ಕನ್ನಡಪ್ರಭ ವಾರ್ತೆ ನಾಗಮಂಗಲಮನುಷ್ಯರ ಹುಟ್ಟು ಸಾವಿನ ನಡುವೆ ಬದುಕುವ ದಿನಗಳಲ್ಲಿ ನಾಲ್ಕು ಹೆಜ್ಜೆ ಗುರುತುಗಳು ಬೇರೆಯವರಿಗೆ ದಾರಿ ದೀಪವಾಗುವಂತೆ ಮಾಡಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡ ಸಲಹೆ ನೀಡಿದರುತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ 79ನೇ ಜಯಂತ್ಯುತ್ಸವ ಹಾಗೂ 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಂಗಮ ಉದ್ಘಾಟಿಸಿ ಮಾತನಾಡಿದರು.
ಸತ್ಯ ಹೇಗೆ ಕಹಿಯಾಗಿರುತ್ತದೆಯೋ ಶಿಸ್ತು ಬದ್ಧ ಬದುಕೂ ಕೂಡ ಅಷ್ಟೇ ಕಷ್ಟವಾಗಿರುತ್ತದೆ. ಆದರೆ, ಶಿಸ್ತು ಬದ್ಧ ಬದುಕಿನಲ್ಲಿ ಬಹಳ ತೃಪ್ತಿ ಇರುತ್ತದೆ. ಯಾವುದಕ್ಕೂ ಕುಗ್ಗದೆ ಶಿಸ್ತು ಬದ್ಧ ಬದುಕನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಮುಂದಿನ ಜೀವನ ಸುಂದರವಾಗಿರುತ್ತದೆ ಎಂದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದ ನಾನು ಶಿಸ್ತು ಬದ್ಧತೆ ಮತ್ತು ಛಲದೊಂದಿಗೆ ಕಾಲೇಜಿನಲ್ಲಿ ವಿದ್ಯೆ ಕಲಿತು ಪಿಯು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದೆ. ಇಂತಹ ಛಲ ವಿದ್ಯಾರ್ಥಿಗಳಲ್ಲಿ ಬರಬೇಕು ಎಂದರು.
ಸ್ವಾರ್ಥ ಮತ್ತು ಕಲುಶಿತಗೊಂಡಿರುವ ಇಂದಿನ ರಾಜಕಾರಣ ವ್ಯವಸ್ಥೆಯಲ್ಲಿ ಉತ್ತಮ ಸಮಾಜ ರೂಪುಗೊಳ್ಳಲು ವಿದ್ಯಾರ್ಥಿಗಳು ಕಾರಣೀಭೂತರಾಗಬೇಕು. ಶ್ರೀಮಠದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿ ಉತ್ತಮ ಜೀವನ ರೂಪಿಸಿಕೊಂಡ ಬಳಿಕ ಶ್ರೀಮಠಕ್ಕೆ ತಮ್ಮ ಕೈಲಾದ ದೇಣಿಗೆ ಕೊಟ್ಟು ಈ ಮಠವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದರು.ಸಾನಿಧ್ಯ ವಹಿಸಿದ್ದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಶ್ರೀಮಠದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿ ದೇಶ ವಿದೇಶಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಇಂದಿಗೂ ಸಹ ಶ್ರೀಮಠದ ಮಕ್ಕಳೆಂದು ಭಾವಿಸುತ್ತಾರೆ ಹೊರತು ನಾನೊಬ್ಬ ವೈದ್ಯ, ಎಂಜಿನಿಯರ್ ಅಥವಾ ವಿಜ್ಞಾನಿ ಎಂಬ ಭಾವನೆ ವ್ಯಕ್ತಪಡಿಸುವುದಿಲ್ಲ ಎಂದರು.
ರಾಜ್ಯ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಪಡೆದ ನಂತರ ವೈದ್ಯಕೀಯ, ಎಂಜಿನಿಯರ್ ಸೇರಿದಂತೆ ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಸಹ ಆ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕು ಎಂದರು.ನಿವೃತ್ತ ಪೊಲೀಸ್ ಉಪ ಮಹಾನಿರೀಕ್ಷಕ ಎಚ್.ಎಸ್.ರೇವಣ್ಣ ಮಾತನಾಡಿ, ಪುರಾತನ ಪರಂಪರೆ ಹೊಂದಿರುವ ಆದಿಚುಂಚನಗಿರಿ ಮಠವು ಮಾನವೀಯ ಮೌಲ್ಯ ಕಲಿಸಿಕೊಡುವ ಪುಣ್ಯ ಕ್ಷೇತ್ರ. ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವುದೇ ಒಂದು ಸೌಭಾಗ್ಯ ಎಂದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಮತ್ತು ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು. ಬಿಜಿಎಸ್ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮು ಶ್ರೀಗಳು ಮತ್ತು ಗಣ್ಯರನ್ನು ಸ್ವಾಗತಿಸಿದರು. ನೂರಾರು ಮಂದಿ ಹಿರಿಯ ವಿದ್ಯಾರ್ಥಿಗಳು, ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ಮತ್ತು ಶ್ರೀಮಠದ ಭಕ್ತರು ಇದ್ದರು.