ಬ್ಯಾಡಗಿ: ಬರಗಾಲದ ಸಂದರ್ಭದಲ್ಲಿ ಪ್ರತಿ ಹನಿ ನೀರೂ ಅಮೂಲ್ಯವಾಗಿದ್ದು, ಜನರ ಬಾಯಾರಿಕೆ ನೀಗಿಸುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಜೀವಿನಿಗಳಿದ್ದಂತೆ. ಇಂತಹ ಘಟಕಗಳನ್ನು ಸದ್ಬಳಕೆ ಮಾಡಿಕೊಂಡು, ಅವುಗಳ ನಿರ್ವಹಣೆ ಹಾಗೂ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಶುದ್ಧ ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಮೂಲಭೂತ ಅವಶ್ಯಕತೆಯಾಗಿದೆ. ವಿಶೇಷವಾಗಿ ಬೇಸಿಗೆ ಹಾಗೂ ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಜನರಿಗೆ ಬಹಳಷ್ಟು ಅನುಕೂಲ ಕಲ್ಪಿಸುತ್ತವೆ. ಸಾರ್ವಜನಿಕ ಹಣದಿಂದ ನಿರ್ಮಾಣವಾಗುವ ಇಂತಹ ಸೌಲಭ್ಯಗಳು ನಿರಂತರವಾಗಿ ಜನರಿಗೆ ತಲುಪುವಂತೆ ನೋಡಿಕೊಳ್ಳುವುದು ಸ್ಥಳೀಯ ಆಡಳಿತ ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ. ಅಭಿವೃದ್ಧಿ ಕಾರ್ಯಗಳು ಪಕ್ಷಾತೀತವಾಗಿ ಜನರಿಗೆ ತಲುಪಿದಾಗ ಮಾತ್ರ ಅವುಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು. ಈ ವೇಳೆ ತಹಸೀಲ್ದಾರ್ ಸಾರಿಕಾ ಶಿಂಗನಮಕ್ಕಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ರಾಮಣ್ಣ ಕೋಡಿಹಳ್ಳಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಶಿಮಿ, ಗೀರೀಶ ಇಂಡಿಮಠ, ದುರ್ಗೇಶ ಗೋಣೆಮ್ಮನವರ, ಶಂಭನಗೌಡ ಪಾಟೀಲ, ಶಿವಪ್ಪ ಅಂಬಲಿ ಸೇರಿದಂತೆ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.