ಸೋಮರಡ್ಡಿ ಅಳವಂಡಿ ಕೊಪ್ಪಳ
ಕೊಪ್ಪಳ ಜಿಲ್ಲೆಗೆ ಇದೇ ಮೊದಲ ಬಾರಿಗೆ ಇಬ್ಬರಿಗೆ ಸಚಿವ ಸ್ಥಾನ ದೊರೆತಿರುವುದು ಡಬಲ್ ಧಮಾಕಾ ಎನ್ನುವಂತಾಗಿದೆ. ಕೊಪ್ಪಳ ಜಿಲ್ಲೆಯಾದ ಮೇಲೆ ಇದೇ ಮೊದಲ ಬಾರಿ ಜಿಲ್ಲೆಯ ಇಬ್ಬರು ಶಾಸಕರು ಸಚಿವರಾಗಿದ್ದಾರೆ.ಅನೇಕ ಬಾರಿ ಕೊಪ್ಪಳಕ್ಕೆ ಸಚಿವ ಸ್ಥಾನ ತಪ್ಪಿದ್ದೇ ಹೆಚ್ಚು. ಅನ್ಯ ಜಿಲ್ಲೆಯವರೇ ಕೊಪ್ಪಳ ಜಿಲ್ಲಾ ಉಸ್ತುವಾರಿ ನಿರ್ವಹಿಸಿದ್ದಾರೆ. ಆದರೆ ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ ಮತ್ತೆ ಸಚಿವರಾಗುವ ಮೂಲಕ ನಾಲ್ಕನೇ ಬಾರಿ ಸಚಿವರಾಗಿದ್ದಾರೆ. ಶಿವರಾಜ ತಂಗಡಗಿ ಅವರನ್ನು ಅದೃಷ್ಠವಂತ ಶಾಸಕ ಎಂದೇ ಗೆದ್ದಾಗಲೂ ಅವರು ಮಂತ್ರಿಯಾಗಿದ್ದಾರೆ. ಮೂರು ಬಾರಿ ಗೆಲವು ಸಾಧಿಸಿದ್ದು, ನಾಲ್ಕು ಬಾರಿ ಸಚಿವರಾಗಿದ್ದಾರೆ.
ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ತಮ್ಮ ರಾಜಕೀಯ ಜೀವನದಲ್ಲಿ ಮೂರನೇ ಬಾರಿ ಸಚಿವರಾಗಿದ್ದಾರೆ. ಈ ಮೂಲಕ ಕೊಪ್ಪಳ ಜಿಲ್ಲೆಯ ಇಬ್ಬರು ಸಚಿವರಾಗಿದ್ದಾರೆ. ಇದಲ್ಲದೆ ದೆಹಲಿ ಪ್ರತಿನಿಧಿಯಾಗಿ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಸಚಿವ ಸಂಪುಟ ದರ್ಜೆಯಲ್ಲಿ ಹುದ್ದೆ ನಿಭಾಯಿಸಿದ್ದಾರೆ.ಹಾಗೆ ನೋಡಿದರೆ ಈ ಬಾರಿ ಬಸವರಾಜ ರಾಯರಡ್ಡಿಗೆ ಸಚಿವ ಸ್ಥಾನ ದೊರೆಯುವುದಿಲ್ಲ ಎನ್ನುವ ಚರ್ಚೆಯ ನಡುವೆ ಸಚಿವ ಸ್ಥಾನ ಧಕ್ಕಿಸಿಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಿಗಿಪಟ್ಟಿನಿಂದ ಸಚಿವ ಸ್ಥಾನ ದಕ್ಕಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಯಾರ ಹೆಗಲಿಗೆ ಉಸ್ತುವಾರಿ:
ಕೊಪ್ಪಳ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ನೀಡಿರುವುದರಿಂದ ಯಾರಿಗೆ ಉಸ್ತುವಾರಿ ನೀಡಲಾಗುತ್ತದೆ ಎನ್ನುವುದು ಸದ್ಯದ ಕುತೂಹಲವಾಗಿದೆ.
ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿಗೆ ಸಿಗುತ್ತದೆಯೋ ಅಥವಾ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿಗೆ ದೊರೆಯುತ್ತದೆ ಎನ್ನುವುದು ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಬಸವರಾಜ ರಾಯರಡ್ಡಿಗೆ ಹಣಕಾಸು ಖಾತೆ ಸಿಗಲಿದೆ ಎನ್ನುವ ವದಂತಿ ಜೋರಾಗಿದೆ. ಹಾಗೊಂದು ವೇಳೆ ಅದು ಸಿಕ್ಕರೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಶಿವರಾಜ ತಂಗಡಗಿಗೆ ಮತ್ತೆ ಸಿಗಲಿದೆ.ಯೋಗವಿಲ್ಲ: ಜಿಲ್ಲಾ ಕೇಂದ್ರ ಸ್ಥಾನ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನದ ಯೋಗವೇ ಇಲ್ಲದಂತಾಗಿದೆ. ಇದುವರೆಗೂ ಜಿಲ್ಲಾ ಕೇಂದ್ರ ಕೊಪ್ಪಳ ಕ್ಷೇತ್ರದಿಂದ ಆಯ್ಕೆಯಾಗಿದ್ದ ವಿರುಪಾಕ್ಷಪ್ಪ ಅಗಡಿ ಅವರು ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕೇವಲ ವಾರಗಳ ಕಾಲ ಮಾತ್ರ ಸಚಿವರಾಗಿದ್ದರು. ಅದಾದ ನಂತರ ಯಾರಿಗೂ ಧಕ್ಕಿಲ್ಲ. ಈ ಬಾರಿ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ.ಆದರೂ ಸಚಿವ ಸ್ಥಾನ ದೊರೆಯಲೇ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿಯೂ ಧಕ್ಕಲಿಲ್ಲ, ಈಗ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರದಲ್ಲಿಯೂ ಧಕ್ಕದೆ ಇರುವುದು ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.