ಕನ್ನಡಪ್ರಭ ವಾರ್ತೆ ತಿಪಟೂರು
ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡುತ್ತ, ಶ್ರೀ ಚೌಡೇಶ್ವರಿ ತಾಯಿಯಿಂದ ಹಲವಾರು ಪವಾಡ ಜರುಗಿದ್ದು ದೇವಿ ಶಕ್ತಿಯನ್ನು ನಾವು, ನೀವೆಲ್ಲ ಅರಿತಿದ್ದೇವೆ. ಜಗತ್ತಿನ ಸಂಸಾರ ಮುಳ್ಳು ಗದ್ದಿಗೆಯಂತೆ ಎಂದು ತಿಳಿಸಿದರು.
ಬದುಕಿನಲ್ಲಿ ಹಲವಾರು ಕಷ್ಟಗಳು ಬರುತ್ತವೆ. ಕಷ್ಟಕ್ಕೆ ಯಾರು ಕಾರಣರಲ್ಲ. ಆಧ್ಯಾತ್ಮಿಕ ತಾಪ, ಭೌತಿಕ ತಾಪ, ಆದಿ ದೈವಿಕ ತಾಪ ಕೂಡ ಬರಲಿದೆ. ಈ ಎಲ್ಲಾ ತಾಪಗಳನ್ನು ಪರಿಹರಿಸಿಕೊಳ್ಳಲು ತಾಯಿ ಶ್ರೀ ಚೌಡೇಶ್ವರಿ ದೇವಿಯಿಂದ ಮಾತ್ರ ಸಾಧ್ಯ. ಜೀವನದಲ್ಲಿ ನಾವು ಯಾರಿಗೂ ತೊಂದರೆ ಮಾಡಬಾರದು. ನಾವು ಮಾಡಿದ ಒಳ್ಳೆಯದು ಹಾಗೂ ಕೆಟ್ಟದ್ದನ್ನು ನಾವೇ ಅನುಭವಿಸಬೇಕಾಗುತ್ತದೆ. ಕಷ್ಟಗಳೆಂಬುವು ಸಾಮಾನ್ಯ. ಕಷ್ಟಗಳೆಂಬ ಮುಳ್ಳುಗಳ ಮೇಲೆ ನಡೆಯುವಾಗ ಭಗವಂತನ ಸ್ಮರಣೆ ಮಾಡಿದರೆ ಕಷ್ಟಗಳು ಮಂಜಿನಂತೆ ಕರಗುತ್ತವೆ. ಸಂಸಾರದ ಸಾಗರದಲ್ಲಿ ಸಹ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು. ಜಗತ್ತಿನ ಸೃಷ್ಟಿಕರ್ತ ಪರಮಾತ್ಮ. ಮನುಷ್ಯನಾದವನು ಕೃತಜ್ಞತಾ ಬಾವದಿಂದ ಬದುಕಬೇಕು. ವಿಜ್ಞಾನ ಎಷ್ಟೇ ಮುಂದುವರಿದರೂ ಜ್ಙಾನವೆಂಬುದು ಮಸುಕಾಗಿದೆ. ಪ್ರಕೃತಿ ಮುಂದೆ ಮನುಷ್ಯ ಕ್ಷಣಿಕನಾಗಿದ್ದಾನೆ. ಅಂತಃಕರಣ ಶುದ್ಧಿಗೊಂಡರೆ ಮತ್ತಷ್ಟು ಶಕ್ತಿ ಪಡೆಯಬಹುದು. ಮನುಷ್ಯನ ಪಯಣ ಯಾವಾಗಲೂ ಒಳ್ಳೆಯ ದಿಕ್ಕಿನಲ್ಲಿ ಸಾಗಲಿ. ಯಾವಾಗಲೂ ದೇವರ ಮೇಲೆ ಹಾಗೂ ಗುರುವಿನ ಮೇಲೆ ಶ್ರದ್ಧೆ ಇಟ್ಟುಕೊಳ್ಳಬೇಕು. ಜ್ಞಾನ ಗುರುವಿನಿಂದ ಬರಲಿದ್ದು ದೇವಿ, ದೇವತೆಗಳ ಭಕ್ತಿ ಸ್ಮರಣೆಯಿಂದ ಕಷ್ಟಗಳು ಪರಿಹಾರವಾಗಲಿವೆ ಎಂದು ಹೇಳಿದರು.ಮಾದೀಹಳ್ಳಿ ರಾಮಕೃಷ್ಣ ಮಠದ ಶ್ರೀ ಪ್ರದ್ಯುತ್ ನಾಥ ಸ್ವಾಮೀಜಿ ಮಾತನಾಡಿ ಶ್ರೀ ಚೌಡೇಶ್ವರಿ ದೇವಿಯು ಸಜ್ಜನರಿಗೆ ಆಶೀರ್ವದಿಸಲಿದ್ದು ಇಲ್ಲಿಗೆ ಬಂದಿರುವ ಭಕ್ತರೆಲ್ಲರಿಗೂ ಚೌಡೇಶ್ವರಿ ತಾಯಿ ಮಕ್ಕಳಂತೆ ಬಂದಿದ್ದಾರೆ. ಜಗತ್ತಿನಲ್ಲಿ ಶಕ್ತಿಯ ವೈಶಿಷ್ಟ್ಯಗಳನ್ನ ಜಗನ್ಮಾತೆಯಿಂದ ಕಾಣಲು ಸಾಧ್ಯ. ಭಕ್ತರೆಲ್ಲರಿಗೂ ದೇವಿ ಕೃಪೆ ದೊರಕಲಿ ಎಂದು ಶ್ರೀಗಳು ಹೇಳಿದರು.
ಮುಳ್ಳು ಗದ್ದುಗೆ ವಿಶೇಷ