ಶಿವಮೊಗ್ಗ: ಮೈಸೂರು ಮಾದರಿಯಲ್ಲಿ 9 ದಿನಗಳ ಕಾಲ ನಡೆಯುವ ಶಿವಮೊಗ್ಗ ದಸರಾದಲ್ಲಿ ಕಳೆದ ಬಾರಿ ಆದ ಸಮಸ್ಯೆಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಸೂಚಿಸಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ’ದಸರಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ಬಾರಿ ಪೆಂಡಾಲ್ ಹಾಕುವುದು ಸೇರಿ ಕೆಲವು ಕಡೆ ಗೊಂದಲ ಎದುರಾಗಿತ್ತು. ಆದ್ದರಿಂದ, ಜವಾಬ್ದಾರಿ ಹೊತ್ತವರು ಅದರೆಡೆಗೆ ಗಮನಹರಿಸಬೇಕು. ಉದ್ಘಾಟಕರ ಹೆಸರು, ಅತಿಥಿಗಳು, ರಂಗ ಕಲಾವಿದರು ಸೇರಿ ಅಗತ್ಯವಿರುವ ಎಲ್ಲ ಪೂರ್ವ ಸಿದ್ಧತೆಗಳನ್ನು ಮುಂಚಿತವಾಗಿ ಮಾಡಿಕೊಳ್ಳಬೇಕು ಎಂದರು.ಇದರಿಂದ ಎಲ್ಲರಿಗೂ ಸಕಾಲದಲ್ಲಿ ಆಹ್ವಾನ ಪತ್ರಿಕೆ ನೀಡಲು ಸಹಕಾರಿಯಾಗಲಿದೆ. ಒಂದು ವೇಳೆ, ರಚಿಸಿದ ಸಮಿತಿಗಳೇ ಕಾರ್ಯ ನಿರ್ವಹಣೆಯಲ್ಲಿ ವಿಳಂಬ ಧೋರಣೆ ತೋರಿದರೆ ಇಡೀ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ, ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.ಚಾಮುಂಡೇಶ್ವರಿ ದೇವಿಗೆ ಪ್ರತಿ ವರ್ಷ ಚಿನ್ನದ ಒಡವೆ ನೀಡುವುದು ವಾಡಿಕೆ. ಇದನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಕಳೆದ ಬಾರಿ ಕಾಸಿನ ಸರ ನೀಡಲಾಗಿತ್ತು. ಈ ಬಾರಿ ಏನು ನೀಡಬಹುದು ಎಂದು ಮುಂಚಿತವಾಗಿಯೇ ನಿರ್ಧರಿಸಬೇಕು. ಜಂಬೂ ಸವಾರಿಗಾಗಿ ಆನೆಗಳನ್ನು ಕರೆತರುವುದರ ಆದಿಯಾಗಿ ಅದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.ಈ ವೇಳೆ ಮಾತನಾಡಿದ ಸಿಬ್ಬಂದಿಯೊಬ್ಬರು, ರಂಗ ದಸರಾದಲ್ಲಿ ಅಧಿಕ ಕಾರ್ಯಕ್ರಮಗಳಿದ್ದರೂ ನೀಡುವ ಅನುದಾನ ಕಡಿಮೆ. ಹೀಗಾಗಿ, ಅನುದಾನ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ರಾಜ್ಯದಲ್ಲಿಯೇ ಶಿವಮೊಗ್ಗ ದಸರಾಕ್ಕೆ ಉತ್ತಮ ಅಭಿಪ್ರಾಯ ಇದೆ. ಕಳೆದ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ಅವರು ಕೂಡ ಇದನ್ನೇ ಹೇಳಿದ್ದರು. ಇದು ಎಲ್ಲರೂ ಸೇರಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದರ ಪ್ರತಿಫಲವಾಗಿದೆ. ಈ ಸಲವೂ ಅನುದಾನಕ್ಕಾಗಿ ಸಿಎಂ ಭೇಟಿ ಮಾಡುತ್ತೇನೆ. ಪಾಲಿಕೆಯಿಂದ ಅಗತ್ಯ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಿ ಎಂದು ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಗಣೇಶ ಹಬ್ಬ, ಈದ್‌ಮಿಲಾದ್‌ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಅದಕ್ಕಾಗಿ ವಾರ್ಡ್‌ವಾರು ಜವಾಬ್ದಾರಿಗಳನ್ನು ಹಂಚಲಾಗಿದ್ದು, ಇದರ ನಡುವೆ ತಮ್ಮ ಕರ್ತವ್ಯಗಳನ್ನು ಸಹ ಸರಿಯಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.ಇದೇ ವೇಳೆ ದಸರಾ ಅಂಗವಾಗಿ ಒಟ್ಟು 14 ಸಮಿತಿಗಳನ್ನು ರಚಿಸಲಾಗಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗೆ ಇದರ ಜವಾಬ್ದಾರಿ ನೀಡಲಾಯಿತು.ಸಭೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.