸ್‌ಐ ಮಟ್ಟದ ಮಹಿಳಾ ಅಧಿಕಾರಿ, ಸಿಬ್ಬಂದಿ ಒಳಗೊಂಡ ಪೊಲೀಸ್ ಇಲಾಖೆ ದುರ್ಗಾ ಪಡೆಯು ನಗರದ ಶಾಲಾ-ಕಾಲೇಜು, ಬಸ್ ನಿಲ್ದಾಣ, ಪಾರ್ಕ್ ಸೇರಿ ವಿವಿಧೆಡೆ ವಿದ್ಯಾರ್ಥಿಗಳು ಗುಂಪು ಸೇರುವ ಪ್ರದೇಶ, ಒಂಟಿ ಮಹಿಳೆಯರು ಸಂಚರಿಸುವ ಸ್ಥಳದಲ್ಲಿ ಕಾರ್ಯಾಚರಣೆ ಕೈಗೊಂಡಿದೆ.ದುರ್ಗಾ ಪಡೆ ತಂಡವು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಶಾಲಾ-ಕಾಲೇಜು, ಪಾರ್ಕ್, ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ, ಮಹಿಳೆಯರು, ವಿದ್ಯಾರ್ಥಿನಿಯರಿಗೆ ಪೋಕ್ಸೋ ಕಾಯ್ದೆ ಬಗ್ಗೆ, ಸರಗಳ್ಳರಿಂದ ಸುರಕ್ಷತೆ, ಮಾದಕ ವಸ್ತುಗಳ ವ್ಯಸನದ ದುಷ್ಪರಿಣಾಮ, ತುರ್ತು ಸಹಾಯವಾಣಿ 112 ಬಳಕೆ ಹಾಗೂ ಮಹಿಳೆಯರ ಸುರಕ್ಷತೆಗೆ ಇರುವ ದಾವಣಗೆರೆ ಸುರಕ್ಷಾ ಆ್ಯಪ್ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಮಹಿಳೆಯರಿಗೆ ಕೀಟಲೆ ಮಾಡುವ, ಚುಡಾಯಿಸುವ, ಬೆನ್ನು ಬೀಳುವ ಪುಡಾರಿಗಳು, ಕಿಡಿಗೇಡಿಗಳ ಮೇಲೆಯೂ ಈ ಪಡೆ ನಿಗಾವಹಿಸಿದೆ. ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಹಿಳೆಯರಿಗೆ ಅಭಯ ನೀಡುವ ಮೂಲಕ ನೈತಿಕ ಸ್ಥೈರ್ಯ ತುಂಬುವ ಕೆಲಸ ಸಹ ಪಡೆ ಮಾಡುತ್ತಿದೆ. ವಿದ್ಯಾರ್ಥಿಗಳು ತರಗತಿಗೆ ಗೈರಾಗಿ ಪಾರ್ಕ್, ಚಿತ್ರಮಂದಿರಗಳು, ಇತರೆಡೆ ಸುತ್ತಾಡುತ್ತಾ ಸಮಯ ವ್ಯರ್ಥ ಮಾಡುವಂತಹ ಯುವ ಪೀಳಿಗೆಗೆ ಉತ್ತಮ ಶಿಕ್ಷಣ ಪಡೆದು, ಒಳ್ಳೆಯ ಭವಿಷ್ಯ, ಬದುಕು ರೂಪಿಸಿಕೊಳ್ಳುವಂತೆ ಕಿವಿ ಹಿಂಡಿ, ಬುದ್ಧಿ ಹೇಳುವ ಕೆಲಸವನ್ನೂ ದುರ್ಗಾ ಪಡೆ ಮಹಿಳಾ ಅಧಿಕಾರಿ, ಸಿಬ್ಬಂದಿ ಅಲ್ಲಲ್ಲಿ ಮಾಡುತ್ತಿದ್ದಾರೆ. ನಗರದ ಶ್ರೀರಾಮ ಪಾರ್ಕ್, ವಿಶ್ವೇಶ್ವರಯ್ಯ ಪಾರ್ಕ್‌ಗಳಲ್ಲಿ ಕಾಲೇಜು ಸಮಯದಲ್ಲಿ ಕಾಲಹರಣ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿ, ಕಾಲೇಜಿಗೆ ಹೋಗುವಂತೆ ದುರ್ಗಾ ಪಡೆ ಸಲಹೆ ನೀಡಿದೆ.