ಕನ್ನಡಪ್ರಭ ವಾರ್ತೆ ಉಡುಪಿಪ್ರತಿಯೊಬ್ಬರೂ ಸಂವಿಧಾನದಡಿಯಲ್ಲಿ ನೀಡಿರುವ ಹಕ್ಕುಗಳನ್ನು ಪಡೆದುಕೊಳ್ಳುವ ರೀತಿಯಲ್ಲಿಯೇ ಕರ್ತವ್ಯಗಳನ್ನು ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಹೇಳಿದರು.
ಭಾರತದ ನಾಗರಿಕರು ತಮಗಿರುವ ಸಾಂವಿಧಾನಿಕ ಹಕ್ಕುಗಳನ್ನು ಧ್ವನಿಯೇರಿಸುವ ಮೂಲಕ ಪಡೆದುಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಂವಿಧಾನ ನಮಗೆ ದಾರಿದೀಪವಾಗಿದೆ ಎಂದರು.
ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ಸಂವಿಧಾನ ಜಾಗೃತಿ ಕಾರ್ಯಕ್ರಮದ ಉದ್ದೇಶಗಳು ಇವತ್ತಿಗೆ ಮುಗಿಯುವುದಿಲ್ಲ. ನಮ್ಮ ನಡೆನುಡಿಗಳಲ್ಲಿ ದೇಶದ ಬಗ್ಗೆ ಗೌರವ ಹೊಂದಿರಬೇಕು. ಯುವಶಕ್ತಿ ದೇಶದ ಶಕ್ತಿಯಾಗಿದ್ದು, ಅವರುಗಳನ್ನು ಜಾಗೃತಗೊಳಿಸಬೇಕು. ವಿದ್ಯಾಭ್ಯಾಸದ ಜೊತೆ ಜೊತೆಗೆ ದೇಶದ ರಕ್ಷಣೆಯ ಸಂದರ್ಭದಲ್ಲಿ ಯುವಜನತೆ ಮುಂದಾಗಬೇಕು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಸಂವಿಧಾನ ಪೀಠಿಕೆ ಬೋಧಿಸಿದರು. ಅಶ್ಮಿತ್ ಎ.ಜೆ ಸಂವಿಧಾನ ಪೀಠಿಕೆ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.ಈ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ರಂಗೋಲಿ ಹಾಗೂ ತೆಂಗಿನ ಗರಿಗಳಲ್ಲಿ ಪ್ರದರ್ಶಿಸಲಾಯಿತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಜಯಂತಿ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಸವಿತಾ ಹರೀಶ್ ರಾಮ್, ಹರೀಶ್ ಶೆಟ್ಟಿ, ಪ್ರಭಾಕರ ಪೂಜಾರಿ, ಎಎಸ್ಪಿ ಸಿದ್ದಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಪೌರಾಯುಕ್ತ ರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.