ನೆಹರು ಅಧಿಕಾರವಧಿಯಲ್ಲಿ ಭಿಕ್ಷುಕರ ದೇಶ, ಹಾವಾಡಿಗರ ದೇಶ ಎಂದು ಕರೆಯಲಾಗುತ್ತಿತ್ತು : ಬಿ.ಶ್ರೀರಾಮುಲು

KannadaprabhaNewsNetwork |  
Published : Jun 11, 2025, 11:45 AM ISTUpdated : Jun 11, 2025, 12:11 PM IST
ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಶ್ರೀರಾಮುಲು ಮಾತನಾಡಿದರು.  | Kannada Prabha

ಸಾರಾಂಶ

ಜವಾಹರಲಾಲ್ ನೆಹರು ಅವರು ಪ್ರಧಾನಿಯಾಗಿದ್ದ ವೇಳೆ ಭಾರತವನ್ನು ಭಿಕ್ಷುಕರ ದೇಶ, ಹಾವಾಡಿಗರ ದೇಶ ಎಂದು ಕರೆಯಲಾಗುತ್ತಿತ್ತು.

 ಬಳ್ಳಾರಿ : ಜವಾಹರಲಾಲ್ ನೆಹರು ಅವರು ಪ್ರಧಾನಿಯಾಗಿದ್ದ ವೇಳೆ ಭಾರತವನ್ನು ಭಿಕ್ಷುಕರ ದೇಶ, ಹಾವಾಡಿಗರ ದೇಶ ಎಂದು ಕರೆಯಲಾಗುತ್ತಿತ್ತು. ಭಾರತದ ಅಭಿವೃದ್ಧಿಗೆ ನೆಹರು ಯಾವ ಕೊಡುಗೆಯೂ ನೀಡಿಲ್ಲ. ಕುಟುಂಬ ಸ್ವಾರ್ಥಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡರು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ನರೇಂದ್ರ ಮೋದಿ ಅವರು 11 ವರ್ಷಗಳ ಸಾಧನೆ ಕುರಿತು ವಿವರಿಸಲು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೆಹರು ಕುಟುಂಬ ವೈಯಕ್ತಿಕ ಹಿತಾಸಕ್ತಿಗೆ ಕೆಲಸ ಮಾಡಿದೆಯೇ ವಿನಃ ದೇಶದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿಲ್ಲ. ಭಾರತ-ಚೀನಾ ಯುದ್ಧದಲ್ಲಿ ಭಾರತ ಮಂಡಿಯೂರಲು ನೆಹರು ನಿಲುವೇ ಕಾರಣ. ಇಂದಿರಾಗಾಂಧಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ತುರ್ತು ಪರಿಸ್ಥಿತಿ ಹೇರಿದ್ದರು. ಪ್ರಜಾಸತ್ತೆಯನ್ನು ದುರ್ಬಲಗೊಳಿಸುವ ಇಂದಿರಾಗಾಂಧಿ ಹುನ್ನಾರ ನಡೆಸಿದರು.

 ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಕುಟುಂಬ ಇಂದಿಗೂ ಹಗರಣಗಳಿಂದ ಮುಕ್ತವಾಗಿಲ್ಲ. ಬೋಫೋರ್ಸ್ ಹಗರಣದಿಂದ ಗಾಂಧಿ ಕುಟುಂಬ ಹೊರಬಂದಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಜೈಲಿಗೆ ಹೋಗುವುದು ಖಚಿತ ಎಂದು ತಿಳಿಸಿದರು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ದೇಶದ ಪ್ರಗತಿ ಏರುಗತಿಯಲ್ಲಿದೆ. ಜಾಗತಿಕವಾಗಿ ಭಾರತಕ್ಕೆ ದೊಡ್ಡ ಮನ್ನಣೆ ಸಿಕ್ಕಿದೆ. 

ಆರ್ಥಿಕವಾಗಿ ಪ್ರಬಲ ಶಕ್ತಿಯಾಗಿ ಭಾರತ ಹೊರ ಹೊಮ್ಮಲು ನರೇಂದ್ರ ಮೋದಿ ಅವರ ಆಡಳಿತ ವೈಖರಿಯೇ ಕಾರಣವಾಗಿದೆ. ಕಾಂಗ್ರೆಸ್‌ 60 ವರ್ಷದಲ್ಲಿ ಮಾಡಿದ ಸಾಧನೆ ಶೂನ್ಯವಾಗಿದ್ದು ಕಾಂಗ್ರೆಸ್‌ ಆರು ದಶಕಗಳಲ್ಲಿ ಮಾಡದ ಅನೇಕ ಪ್ರಮುಖ ಯೋಜನೆಗಳನ್ನು ನರೇಂದ್ರ ಮೋದಿ ಅವರು ಕೈಗೊಂಡು ಜಾಗತಿಕ ನಾಯಕ ಎನಿಸಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣಗಳ ಅಭಿವೃದ್ಧಿ, ಬಡಜನರ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ವಸತಿ ಯೋಜನೆಗಳು, ತ್ರಿವಳಿ ತಲಾಖ್ ರದ್ದು, ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ವಕ್ಫ್ ಕಾಯ್ದೆ ತಿದ್ದುಪಡಿ, ಉಗ್ರರನ್ನು ಮಟ್ಟಹಾಕಲು ಕೈಗೊಂಡ ಅನೇಕ ದಿಟ್ಟ ನಿರ್ಧಾರಗಳು, ಪಹಲ್ಗಾಂ ನಲ್ಲಿ ದಾಳಿ ನಡೆಸಿದ ಉಗ್ರರನ್ನು ಮಟ್ಟ ಹಾಕುವಲ್ಲಿ ಯಶಸ್ವಿ, ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ ದಾಳಿ ನಡೆಸಿ, ಜಯ ಸಾಧಿಸಿದ್ದು ಹೀಗೆ ಹತ್ತಾರು ಪ್ರಮುಖ ನಿರ್ಧಾರಗಳನ್ನು ಕೈಗೊಂಡ ನರೇಂದ್ರ ಮೋದಿ ಅವರು 11 ವರ್ಷಗಳ ಅವಧಿಯಲ್ಲಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಸಹ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಜಾರಿಗೊಂಡು ಪ್ರಗತಿ ಹಂತದಲ್ಲಿವೆ. ರೈಲ್ವೆ ಮೇಲ್ಸೇತುವೆಗಳು, ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗಿವೆ ಎಂದರು.

ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಎಂ.ಎಸ್. ಸೋಮಲಿಂಗಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಜಿಲ್ಲಾ ಪ್ರಮುಖರಾದ ಎಚ್‌.ಹನುಮಂತಪ್ಪ, ಡಾ. ಅರುಣಾ ಕಾಮಿನೇನಿ, ಕೆ.ಎಸ್. ದಿವಾಕರ, ಎಸ್‌.ಗುರುಲಿಂಗನಗೌಡ, ಗಣಪಾಲ ಐನಾಥರೆಡ್ಡಿ, ಗುತ್ತಿಗನೂರು ವಿರುಪಾಕ್ಷಗೌಡ, ಜೀವೇಶ್ವರಿ ರಾಮಕೃಷ್ಣ, ಸಾಧನಾ ಹಿರೇಮಠ, ಉಜ್ವಲಾ, ಪಾರ್ವತಿ ಇಂದುಶೇಖರ್, ಡಾ. ಮಹಿಪಾಲ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Read more Articles on

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ