ರಂಗೂಪುರ ಶಿವಕುಮಾರ್
ನವರಾತ್ರಿ ಹಾಗೂ ದಸರಾ ರಜೆ ಹಿನ್ನೆಲೆ ಶನಿವಾರ ಬಂಡೀಪುರ ಸಫಾರೀಲಿ ದಂಡು ಕಂಡರೆ, ಗೋಪಾಲಸ್ವಾಮಿ ಬೆಟ್ಟಕ್ಕೆ ಭಕ್ತರು ದಂಡೇ ನೆರೆದಿತ್ತು.
ಅ.11 ರಂದು ಆಯುಧ ಪೂಜೆ, ಅ.12 ರಂದು ವಿಜಯ ದಶಮಿ ರಜೆಯಿದ್ದ ಕಾರಣ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇತರೆ ಜಿಲ್ಲೆ ಹಾಗೂ ಕೇರಳ ಹಾಗೂ ತಮಿಳುನಾಡಿನ ಪ್ರವಾಸಿಗರು ಹರಿದು ಬಂದಿದ್ದರು.ಶನಿವಾರ ಬೆಳಗ್ಗೆ ಹಾಗೂ ಸಂಜೆ ಬಂಡೀಪುರ ಸಫಾರಿಗೆ ಸಾವಿರಾರು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಫಾರಿ ಕೇಂದ್ರದ ಆವರಣದಲ್ಲಿ ಕಾರುಗಳು ಸಾಲುಗಟ್ಟಿ ನಿಂತಿದ್ದವು.
ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟಕ್ಕೂ ದರ್ಶನ ಪಡೆಯಲು ಭಕ್ತರು ಮುಗಿ ಬಿದ್ದಿದ್ದರು. ಬೆಟ್ಟದ ತಪ್ಪಲಿನ ಗೇಟ್ ಬಳಿ ಭಕ್ತರು ಕಿಲೋಮೀಟರ್ ಗಟ್ಟಲೇ ಉರಿ ಬಿಸಿಲಿನಲ್ಲೂ ಸಾಲು ಗಟ್ಟಿ ನಿಂತು ಬಸ್ ಏರಿ ಬೆಟ್ಟಕ್ಕೆ ತೆರಳಿದರು.
ಗೋಪಾಲಸ್ವಾಮಿ ದೇವಸ್ಥಾನಕ್ಕೆ ಬೆಟ್ಟದ ತಪ್ಪಲಿನಿಂದ ೧೦ ಕೆಎಸ್‌ಆರ್‌ಟಿಸಿ ಬಸ್ ಬಿಡಲಾಗಿತ್ತು. ಬೆಳಗ್ಗೆ ಸಂಜೆಯ ತನಕ ಸುಮಾರು ೪ ಸಾವಿರಕ್ಕೂ ಹೆಚ್ಚು ಜನರು ಬೆಟ್ಟಕ್ಕೆ ತೆರಳಿದ್ದಾರೆ ಎನ್ನಬಹುದು.
----------------------
ಗುಂಡ್ಲುಪೇಟೆ: ವಿಜಯದಶಮಿ ಹಿನ್ನೆಲೆ ಬಂಡೀಪುರ ಸುತ್ತಮುತ್ತಲಿನ ಖಾಸಗಿ ರೆಸಾರ್ಟ್, ಹೋಟೆಲ್ ಹಾಗೂ ಗುಂಡ್ಲುಪೇಟೆ ಹೋಟೆಲ್‌ಗಳಲ್ಲೂ ಶುಕ್ರವಾರ ರಾತ್ರಿ ಪ್ರವಾಸಿಗರು ಬೀಡು ಬಿಟ್ಟಿದ್ದರು.
ಪಟ್ಟಣದ ಉದ್ಯಮ ಭವನ್, ಗುರುಪ್ರಸಾದ್, ಶಬರಿ, ಅನ್ನಪೂರ್ಣ, ಸಂತೋಷ್, ಶ್ರೀನಿಧಿ ಹೋಟೆಲ್‌ಗಳಲ್ಲಿ ಬೆಳಿಗ್ಗೆಯಿಂದ ರಾತ್ರಿ ತನಕ ತುಂಬಿ ತುಳುಕುತ್ತಿದ್ದರು.