ಕುಕನೂರು: ಬಿನ್ನಾಳ ಗ್ರಾಮಕ್ಕೆ ಬಸವೇಶ್ವರರ ಆಶೀರ್ವಾದ ಇದೆ. ಇಡೀ ರಾಜ್ಯದಲ್ಲೇ ಬರ ಆವರಿಸಿದೆ. ಆದರೆ ನಮ್ಮ ಗ್ರಾಮಕ್ಕೆ ಮಳೆಯಾಗಿ ರೈತರ ಬೆಳೆಗಳು ಹುಲುಸಾಗಿ ಬೆಳೆದಿವೆ. ಗ್ರಾಮ ಸಮೃದ್ಧಿಯಾಗಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಮುಬಾರಕ ಯುವ ಕಲಾ ನಾಟ್ಯ ಸಂಘದಿಂದ ಹಮ್ಮಿಕೊಂಡಿದ್ದ ಸತ್ಯಮೇವ ಜಯತೆ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕಕ್ಕೆ ನಮ್ಮೂರು ಹೆಸರಾಗಿದೆ. ಇಲ್ಲಿನ ಜನತೆ ಬಹಳ ಮುಗ್ಧರು, ಸ್ವಾಭಿಮಾನಿಗಳು. ಕಾಯಕ ನಿಷ್ಠೆಗೆ ಮತ್ತು ಧಾರ್ಮಿಕತೆಗೆ ಬಿನ್ನಾಳ ಗ್ರಾಮ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಹಬ್ಬ ಹರಿದಿನ, ಜಾತ್ರಾ ಸಂದರ್ಭಗಳಲ್ಲಿ ನಾಟಕ ಅಭಿನಯಿಸುತ್ತಾ ನಮ್ಮೂರ ಯುವಕರು ರಂಗಭೂಮಿ ಕಲೆ ಉಳಿಸಿ ಬೆಳೆಸಲು ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದರು.ಕುಷ್ಟಗಿ ಪುರಸಭೆ ಮಾಜಿ ಅಧ್ಯಕ್ಷ ಕಲ್ಲೇಶ ತಾಳದ ಮಾತನಾಡಿ, ನಾಟ್ಯ ಸಂಘದ ಕಲಾವಿದರ ಕಾರ್ಯ ಶ್ಲಾಘನೀಯ. ಬಿನ್ನಾಳ ಗ್ರಾಮ ಭಾವೈಕ್ಯತೆಯ ಗ್ರಾಮವಾಗಿದೆ. ಗ್ರಾಮ ರಾಜಕೀಯ, ಸಾಹಿತ್ಯ, ಸಾಮಾಜಿಕ, ಧಾರ್ಮಿಕವಾಗಿ ಮುಂಚೂಣಿಯಲ್ಲಿದೆ ಎಂದರು.ರಂಗಭೂಮಿಯಲ್ಲಿ ಅಭಿನಯಿಸುವುದು ಸವಾಲಿನ ಕೆಲಸವಾಗಿದೆ. ರಂಗಕಲೆಯನ್ನು ಕರಗತ ಮಾಡಿಕೊಂಡಲ್ಲಿ ಉತ್ತಮ ಸಾಮಾಜಿಕ ನಾಟಕಗಳನ್ನು ಹೊರತರಬಹುದು. ಬಿನ್ನಾಳ ಯುವಕರೇ ಇದಕ್ಕೆ ಉದಾಹರಣೆಯಾಗಿದ್ದಾರೆ ಎಂದರು.