- ಬೇವುಡುಗೆ ಹರಕೆ ಸಮರ್ಪಣೆ, ಕುರಿ-ಕೋಳಿಗಳ ಬಲಿ । ಸಾವಿರಾರು ಭಕ್ತರಿಂದ ದರ್ಶನ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರತಿ ವರ್ಷ ಬನದ ಹುಣ್ಣಿಮೆ ನಂತರ ಬರುವ ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ದುರ್ಗಮ್ಮದೇವಿ ಮತ್ತು ಶ್ರೀ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಮಂಗಳವಾರ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಅರ್ಚಕರು ಶ್ರೀ ದುರ್ಗಮ್ಮ ಮತ್ತು ಶ್ರೀಮರಿಯಮ್ಮ ವಿಗ್ರಹಗಳ ಮುಖಗಳಿಗೆ ಬೆಳ್ಳಿಕವಚ ತೊಡಿಸಿ, ಹೊಸ ಸೀರೆಗಳನ್ನು ಉಡಿಸಿ ಹಾಗೂ ವಿವಿಧ ಹೂಗಳಿಂದ ಮತ್ತು ಮಾಲೆಗಳಿಂದ ಅಲಂಕರಿಸಿ, ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೆರಿಸಿದರು.
ಮಂಗಳವಾರ ಬೆಳಗ್ಗೆಯಿಂದಲೇ ಎಲ್ಲ ವರ್ಗಗಳ ಭಕ್ತರು ಸಿಹಿ ಅಡುಗೆಯೊಂದಿಗೆ ಹಣ್ಣುಕಾಯಿ ನೈವೇದ್ಯ ಮಾಡಿ ಭಕ್ತಿ ಸಮರ್ಪಿಸಿದರು. ನೂರಾರು ಮಹಿಳೆಯರು ಮಕ್ಕಳು ಯುವಕರು ಬೇವಿನ ಸೊಪ್ಪು ಉಡುಗೆಯೊಂದಿಗೆ ದೇವಸ್ಥಾನವನ್ನು 3 ಬಾರಿ ಪ್ರದರ್ಶನ ಮಾಡಿ ಹರಕೆ ಸರ್ಮಪಿಸಿದರು. ಸಾವಿರಾರು ಕುರಿ, ಕೋಳಿಗಳ ಬಲಿಯೊಂದಿಗೆ ಭಕ್ತಿ, ಹರಕೆ ಅರ್ಪಿಸಿಸಲಾಯಿತು. ಜಾತ್ರೆಗೆ ಆಗಮಿಸಿದ್ದ ಭಕ್ತರು, ಬಂಧುಗಳು, ಸಂಬಂಧಿಕರು ಬಾಡೂಟ ಸವಿದು ಹಬ್ಬ ಸಂಭ್ರಮಿಸಿದರು.ಸ್ಪರ್ಧೆ-ಬಹುಮಾನ:
ಸೋಮವಾರ ಮಧ್ಯಾಹ್ನದಿಂದ ರಾತ್ರಿವರೆಗೂ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವಿ ಯುವಕ ಸಮಿತಿಯವರು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಗೋಲಿ ಸ್ಪರ್ಧೆ, ಯುವಕರಿಗೆ ಸ್ಲೋ ಸೈಕಲ್ ರೈಸ್ ಸ್ಪರ್ಧೆ, ಗೋಣಿಚೀಲ ಸ್ಪರ್ಧೆ, ಮ್ಯೂಜಿಕಲ್ ಚೇರ್, ಹಗ್ಗಜಗ್ಗಾಟ, ಬಕೇಟ್ ಇನ್ ದಿ ಬಾಲ್ ಸ್ಪರ್ಧೆ, ಗೂಟ ಸುತ್ತುವ ಸ್ಪರ್ಧೆ, ವಿಶೇಷವಾಗಿ ಮಹಿಳೆಯರಿಗೆ ಲೆಮನ್ ಅಂಡ್ ಸ್ಪೂನ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಭಾರಿ ಬಯಲು ಕಾಟ ಜಂಗೀ ಕುಸ್ತಿ:
ಪಟ್ಟಣದ ಸರ್ವರ್ ಕೇರಿ ಶ್ರೀ ಆಂಜನೇಯ ಟ್ರಸ್ಟ್ ಕಮಿಟಿ ವತಿಯಿಂದ ಜಾತ್ರೆ ಪ್ರಯುಕ್ತ ಖಾಸಗಿ ಬಸ್ ನಿಲ್ದಾಣ ಬಳಿ ಬುಧವಾರ, ಗುರುವಾರ, ಶುಕ್ರವಾರ ಮೂರು ದಿನಗಳ ಕಾಲ ಬಯಲು ಕಾಟ ಜಂಗೀ ಕುಸ್ತಿ ಪಂದ್ಯಾವಳಿ ನಡೆಯಲಿವೆ. ರಾಜ್ಯದ ವಿವಿಧ ಭಾಗಗಳಿಂದ ಕುಸ್ತಿ ಪೈಲ್ವಾನರು ಆಗಮಿಸಲಿದ್ದಾರೆ ಎಂದು ಸಮಿತಿಯವರು ತಿಳಿಸಿದ್ದಾರೆ.- - -
-6ಎಚ್.ಎಲ್.ಐ1:ಹೊನ್ನಾಳಿ ಪಟ್ಟಣದ ದೇವತೆಗಳಾದ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ಜಾತ್ರೆ ಹಿನ್ನೆಲೆ ದೇವಸ್ಥಾನ ಶೃಂಗಾರಗೊಂಡಿದ್ದು, ಸಾವಿರಾರು ಭಕ್ತರು ದೇವಿದರ್ಶನ ಪಡೆದರು. ಮಹಿಳೆಯರು, ಪುರುಷರು ಯುವಕರು, ಮಕ್ಕಳು ಬೇವಿನ ಉಡುಗೆ ಹರಕೆ ತೀರಿಸಿದರು.