ಮತ ಎಣಿಕೆ ವೇಳೆ ಬಿಜೆಪಿ, ಕಾಂಗ್ರೆಸ್‌ ಹಾವು ಏಣಿ ಆಟ

KannadaprabhaNewsNetwork |  
Published : Nov 24, 2024, 01:45 AM IST
23ಎಚ್‌ವಿಆರ್‌5 | Kannada Prabha

ಸಾರಾಂಶ

ಇಲ್ಲಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ವೇಳೆ ಪ್ರತಿ ಸುತ್ತು ಕೂಡ ತೀವ್ರ ಕುತೂಹಲ ಕೆರಳಿಸಿ ಬಿಜೆಪಿ ಮತ್ತು ಕಾಂಗ್ರೆಸ್‌ಗಳ ನಡುವೆ ಹಾವು ಏಣಿ ಆಟಕ್ಕೆ ಸಾಕ್ಷಿಯಾಯಿತು.

ಹಾವೇರಿ: ಇಲ್ಲಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ವೇಳೆ ಪ್ರತಿ ಸುತ್ತು ಕೂಡ ತೀವ್ರ ಕುತೂಹಲ ಕೆರಳಿಸಿ ಬಿಜೆಪಿ ಮತ್ತು ಕಾಂಗ್ರೆಸ್‌ಗಳ ನಡುವೆ ಹಾವು ಏಣಿ ಆಟಕ್ಕೆ ಸಾಕ್ಷಿಯಾಯಿತು.

ಮೊದಲ ಸುತ್ತಿನಲ್ಲಿ ಬಿಜೆಪಿ 325 ಮತಗಳ ಲೀಡ್‌ ಪಡೆದರೆ, ಎರಡನೇ ಸುತ್ತಿನಲ್ಲಿ ಅದು 1139 ಮತಗಳಿಂದ ಮುಂದಿದ್ದರು. ಮೂರನೇ ಸುತ್ತಿನಲ್ಲಿ ಬಿಜೆಪಿ ಗಳಿಸಿದ್ದ ಲೀಡ್‌ ಕಡಿಮೆಯಾಗಿ ಅದು 440ಕ್ಕೆ ಬಂದು ತಲುಪಿತು. 4ನೇ ಸುತ್ತಿನಲ್ಲಿ ಬಿಜೆಪಿ ತುಸು ಮುನ್ನಡೆ ಸಾಧಿಸಿ ಅಂತರವನ್ನು ನಾಲ್ಕು ಅಂಕಿಗೆ ತಲುಪಿತು. ಆಗ 1567 ಮತಗಳ ಮುನ್ನಡೆ ಗಳಿಸಿದ್ದ ಬಿಜೆಪಿ, 5ನೇ ಸುತ್ತಿನಲ್ಲಿ 1835 ಮತಗಳ ಲೀಡ್‌ ಪಡೆಯಿತು. 6ನೇ ಸುತ್ತಿನಲ್ಲಿ ಕಾಂಗ್ರೆಸ್‌ ಹೆಚ್ಚು ಮತ ಗಳಿಸಿದ್ದರಿಂದ ಬಿಜೆಪಿ ಲೀಡ್‌ನಲ್ಲಿ ಇಳಿಕೆಯಾಗಿ 662ಕ್ಕೆ ಬಂದು ತಲುಪಿತು. 7ನೇ ಸುತ್ತಿನಲ್ಲಿ ಬಿಜೆಪಿ 998 ಮತಗಳ ಮುನ್ನಡೆ ಗಳಿಸಿತ್ತು.

8ನೇ ಸುತ್ತಿನಿಂದ ಶುರುವಾದ ಕಾಂಗ್ರೆಸ್‌ ಪ್ರಾಬಲ್ಯ ಹಾಗೇ ಮುಂದುವರಿಯಿತು. 8ನೇ ಸುತ್ತಿನಲ್ಲಿ ಕಾಂಗ್ರೆಸ್‌ 1158 ಮತಗಳ ಮುನ್ನಡೆ ಗಳಿಸಿದ್ದರಿಂದ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಿತು. 9ನೇ ಸುತ್ತಿನಲ್ಲಿ ಇಬ್ಬರ ನಡುವಿನ ಅಂತರ 355ಕ್ಕೆ ಇಳಿಯಿತು. ಅಲ್ಪ ಅಂತರದ ಮುನ್ನಡೆಯಿಂದ ಹಾವು ಏಣಿ ಆಟ ಶುರುವಾಯಿತು. ಆದರೂ ಕಾಂಗ್ರೆಸ್‌ ಮುನ್ನಡೆ ಬಿಟ್ಟುಕೊಡಲಿಲ್ಲ. 10ನೇ ಸುತ್ತಿನಲ್ಲಿ ಭರ್ಜರಿ ಮತ ಗಳಿಕೆ ಮಾಡಿದ ಕಾಂಗ್ರೆಸ್‌, ಒಮ್ಮೆಲೆ 6479 ಮತಗಳ ಮುನ್ನಡೆ ಗಳಿಸಿತು. 11ನೇ ಸುತ್ತಿನಲ್ಲಿ ಅದು 12793ಕ್ಕೆ ತಲುಪಿತು. 12ನೇ ಸುತ್ತಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 12251 ಮತಗಳ ಮುನ್ನಡೆ ಗಳಿಸಿ ಗೆಲುವಿನತ್ತ ದಾಪುಗಾಲಿಟ್ಟರು. 13ನೇ ಸುತ್ತಿನಲ್ಲಿ ಈ ಅಂತರ 9996ಕ್ಕೆ ಇಳಿಯಿತು. 14ನೇ ಸುತ್ತಿನಲ್ಲಿ ಮತ್ತೆ ಕಾಂಗ್ರೆಸ್‌ 13448 ಮತಗಳ ಮುನ್ನಡೆ ಗಳಿಸಿತು. 15ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ಹೊತ್ತಿಗೆ ಕಾಂಗ್ರೆಸ್‌ 14125 ಮತಗಳ ಲೀಡ್‌ ಪಡೆದು ಗೆಲುವಿನ ಹೊಸ್ತಿಲಲ್ಲಿ ನಿಂತಿತ್ತು. 16ನೇ ಸುತ್ತಿನಲ್ಲಿ 13478, 17ನೇ ಸುತ್ತಿನಲ್ಲಿ 13659 ಮತಗಳ ಅಂತರದಲ್ಲಿ ಲೀಡ್‌ ಹೊಂದಿದ್ದ ಕಾಂಗ್ರೆಸ್‌ ಅಂತಿಮ ಹಾಗೂ 18ನೇ ಸುತ್ತಿನ ಹೊತ್ತಿಗೆ 13448 ಮತಗಳ ಲೀಡ್ ಪಡೆಯಿತು. ಆರಂಭದಲ್ಲಿ ಗೆಲುವಿನ ಆಸೆ ಚಿಗುರಿದ್ದ ಬಿಜೆಪಿಗೆ ಬರುಬರುತ್ತ ಆ ಆಸೆ ಕಮರಿತು. ಎಣಿಕೆ ಸುತ್ತು ಮುನ್ನಡೆಯುತ್ತಿದ್ದಂತೆ ಕೈ ಪಾಳೆಯದಲ್ಲಿ ಸಂಭ್ರಮ ಮನೆಮಾಡಿತು.

ಬೈ ಬೈ ಬೊಮ್ಮಾಯಿ:ಕಾಂಗ್ರೆಸ್‌ ಗೆಲುವು ಸಾಧಿಸುತ್ತಿದ್ದಂತೆ ಎಣಿಕೆ ಕೇಂದ್ರದ ಹೊರಗೆ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಈ ವೇಳೆ ಬೈ ಬೈ ಬೊಮ್ಮಾಯಿ... ಎಂಬ ಬಾವುಟವನ್ನು ಕಾರ್ಯಕರ್ತರು ಹಾರಾಡಿಸಿ ಸಂಭ್ರಮಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ