ಕೊಟ್ಟೂರು: ನಮ್ಮ ಕಾಂಗ್ರೆಸ್‌ಗೆ ಯಾರು ಬರುತ್ತಾರೆ, ಮುಂದಿನ ಚುನಾವಣೆಗೆ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದರ ಚಿಂತೆ ನಾನು ಮಾಡುವುದಿಲ್ಲ. ವಿಧಾನಸಭೆಗೆ ನನ್ನನ್ನು ಮೊದಲ ಬಾರಿಗೆ ಚುನಾಯಿಸಿರುವ ಕ್ಷೇತ್ರದ ಜನತೆಯ ಆಶಯಕ್ಕನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಅವರ ಋಣ ತೀರಿಸುವುದು ನನ್ನ ಕರ್ತವ್ಯವಾಗಿದೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ ಹೇಳಿದರು.
ಕೂಡ್ಲಿಗಿ ಕ್ಷೇತ್ರದ, ಕೊಟ್ಟೂರು ತಾಲೂಕಿನ ಮಂಗಾಪುರ ಮತ್ತು ನಿಂಬಳಗೆರೆಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಗ್ರಾಮದ ಕಾಂಗ್ರೆಸ್ ಮುಖಂಡ ಎಚ್.ಕೆ. ಕಲ್ಲೇಶಪ್ಪ ನಿವಾಸದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆ, ಮುಂದಿನ ಚುನಾವಣೆಯಲ್ಲಿ ಕೂಡ್ಲಿಗಿಯಿಂದ ಟಿಕೆಟ್ ಕೇಳಿದ್ದಾರೆ ಎಂಬ ಸುದ್ದಿ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯ ಶ್ರೀರಾಮುಲು ಅವರು ರಾಜಕೀಯದಲ್ಲಿ ಕೆಳ ಹಂತದಿಂದ ಬೆಳೆದು ಬಂದವರು. ಪ. ಪಂಗಡ ಸಮುದಾಯದ ಪ್ರಭಾವಿ ಮುಖಂಡರು. ಅವರ ಪಕ್ಷದಲ್ಲಿನ ಚಟುವಟಿಕೆಯಿಂದ ಈ ಸುದ್ದಿಯಾಗಿರಬಹುದು. ಮುಂದಿನ ಚುನಾವಣೆ ಕುರಿತು ಈಗಲೇ ನಾನು ಯೋಚಿಸುವುದಿಲ್ಲ. ಕ್ಷೇತ್ರದ ಜನರು ಹಲವಾರು ನಿರೀಕ್ಷೆಯಿಟ್ಟು ನನ್ನನ್ನು ಚುನಾಯಿಸಿದ್ದಾರೆ. ಕ್ಷೇತ್ರದಲ್ಲಿರುವ ರಸ್ತೆ, ನೀರು, ಉದ್ಯೋಗ, ಶಿಕ್ಷಣ ಸೇರಿ ಹಲವಾರು ಸಮಸ್ಯೆಗಳನ್ನು ಬಗೆ ಹರಿಸುವ ಕಾರ್ಯ ಕೈಗೊಂಡಿರುವೆ ಎಂದರು.ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಉತ್ತಮ ರಸ್ತೆ ನಿರ್ಮಿಸಲಾಗುತ್ತಿದೆ. ಪೂರ್ಣ ಹಾಳಾಗಿರುವ ಉಜ್ಜಯಿನಿ ನಿಂಬಳಗೆರೆ, ಶಾಂತನಹಳ್ಳಿ ನಿಂಬಳಗೆರೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಹೊಸಹಳ್ಳಿಯಿಂದ ನಿಂಬಳಗೆರೆಗೆ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಗೊಳಿಸಲಾಗುವುದು. ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ಸಂಪರ್ಕ ರಸ್ತೆ ಅಭಿವೃದ್ಧಿಗೊಂಡರೆ ಶಿಕ್ಷಣ, ಆರೋಗ್ಯ ಸೇರಿ ಇತರ ಕ್ಷೇತ್ರಗಳ ಅಭಿವೃದ್ಧಿಯೂ ಸಾಗುತ್ತದೆ. ರಸ್ತೆಗಳಿಗೆ ಅವೈಜ್ಞಾನಿಕವಾಗಿ ಹಂಪ್ಸ್ ನಿರ್ಮಾಣದಿಂದ ಉಂಟಾಗುತ್ತಿರುವ ಪ್ರಾಣ ಹಾನಿ ತಡೆಯಲು ವೈಜ್ಞಾನಿಕ ಹಂಪ್ಸ್ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರ, ಪ್ರಾಯೋಗಿಕವಾಗಿ ಕ್ಷೇತ್ರಕ್ಕೆ ಒಂದು ಕೋಟಿ ರು. ಅನುದಾನ ನೀಡಿದೆ. ಕ್ಷೇತ್ರದಲ್ಲಿ 200 ರಸ್ತೆಗಳನ್ನು ವೈಜ್ಞಾನಿಕ ಹಂಪ್ಸ್ ನಿರ್ಮಾಣಕ್ಕೆ ಗುರುತಿಸಿದೆ ಎಂದು ಹೇಳಿದರು.
ಈಗಾಗಲೇ ಗುಡೇಕೋಟೆ ಉತ್ಸವವನ್ನು ಆಚರಿಸಲಾಗುತ್ತಿದೆ. ಕೂಡ್ಲಿಗಿ ತಾಲೂಕಿನಲ್ಲಿ ಅಧಿಕ ಹುಣಸೆ ಬೆಳೆಯುವುದರಿಂದ, ಹುಣಸೆ ನಾಡು ಉತ್ಸವ ಆಚರಣೆಗೆ ತೀರ್ಮಾನಿಸಿದೆ. ಇದರ ರೂಪುರೇಷೆ ಸಿದ್ಧಪಡಿಸಿ ವರ್ಷಕ್ಕೊಮ್ಮೆ ಕ್ಷೇತ್ರದ ನಾನ ಕಡೆ ಆಚರಿಸಲಾಗುವುದು. ಹುಣಸೆ ಹಣ್ಣು ಬೆಳೆಗಾರರ ರಕ್ಷಣೆಗಾಗಿ ಕೂಡ್ಲಿಗಿಯಲ್ಲಿ ಹುಣಸೆ ಹಣ್ಣಿನ ಸಂಸ್ಕರಣ ಘಟಕ ಸ್ಥಾಪಿಸಲಾಗುವುದು. ಹೊಸಹಳ್ಳಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣವಾಗಲಿದೆ ಎಂದು ಹೇಳಿದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ಕೂಡ್ಲಿಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಗ್ರಾಪಂ ಅಧ್ಯಕ್ಷ ಮಹಾಂತೇಶ, ಮುಖಂಡರಾದ ಎಚ್.ಕೆ. ಕಲ್ಲೇಶಪ್ಪ, ಓಂಕಾರಪ್ಪ, ಬೋರಜ್ಜರ ಮಹಾಂತೇಶ, ಕೆ. ಶರಣಪ್ಪ, ಕೆ. ಕೊಟ್ರೇಶ, ಚನ್ನಬಸವನಗೌಡ, ಬಿ.ಎಸ್. ಪೃಥ್ವಿರಾಜ, ಕುಮಾರಗೌಡ, ರಮೇಶ ಇತರರು ಇದ್ದರು.