ಅಧಿಕ ಮಾಸ, ಆಂಜನೇಯ ದೇವಾಲಯಗಳಲ್ಲಿ ಭಕ್ತ ಸಾಗರ

KannadaprabhaNewsNetwork |  
Published : Jun 14, 2026, 02:15 AM IST
ಬ್ಯಾಡಗಿ ತಾಲೂಕಿನ ಕದರಮಂಡಲಗಿ ಶ್ರೀ ಕಾಂತೇಶ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಆಗಮಿಸಿದ ಭಕ್ತರು. | Kannada Prabha

ಸಾರಾಂಶ

ಅಧಿಕ ಮಾಸದ ಕೊನೆಯ ಶನಿವಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಕದರಮಂಡಲಗಿಯ ಕಾಂತೇಶ, ಸಾತೇನಹಳ್ಳಿಯ ಶಾಂತೇಶ ಹಾಗೂ ಶಿಕಾರಿಪುರದ ಭ್ರಾಂತೇಶ ದೇವಸ್ಥಾನಗಳಲ್ಲಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.

ಹಾವೇರಿ: ಅಧಿಕ ಮಾಸದ ಕೊನೆಯ ಶನಿವಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಕದರಮಂಡಲಗಿಯ ಕಾಂತೇಶ, ಸಾತೇನಹಳ್ಳಿಯ ಶಾಂತೇಶ ಹಾಗೂ ಶಿಕಾರಿಪುರದ ಭ್ರಾಂತೇಶ ದೇವಸ್ಥಾನಗಳಲ್ಲಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.

ಅಧಿಕ ಮಾಸದಲ್ಲಿ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಕಾಂತೇಶ, ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಶಾಂತೇಶ ಹಾಗೂ ಪಕ್ಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಭ್ರಾಂತೇಶ ಆಂಜನೇಯ ದೇವರ ದರ್ಶನವನ್ನು ಒಂದೇ ದಿನದಲ್ಲಿ ಪಡೆದರೆ ಕಾಶಿ ಯಾತ್ರೆ ಮಾಡಿದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಅಧಿಕ ಮಾಸ ಆರಂಭವಾದಾಗಿನಿಂದಲೂ ಶನಿವಾರವಷ್ಟೇ ಅಲ್ಲದೇ ಬೇರೆ ದಿನಗಳಂದೂ ಭಕ್ತರು ಆಗಮಿಸುತ್ತಿದ್ದರು. ಅಧಿಕ ಮಾಸದ ಕೊನೆಯ ಶನಿವಾರವಾದ್ದರಿಂದ ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧ ಭಾಗಗಳಷ್ಟೇ ಅಲ್ಲದೆ ನೆರೆಯ ಜಿಲ್ಲೆಗಳಿಂದಲೂ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ದರ್ಶನ ಪಡೆದರು.

ದೇವಸ್ಥಾನದ ಮುಂಭಾಗದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದು, ಜನಸಂದಣಿ ಹೆಚ್ಚಾದ ಕಾರಣ ಸರತಿ ಸಾಲು ದೇವಸ್ಥಾನದ ಆವರಣ ದಾಟಿ ಕಿಲೋಮೀಟರ್‌ಗಟ್ಟಲೆ ವಿಸ್ತರಿಸಿತ್ತು. ಹಲವು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾದರೂ ಭಕ್ತರು ಶಾಂತರೀತಿಯಿಂದ ಕಾದು ಶ್ರದ್ಧಾಭಕ್ತಿಯಿಂದ ದೇವರ ದರ್ಶನ ಪಡೆದರು.

ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಆಡಳಿತ ಮಂಡಳಿಯಿಂದ ಕುಡಿಯುವ ನೀರು, ನೆರಳು ಹಾಗೂ ಸರತಿ ಸಾಲಿನ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ ವಿಶೇಷ ಪೂಜೆ, ಅಭಿಷೇಕ ಮತ್ತು ಪ್ರಸಾದ ವಿತರಣೆಯೂ ನಡೆಯಿತು.

ಇನ್ನೊಂದೆಡೆ, ಸಾವಿರಾರು ವಾಹನಗಳು ಏಕಕಾಲದಲ್ಲಿ ಆಗಮಿಸಿದ್ದರಿಂದ ದೇವಸ್ಥಾನದ ಸುತ್ತಮುತ್ತ ಪಾರ್ಕಿಂಗ್ ಸಮಸ್ಯೆ ಉಂಟಾಗಿ ವಾಹನ ಸವಾರರು ಸಾಕಷ್ಟು ಪರದಾಡಬೇಕಾಯಿತು. ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಹಾಗೂ ಸ್ವಯಂಸೇವಕರು ಹರಸಾಹಸ ಪಟ್ಟರು. ಅಧಿಕ ಮಾಸದ ಕೊನೆಯ ಶನಿವಾರದ ಅಂಗವಾಗಿ ನಡೆದ ವಿಶೇಷ ದರ್ಶನ ಮತ್ತು ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದ್ದು, ದಿನವಿಡೀ ದೇವಸ್ಥಾನದ ಆವರಣದಲ್ಲಿ ರಾತ್ರಿವರೆಗೂ ಭಕ್ತ ಸಾಗರವೇ ಕಂಡುಬಂದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ
ಎಸ್‌.ಎಸ್‌. ನಾರಾಯಣ ಆಸ್ಪತ್ರೆಯಿಂದ ಬೆಂಟಾಲ್‌ ಶಸ್ತ್ರಚಿಕಿತ್ಸೆ ಯಶಸ್ವಿ