
ಆಲ್ದೂರು: ಸರ್ಕಾರದ ಪಡಿತರ ವಿತರಣೆಗೆ ಕೊಟ್ಟಿಗೆಹಾರ ಸೊಸೈಟಿಗೆ ಪೂರೈಕೆಯಾದ ರಾಗಿಯಲ್ಲಿ ಧೂಳು ಮತ್ತು ಮಣ್ಣಿನ ಕಣಗಳೇ ಹೆಚ್ಚಾಗಿದ್ದು, ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ರಾಗಿ ಪಡೆಯಲು ನಿರಾಕರಿಸಿ, ಅಲ್ಲಿಯೇ ಬಿಟ್ಟು ತೆರಳಿದ್ದಾರೆ.ಬಡ ಕುಟುಂಬಗಳಿಗೆ ವಿತರಿಸುವ ಪಡಿತರ ಧಾನ್ಯಗಳು ಗುಣಮಟ್ಟದಿಂದ ಕೂಡಿರಬೇಕು. ಆದರೆ, ಕೊಟ್ಟಿಗೆಹಾರದಲ್ಲಿ ಪೂರೈಕೆಯಾದ ರಾಗಿಯಲ್ಲಿ ಧೂಳು ಹೆಚ್ಚಿದ್ದು, ಬಳಕೆಗೆ ಯೋಗ್ಯವಾಗಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ಭಾಗಕ್ಕೆ ಗುಣಮಟ್ಟದ ಆಹಾರ ಧಾನ್ಯ ಪೂರೈಸಲು ಸರ್ಕಾರಕ್ಕೆಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಗ್ರಾಮಸ್ಥರ ಅಸಮಾಧಾನದ ಹಿನ್ನೆಲೆಯಲ್ಲಿ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ನಾರಾಯಣಗೌಡ, ಮುಖ್ಯ ನಿರ್ವಹಣಾಧಿಕಾರಿ ನಿಶಾಂತ್ ಹಾಗೂ ನಿರ್ದೇಶಕರಾದ ಟಿ.ಎಂ. ಗಜೇಂದ್ರ ಗೌಡ, ಬಿ.ಎಂ. ಭರತ್, ಬಿ.ಎಸ್. ವಿಕ್ರಂ ಗೌಡ, ಎ.ಬಿ. ನಾಗೇಶ್ ಗೌಡ, ಬಿ.ಬಿ. ಶರತ್ ಮತ್ತಿತರರು ಕೊಟ್ಟಿಗೆಹಾರ ಸೊಸೈಟಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮೂಡಿಗೆರೆ ಆಹಾರ ನಿರೀಕ್ಷಕ ಇಂದ್ರೇಶ್ ರನ್ನು ಸ್ಥಳಕ್ಕೆ ಕರೆಸಿ, ರಾಗಿ ಗುಣಮಟ್ಟ ಪರಿಶೀಲಿಸುವಂತೆ ಮನವಿ ಮಾಡಿದರು. ಈ ವೇಳೆ ಪಡಿತರ ಪಡೆಯಲು ಬಂದಿದ್ದ ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು.ರಾಗಿ ಗುಣಮಟ್ಟದ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು, ಮುಂದಿನ ಬಾರಿ ಉತ್ತಮ ಗುಣಮಟ್ಟದ ರಾಗಿ ಪೂರೈಕೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಮಲೆನಾಡಿಗೆ ಅಕ್ಕಿ ಪೂರೈಸಲು ಆಗ್ರಹ:ಮಲೆನಾಡು ಭಾಗದ ಅನೇಕ ಕುಟುಂಬಗಳು ರಾಗಿಗಿಂತ ಅಕ್ಕಿ ಹೆಚ್ಚಾಗಿ ಬಳಸುತ್ತವೆ. ಗುಣಮಟ್ಟದ ರಾಗಿ ಪೂರೈಸಿದರೆ ಸ್ವೀಕರಿಸಲು ಅಭ್ಯಂತರವಿಲ್ಲ. ಆದರೆ, ಧೂಳು ಮಿಶ್ರಿತ ರಾಗಿ ವಿತರಿಸುವ ಬದಲು ಸ್ಥಳೀಯರ ಆಹಾರ ಪದ್ಧತಿಗೆ ಅನುಗುಣ ವಾಗಿ ಅಕ್ಕಿ ಪೂರೈಸಬೇಕು ಎಂದು ರಾಮನಗರ ಕಿರಣ್ ಸೇರಿದಂತೆ ತರುವೆ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಧಾನ್ಯ ಪೂರೈಸ ಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.