ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮೈಸೂರು ಹಾಗೂ ಶ್ರೀರಂಗಪಟ್ಟಣದ ದಸರಾ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ ಪ್ರವಾಸಿಗರನ್ನು ಸೆಳೆಯಲು ಕಾವೇರಿ ನೀರಾವರಿ ನಿಗಮ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ವಿಶೇಷ ಹೂ ಮತ್ತು ಹೂವಿನ ರೆಂಬೆಗಳಿಂದ ನಿರ್ಮಿಸಿರುವ ಕಲಾಕೃತಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
ಕೆಆರ್‌ಎಸ್ ಬೃಂದಾವನದ ಗಾಜಿನ ಮನೆಯಲ್ಲಿ ವಿವಿಧ ಬಗೆಯ ಪುಷ್ಪ ರಾಶಿಗಳನ್ನು ತಯಾರಿಸಿ ಮೈಸೂರು ದಸರಾ ಹಾಗೂ ಶ್ರೀರಂಗಪಟ್ಟಣ ದಸರಾಕ್ಕೆ ಬರುವ ಪ್ರವಾಸಿಗರ ವೀಕ್ಷಣೆಗೆ ಎಲ್ಲಾ ತರಹದ ಪುಷ್ಪಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.ದಸರಾ ಅಂಗವಾಗಿ ಸುಮಾರು 50 ಮತ್ತು 150 ಅಡಿ ವಿಸ್ತೀರ್ಣವಿರುವ ಗಾಜಿನ ಮನೆಯಲ್ಲಿ ತೋಟಗಾರಿಕೆ ಇಲಾಖೆ ಹೆಚ್ಚು ಬಣ್ಣ ಬಣ್ಣಗಳಿಂದ ಆಕರ್ಷಣೀಯವಾಗಿ ಕಾಣಲು ಹೆಚ್ಚಿನ ಪುಷ್ಪಗಳ ಗುಂಚಲುಗಳನ್ನು ತಂದು ಜೋಡಣೆ ಮಾಡಿ ಸುಮಾರು 15 ಸಾವಿರಕ್ಕೂ ಹೆಚ್ಚು ವಿವಿಧ ಹೂ ಕುಂಡಗಳನ್ನು ಅಕರ್ಷಣೀಯವಾಗಿ ಜೋಡಿಸಲಾಗಿದೆ.
ಈಗಾಗಲೇ ಪುಷ್ಪಗಳನ್ನು ಜೋಡಿಸಿರುವ ಕಲಾಕೃತಿಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇಲಾಖೆ ಸಿಬ್ಬಂದಿ ಹೂವಿನ ಕುಂಡಗಳ ಜೋಡಿಸಿ, ಪ್ರವಾಸಿಗರ ಕಣ್ಣಿಗೆ ಮುದ ನೀಡುವ, ಆಕರ್ಷಣೆಗೆ ತಕ್ಕಂತೆ ಜೋಡಣೆ ಕಾರ್ಯಕ್ಕೆ ಶ್ರಮವಹಿಸಿರುವುದು ಕಂಡು ಬಂದಿದೆ.