ನ.29ರಂದು ಶಿವನಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Oct 30, 2026, 01:15 AM IST
 | Kannada Prabha

ಸಾರಾಂಶ

ಅಜ್ಜಂಪುರ ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಗಡಿಭಾಗದ ಶಿವನಿ ಗ್ರಾಮದಲ್ಲಿ ನ.29ರಂದು ಭಾನುವಾರ ರಂಗಭೂಮಿ ಕಲಾವಿದ ಟಿ.ಸಿ.ಶಿವಕುಮಾರಸ್ವಾಮಿ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಚ್.ಆರ್. ಚಂದ್ರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಅಜ್ಜಂಪುರ

ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಗಡಿಭಾಗದ ಶಿವನಿ ಗ್ರಾಮದಲ್ಲಿ ನ.29ರಂದು ಭಾನುವಾರ ರಂಗಭೂಮಿ ಕಲಾವಿದ ಟಿ.ಸಿ.ಶಿವಕುಮಾರಸ್ವಾಮಿ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಚ್.ಆರ್. ಚಂದ್ರಪ್ಪ ತಿಳಿಸಿದರು.ತಡಗ ಗ್ರಾಮದ ಟಿ.ಸಿ.ಶಿವಕುಮಾರಸ್ವಾಮಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷತೆಗೆ ಆಹ್ವಾನಿಸಿದ ಸಂದರ್ಭದಲ್ಲಿ ಮಾತನಾಡಿ ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾದ ಶಿವನಿ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹೊಯ್ಸಳರ ಸಾಮಂತ ರಾದ ಆಸಂದಿ ಗಂಗರ ಕಾಲದಲ್ಲಿಯೇ ಶಿವನಿ ಶಾಸನಗಳಲ್ಲಿ ಉಲ್ಲೇಖಗೊಂಡಿದೆ.

ತರೀಕೆರೆ ಮತ್ತು ಸಂತೆಬೆನ್ನೂರು ಪ್ರದೇಶಗಳ ಇತಿಹಾಸದಲ್ಲೂ ಶಿವನಿ ಸೀಮೆ ಪ್ರಮುಖ ಸ್ಥಾನ ಪಡೆದಿದೆ. ಕೃಷಿ ಸಮೃದ್ಧಿ ಬಿಂಬಿಸುವ ‘ಸೀಮೆ ಕೆಟ್ಟರೂ ಶಿವನಿ ಕೆಡುವುದಿಲ್ಲ’ ಎಂಬ ಹಿರಿಯರ ಮಾತು ಇಂದಿಗೂ ಜನಜನಿತ. ಇಂತಹ ಐತಿಹಾಸಿಕ ಹಾಗೂ ಸಮೃದ್ಧ ನೆಲದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆವ ವಿಶ್ವಾಸವಿದೆ ಎಂದು ಹೇಳಿದರು.ಟಿ.ಸಿ.ಶಿವಕುಮಾರಸ್ವಾಮಿ ಬಹುಮುಖ ಪ್ರತಿಭೆ. ಶರಣ ಸಾಹಿತ್ಯ ಪರಿಷತ್ತಿನಲ್ಲೂ ಕ್ರಿಯಾಶೀಲರಾಗಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರ ನಾಟಕ ಕ್ಷೇತ್ರದಲ್ಲಿ ದೀರ್ಘಕಾಲದಿಂದ ತೊಡಗಿಸಿಕೊಂಡ ಅವರ ರಂಗಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದ್ದೇನೆ ಎಂದು ಚಂದ್ರಪ್ಪ ತಿಳಿಸಿದರು.ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ತಮ್ಮ ದಶಕಗಳ ರಂಗಭೂಮಿ ಸೇವೆಗೆ ದೊರೆತ ಗೌರವ ಎಂದು ಭಾವಿಸಿದ್ದೇನೆ. ಅಜ್ಜಂಪುರ ತಾಲೂಕು ಕಸಾಪ ನೀಡಿದ ಈ ಗೌರವದಿಂದ ಅಪಾರ ಸಂತೋಷವಾಗಿದೆ ಎಂದು ಟಿ.ಸಿ.ಶಿವಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದರು.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ ಶ್ರೀನಿವಾಸ್ ಮಾತನಾಡಿ ತಮ್ಮ ಊರಾದ ಶಿವನಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ. ಮೂಲತಃ ಶಿವನಿಯವರಾದ ಹೊಸದುರ್ಗ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಓಂಕಾರಪ್ಪ ಮಾತನಾಡಿದರು.ಲೇಖಕ ದ.ರಾಜಣ್ಣ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಮಧು, ಗ್ರಾಪಂ ಮಾಜಿ ಅಧ್ಯಕ್ಷೆ ಪುಣ್ಯವತಿ, ತರೀಕೆರೆ ತಾಪಂ ಮಾಜಿ ಸದಸ್ಯೆ ದೀಪಾ ಉಮೇಶ್, ಸವಿತಾ, ಕವಯಿತ್ರಿ ಮಂಜುಳಾ ಮಲ್ಲಿಕಾರ್ಜುನ, ನಾರಪ್ಪ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿಯುತ್ತಿದೆ ಕೃಷ್ಣೆ ನೀರು; ಕುಡಿಯೋಕೂ ಚಿಂತೆ!
ತಾಳ್ಮೆ ಪರೀಕ್ಷಿಸಬೇಡಿ, ಕಬ್ಬಿಗೆ ₹5,500 ದರ ನೀಡಿ