ಕನ್ನಡಪ್ರಭ ವಾರ್ತೆ ಮೈಸೂರು
ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ನಗರದ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈಸೂರು ನಗರ ವೇಗವಾಗಿ ಬೆಳೆಯುತ್ತಿರುವ ನಗರ. ಅದೇ ರೀತಿ ಮೂಲಭೂತ ಸೌಲಭ್ಯ ನೀಡಬೇಕಿದೆ. ಆದ್ದರಿಂದ ಸಲಹೆ ಸೂಚನೆ ಸ್ವೀಕರಿಸಲು ಈ ಚಿಂತನ ಮಂಥನ ಸಭೆ ಏರ್ಪಡಿಸಲಾಗಿದೆ ಎಂದರು.ಮುಖ್ಯಮಂತ್ರಿಗಳ ಸೂಚನೆ ಹಾಗೂ ನಿರ್ದೇಶನದ ಮೇರೆಗೆ ಮೈಸೂರು ಅಭಿವೃದ್ಧಿಗೆ ಅನುಗುಣವಾಗಿ ಭೌಗೋಳಿಕ ವಿಸ್ತೀರ್ಣ ಅಷ್ಟೇ ಇದೆ. ಜನಸಂಖ್ಯೆ ಹೆಚ್ಚಳ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸವಲತ್ತು ನೀಡಲು ಮೈಸೂರನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸಲು ಸಾರ್ವಜನಿಕರಿಂದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಸಲಹೆ ನೀಡಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡಿದ್ದಾರೆ. ಜಿಲ್ಲಾ ಆಸ್ಪತ್ರೆ ನಿರ್ಮಾಣ, ಕಾವೇರಿ ಕಬಿನಿ ಕುಡಿಯುವ ನೀರಿನ ಪೂರೈಕೆ, ದೊಡ್ಡಕೆರೆ ರಸ್ತೆ ಅಭಿವೃದ್ಧಿ, ಜಂಬೂಸವಾರಿ ಮಾರ್ಗದ ರಸ್ತೆ ಕಾಂಕ್ರಿಟ್ ಮಾಡಿರುವುದು ಹೀಗೆ ಹತ್ತು ಹಲವು ಅಭಿವೃದ್ಧಿಗಳನ್ನು ಮಾಡಲಾಗಿದೆ ಎಂದರು.
ಸಂಸದ ಯದುವೀರ್ ಕೃಷ್ಣರಾಜ ದತ್ತ ಒಡೆಯರ್ ಮಾತನಾಡಿ, ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡುವುದು ತುಂಬಾ ಅವಶ್ಯಕ. ಏಕೆಂದರೆ ಇದರಿಂದ ಕೇಂದ್ರ ಸರ್ಕಾರದ ಹಲವು ಯೋಜನೆಗಳು ಹಾಗೂ ಅನುದಾನ ಬರುತ್ತದೆ. ಇದಕ್ಕೂ ಮುಂಚೆ ಮೈಸೂರು ನಗರದಲ್ಲಿ ಇರುವ ಹಲವು ಸಮಸ್ಯೆಗಳಿಗೆ ಮೊದಲು ಪರಿಹಾರ ನೀಡಿ ನಂತರ ಬೃಹತ್ ಮೈಸೂರು ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಕಂದಾಯ ಬಡಾವಣೆಗಳನ್ನು ಅಕ್ರಮ ಇರುವುದನ್ನು ಸಕ್ರಮ ಮಾಡಲು ಸರ್ಕಾರ ಕ್ರಮ ವಹಿಸಬೇಕು. ಎಂಡಿಎ ವತಿಯಿಂದ ಅಭಿವೃದ್ಧಿ ಪಡಿಸಿರುವ ಬಡಾವಣೆಗಳು ವಿಶಾಲವಾಗಿವೆ. ಇದೇ ರೀತಿ ವಿಶಾಲ ರಸ್ತೆ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ಸಾರ್ವಜನಿಕರ ಸಲಹೆಗಳು
ಮೈಸೂರು ನಗರದ ರಿಂಗ್ ರೋಡ್ ಆಚೆ ಹೆಚ್ಚು ಕಾಳಜಿ ಇಲ್ಲ. ಖಾಸಗಿ ನಿವೇಶನಗಳ ಲೇ ಔಟ್, ಮೈಸೂರು ನಗರದ ನಾಲ್ಕು ದಿಕ್ಕುಗಳಲ್ಲಿ ಬಸ್ ನಿಲ್ದಾಣ ಮಾಡಬೇಕು. ವಾರ್ಡ್ ಗಳಲ್ಲಿ ಕ್ಲಿನಿಕ್ ಮಾಡಬೇಕು. ಶೈಕ್ಷಣಿಕವಾಗಿ ಪ್ರತಿ ವಾರ್ಡ್ ನಲ್ಲಿ ಶಾಲೆಗಳಲ್ಲಿ ಆಂಗ್ಲ ಭಾಷೆಯ ಬೋಧನೆ ಮಾಡಬೇಕು. ಪಾದಚಾರಿ ಮಾರ್ಗ ಒತ್ತುವರಿ ಆಗಿದೆ. ಅದನ್ನು ತೆರವುಗೊಳಿಸಿ ಎಂದರು.
ಮೈಸೂರಿನಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಅರಮನೆಯನ್ನು ಕೇಂದ್ರ ಬಿಂದುವಾಗಿ ಸುತ್ತಮುತ್ತಲಿನ 5 ಕಿಮೀ ವ್ಯಾಪ್ತಿಗೆ ಹೆಚ್ಚು ಸೌಲಭ್ಯ ಕಲ್ಪಿಸಬೇಕು. ಹಸಿ ಕಸವನ್ನು ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ಗ್ಯಾಸ್ ಉತ್ಪಾದನೆ ಮಾಡಬಹುದು. ವರುಣಾ ಚಾನಲ್ ಸುತ್ತ ಮುತ್ತ ಗ್ರೀನ್ ಬೆಲ್ಟ್ ಅಂತ ಇದೆ. ಅದನ್ನು ಹಾಗೆ ಉಳಿಸಿಕೊಳ್ಳಬೇಕು. ಬಡ ಜನರ ಮಕ್ಕಳು ಕಂಪ್ಯೂಟರ್ ಶಿಕ್ಷಣ ಪಡೆಯಲು ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ ತೆರೆಯಬೇಕು. ಮೈಸೂರು ನಗರದ ಹೊರವಲಯದಲ್ಲಿ ಸರ್ಕಾರಿ ಆಸ್ಪತ್ರೆ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.
ನಗರದಲ್ಲಿ 18 ಪಾರಂಪರಿಕ ರಸ್ತೆಗಳು ಇವೆ. ಈ ರಸ್ತೆಗಳಲ್ಲಿ ವಾಣಿಜ್ಯ ಕಟ್ಟಡಗಳು ಬರುತ್ತಿವೆ. ಆದರೆ ಇಲ್ಲಿ ವಾಣಿಜ್ಯ ಕಟ್ಟಡ ಕಟ್ಟಲು ಅವಕಾಶ ಇಲ್ಲ. ಆದ್ದರಿಂದ ಅವಕಾಶ ನೀಡಬಾರದು. 16 ಕಿಮೀ ರಾಜಕಾಲುವೆಗಳು ಇದ್ದು ಇವುಗಳ ಒತ್ತುವರಿ ಆಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ಎಲ್ಲಾ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದರು.ಪೌರ ಕಾರ್ಮಿಕರಿಗೆ ವಸತಿ ವ್ಯವಸ್ಥೆಗೆ ಹೆಚ್ಚು ಆದ್ಯತೆ ಇರಬೇಕು. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕಸ ವಿಲೇವಾರಿ ವ್ಯವಸ್ಥೆ ಮಾಡಬೇಕು. ಖಾಸಗಿ ಬಡಾವಣೆಗಳಿಗೆ ರಾಜ ಮಹಾರಾಜರ ಹೆಸರು ಇಡಬೇಕು. ಆಟದ ಮೈದಾನಗಳು ಜಾಸ್ತಿ ಆಗಬೇಕು. ಪ್ರಾಥಮಿಕ ಆರೋಗ್ಯ ಸೆಂಟರ್ ಗಳು ಜಾಸ್ತಿ ಆಗಬೇಕು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳು ದೊರೆಯುವಂತೆ ಆಗಬೇಕು. ರಾಜ ಕಾಲುವೆಗಳ ಒತ್ತುವಾರಿ ಆಗಿವೆ. ಅದರ ಬಗ್ಗೆ ಹೆಚ್ಚು ಗಮನ ಹರಿಸಿ. ಪಾರಂಪರಿಕ ನಗರಿ ಮೈಸೂರು ತನ್ನದೇ ಆದ ವೈಶಿಷ್ಟ್ಯತೆ ಇದೆ. ಮೈಸೂರು ನಗರವನ್ನು ಸ್ವಚ್ಛ ಆಗಿ ಇಡಿ. ಹೆಚ್ಚು ಸಾಂಸ್ಕೃತಿಕ ಅಭಿವೃದ್ಧಿ ಆಗಬೇಕು ಎಂದರು.
ಮೈಸೂರು ಸ್ವಚ್ಛನಗರಿ ಎಂದು 7 ಬಾರಿ ಪ್ರಶಸ್ತಿ ಪಡೆದು ಈಗ 27 ಸ್ಧಾನ ಬಂದಿದೆ. ಇದರಿಂದ ಹೆಚ್ಚು ಪೌರ ಕಾರ್ಮಿಕರನ್ನು ನೇಮಿಸಬೇಕು. ಪೌರ ಕಾರ್ಮಿಕರ ಕೆಲಸ ಕಾಯಂ ಮಾಡಲು ಅಗತ್ಯ ಕ್ರಮ ಆಗಬೇಕು. ಪಾರಂಪರಿಕ ಕಟ್ಟಡವಾದ ಮಾರುಕಟ್ಟೆ ಶಿಥಿಲ ಆಗುತ್ತಿದೆ. ಅದನ್ನು ಹೊಸದಾಗಿ ಕಟ್ಟಡ ಆಗಿ ಅದು ಸಂರಕ್ಷಣೆ ಆಗಬೇಕು ಎಂದು ಅವರು ಹೇಳಿದರು.ಚಾಮುಂಡಿಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಮೈಸೂರಿನ ನಾಲ್ಕು ದಿಕ್ಕುಗಳಲ್ಲಿ ಸಂಪರ್ಕ ಬಸ್ ನಿಲ್ದಾಣ ಸ್ಥಾಪಿಸಬೇಕು. ಮೈಸೂರು ನಗರಕ್ಕೆ ಮೆಟ್ರೋ ರೈಲು ತರಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ. ತಿಮ್ಮಯ್ಯ, ಎಚ್. ವಿಶ್ವನಾಥ್, ಡಾ. ಯತಿಂದ್ರ ಸಿದ್ದರಾಮಯ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಎಸ್ಪಿ ವಿಷ್ಣುವರ್ಧನ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.