ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜನರ ಜೀವನಶೈಲಿ, ಆಚಾರ-ವಿಚಾರ, ಸಂಸ್ಕೃತಿ ಪರಂಪರೆ ಪ್ರತಿಬಿಂಬಿಸುವ ಮತ್ತು ಹಿಂದಿನ ಅನೇಕ ಘಟನೆಗಳ ಬಗ್ಗೆ ಮಾಹಿತಿ ನೀಡಲು ಬೊಂಬೆ ಸಂಸ್ಕೃತಿ ಇಂದಿಗೂ ಪ್ರಸ್ತುತ ಎಂದು ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ, ನೇತ್ರಭಂಡಾರದ ಚೇರ್ಮನ್ ವಿ.ನಾಗರಾಜ್ ಹೇಳಿದರು.ನಗರದ ನವ್ಯಶ್ರೀ ಸಭಾಂಗಣದಲ್ಲಿ ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ನೋಡೋಣ ಬನ್ನಿ ದಸರಾ ಬೊಂಬೆ ಕಾರ್ಯಕ್ರಮದಲ್ಲಿ ಮಾತನಾಡಿ, ಇತಿಹಾಸ, ಸಂಸ್ಕೃತಿ ಬಗ್ಗೆ ಮಕ್ಕಳಿಗೆ ತಿಳಿಸಲು ದಸರಾ ಬೊಂಬೆ ಪ್ರದರ್ಶನ ಹೆಚ್ಚು ಸಹಕಾರಿ. ಕಲೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವುದರ ಜೊತೆಗೆ ನಮ್ಮ ಮಕ್ಕಳಿಗೆ ಪರಿಚಯಿಸುವ ಅಗತ್ಯ ಇದೆ ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ಸಂಸ್ಥೆ ವತಿಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಸರಾ ಬೊಂಬೆ ಇಟ್ಟಿರುವ ಮನೆಗಳನ್ನು ಭೇಟಿ ಮಾಡಿ ಬೊಂಬೆ ಸಂಸ್ಕೃತಿಯನ್ನು ವೀಕ್ಷಿಸಿ ಅತ್ಯುತ್ತಮ ಪ್ರದರ್ಶನ ಹಾಗೂ ಸಂಸ್ಕೃತಿ ಬಗ್ಗೆ ವಿವರಿಸಿದ 25 ಜನ ಸ್ಪರ್ಧಾಳುಗಳಿಗೆ ಸನ್ಮಾನಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಮಾತನಾಡಿ, ಕಲೆ, ಸಂಸ್ಕೃತಿ, ಸಾಹಿತ್ಯ ಉಳಿಸುವಂತಹ ಕೆಲಸ ಸಂಘ ಸಂಸ್ಥೆಗಳು ಮಾಡಬೇಕು. ನಮ್ಮ ಫ್ರೆಂಡ್ಸ್ ಸೆಂಟರ್ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಮುಖ ಆಯೋಜಕರಾದ ಶ್ರೀ ರಂಜಿನಿ ದತ್ತಾತ್ರಿ ಅವರು ತೀರ್ಪುಗಾರರ ತಂಡದೊಂದಿಗೆ ಭೇಟಿ ನೀಡಿ ಬೊಂಬೆ ಮನೆಗಳನ್ನು ವೀಕ್ಷಿಸಿ ತೀರ್ಪು ನೀಡಿ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಜಿ. ವಿಜಯಕುಮಾರ್, ಕಾರ್ಯದರ್ಶಿ ಯು.ರವೀಂದ್ರನಾಥ್ ಐತಾಳ್, ಎಲ್.ಎಂ. ಮೋಹನ್, ರಮೇಶ್, ಲಕ್ಷ್ಮೀ ಸತ್ಯನ್, ರಜನಿ ಅಶೋಕ್, ಫ್ರೆಂಡ್ಸ್ ಸೆಂಟರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.ನೋಡೋಣ ಬನ್ನಿ ದಸರಾ ಗೊಂಬೆಯಲ್ಲಿ ಒಟ್ಟು 25 ಸ್ಪರ್ಧಿಗಳು ಭಾಗವಹಿಸಿದ್ದರು. ಸುರೇಂದ್ರ, ಸುಧಾ ರಾಮಪ್ರಸಾದ್, ರುಕ್ಮಿಣಿ, ಬೃಂದಾ ಪ್ರಸನ್ನ ಕುಮಾರ್, ದೀಪಾ ವಿ.ವಿ, ವೀಣಾ ನಾಗರಾಜ್, ಸುಕನ್ಯಾ ನಂಜುಂಡಯ್ಯ, ಶ್ರುತಿ ದೀಕ್ಷಿತ್, ರುಕ್ಕು ಮತ್ತು ನಾಗು, ಕಲಾವತಿ, ಉಮಾ ರವಿಶಂಕರ್, ಶಾಲಿನಿ ರಾಜೀವ್, ದೀಪಾ ರವೀಂದ್ರ, ಸುಜಾತ ಮುರಳೀಧರ್ ಅನಂತಯ್ಯಂಗಾರ್, ಸುಜಾತ ಗಣಪತಿ, ಮಾಲತಿ ಮತ್ತೂರು, ಅನ್ನಪೂರ್ಣ, ನಾಗರಾಜು ಎಚ್. ಎಸ್., ಮೇರಿ ಡಿಸೋಜ, ನೇತ್ರ ನಾಗರಾಜ್, ಜಾನಕಿ ಸುಬ್ರಹ್ಮಣ್ಯ, ಬಿಂದು ಮಾಲಿನಿ, ಪ್ರದೀಪ್ , ಸುಷ್ಮಾ ಸುಧೀರ್ ಇತರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಟ್ಟು 25 ಜನರಿಗೆ ಆಕರ್ಷಕ ಬಹುಮಾನ ನೀಡಲಾಯಿತು.