ರವಿ ಮೇಗಳಮನಿಹಿರೇಕೆರೂರು: ದುರ್ಗಾದೇವಿ ಕೆರೆ ಏರಿಯ ಮೇಲಿನ ರಸ್ತೆ ಬದಿ ತಡೆಗೋಡೆ ಇಲ್ಲದೇ ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಮಾರ್ಗ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಪಟ್ಟಣದ ಹೊರವಲಯದಲ್ಲಿ ಇರುವ ದುರ್ಗಾದೇವಿ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ವಾಹನಗಳಲ್ಲಿ ಬರುತ್ತಾರೆ. ದೇವಸ್ಥಾನದ ಪಕ್ಕದಲ್ಲಿ ಇರುವ ಕೆರೆಗೆ ಯಾವುದೇ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿಲ್ಲ. ಕೆರೆ ಸುಮಾರು 557 ಎಕರೆ ವಿಸ್ತೀರ್ಣವಿದೆ. ಮಳೆಯಿಂದ ಕೆರೆ ತುಂಬಿದೆ. ಈ ಮಾರ್ಗವಾಗಿ ಪ್ರಯಾಣ ಮಾಡುವ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಬಸರೀಹಳ್ಳಿ, ಸೋಮನಹಳ್ಳಿ, ಆಲದಕಟ್ಟಿ, ಕಳಗೊಂಡ, ನೂಲಗೇರಿ, ಅಬಲೂರು, ಸುತ್ತಕೋಟ್ಟಿ ದುಪ್ಪದಹಳ್ಳಿ ಸೇರಿದಂತೆ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಹಿರೇಕೆರೂರು ಪಟ್ಟಣಕ್ಕೆ ಬರಲು ಇದೇ ಮಾರ್ಗವನ್ನು ಅವಲಂಬಿಸಿಕೊಂಡಿದ್ದಾರೆ. ಇಲ್ಲಿ ಸಂಚರಿಸುವಾಗ ಚಾಲಕ ಸ್ವಲ್ಪ ಎಚ್ಚರ ತಪ್ಪಿದ್ದರೆ ಸಂಚಾರಕ್ಕೆ ಸಂಚಕಾರ ತಪ್ಪಿದ್ದಲ್ಲ. ಏರಿಯ ಒಂದು ಬದಿ ಕೆರೆ ಇದ್ದರೆ ಇನ್ನೊಂದು ಬದಿ ಆಳವಾದ ಭತ್ತ ಬೆಳೆಯುವ ಗದ್ದೆ ಪ್ರದೇಶವಿದೆ. ಜತೆಗೆ ಕೆರೆ ಪಕ್ಕದಲ್ಲಿಯೇ ಪ್ರಸಿದ್ಧ ದುರ್ಗಾದೇವಿ ದೇವಸ್ಥಾನವಿದೆ. ವಿವಿಧ ಜಿಲ್ಲೆ ಹಾಗೂ ಬೇರೆ ಬೇರೆ ರಾಜ್ಯಗಳಿಂದ ದೇವಸ್ಥಾನಕ್ಕೆ ಭಕ್ತರು ಹಾಗೂ ನಿತ್ಯ ರೈತರು ತಮ್ಮ ಎತ್ತಿನ ಗಾಡಿ, ದನಕರುಗಳನ್ನು ನಡೆಸಿಕೊಂಡು ಹೋಗುವ ಪ್ರಮುಖ ದಾರಿ ಇದಾಗಿದ್ದು, ಅಧಿಕಾರಿಗಳು ಕೂಡಲೇ ಈ ಕೆರೆಗೆ ರಕ್ಷಣಾ ಗೋಡೆ ನಿರ್ಮಿಸಬೇಕು ಎಂದು ಸಾರ್ವಜನಿಕರ ಒತ್ತಾಸೆಯಾಗಿದೆ.ದುರ್ಗಾದೇವಿ ಕೆರೆ ಏರಿ ಮೇಲೆ ಅನೇಕ ತಿರುವುಗಳಿವೆ. ಹಾಗಾಗಿ ಕೆರೆಯ ಉದ್ದಕ್ಕೂ ತಡೆಗೋಡೆಯನ್ನು ನಿರ್ಮಿಸಿ ಮುಂದೆ ಆಗುವ ಅಪಾಯ ತಡೆಯಲು ರಸ್ತೆಗಳಿಗೆ ತಡೆಗೋಡೆ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ, ಕಿರಿದಾದ ರಸ್ತೆಗಳ ವಿಸ್ತರಣೆ ಹಾಗೂ ವೈಜ್ಞಾನಿಕ ಹಂಪ್‌ಗಳ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು