ಕನ್ನಡಪ್ರಭ ವಾರ್ತೆ ರಾಯಚೂರು
ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿತು. ಬೈಕ್, ಕಾರು, ಟ್ರ್ಯಾಕ್ಟರ್ ಸೇರಿದಂತೆ ವಾಹನಗಳು, ಕೃಷಿ ಉಪಕರಣಗಳು, ಕೈಗಾರಿಕಾ ಯಂತ್ರೋಪಕರಣಗಳಿಗೆ ಜನರು ಪೂಜೆ ಸಲ್ಲಿಸಿದರು. ಸರ್ಕಾರಿ-ಖಾಸಗಿ ಕಚೇರಿಗಳು, ಅಂಗಡಿ-ಮುಂಗಟ್ಟುಗಳು, ಮನೆಗಳಲ್ಲಿ ಆಯುಧ ಪೂಜೆಯ ಸಂಭ್ರಮ ಮನೆಮಾಡಿತ್ತು. ಜಿಲ್ಲಾಧಿಕಾರಿಗಳ ಕಚೇರಿ, ಜಿಪಂ ಸಿಇಒ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಇಲಾಖೆ ವಾಹನ, ಶಸ್ತ್ರಾಸ್ತ್ರಗಳಿಗೆ ಪೊಲೀಸರು ವಿಶೇಷ ಪೂಜೆ ಸಲ್ಲಿಸಿದರು.
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದಸರಾ ನಿಮಿತ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀಮಠದ ಆವರಣದಲ್ಲಿರುವ ಶಮಿ ವೃಕ್ಷಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶಮಿ ಪೂಜೆಯನ್ನು ನೆರವೇರಿಸಿದರು.ವಿಜಯದಶಮಿ ದಿನ ಬೆಳಗ್ಗೆ ಎಲ್ಲ ದೇವಸ್ಥಾನ, ಮಠ-ಮಾನ್ಯಗಳಲ್ಲಿ ದೇವಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಸೇವೆಗಳು ಜರುಗಿದವು. ಮನೆಗಳಲ್ಲಿ ಘಟಸ್ಥಾಪನೆ ಮಾಡಿದ್ದ ಭಕ್ತರು ಮಹಾಮಂಗಳಾರತಿಯೊಂದಿಗೆ ಹಬ್ಬಕ್ಕೆ ತೆರೆ ಎಳೆದರು.
ಮಾಜಿ ಸಚಿವ ಎನ್.ಎಸ್.ಬೋಸರಾಜು, ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ವಿವಿಧ ಮಠಗಳು, ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಯನ್ನು ನೆರವೇರಿಸಿದರು.
ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಹಲಗೆ-ಡೊಳ್ಳು, ಕೋಲಾಟ, ಹುಲಿಕುಣಿತ, ತಮಟೆ ಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ಕಲಾ ತಂಡಗಳ ಡೊಳ್ಳು ಕುಣಿತ ಗಮನ ಸೆಳೆಯಿತು. ನೂರಾರು ಮುತ್ತೈದೆಯರು ಪೂರ್ಣಕುಂಭ, ಕಳಸ ಹೊತ್ತು ಹೆಜ್ಜೆ ಹಾಕಿದರು. ಜಿಲ್ಲಾಧಿಕಾರಿ ಪೂವಿತಾ.ಎಸ್, ಆಯುಕ್ತ ಜುಬಿನ್ ಮೊಹಾಪಾತ್ರ, ವಿವಿಧ ಪಕ್ಷಗಳ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.