ಬದುಕಿನ ಜಟಕಾ ಬಂಡಿಗೆ ಡಿವಿಜಿ ಕಗ್ಗವೇ ದಾರಿದೀಪ

KannadaprabhaNewsNetwork |  
Published : Mar 25, 2026, 01:15 AM IST
0000 | Kannada Prabha

ಸಾರಾಂಶ

ಆಧುನಿಕ ಜಗತ್ತಿನ ಒತ್ತಡದ ಬದುಕಿಗೆ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಒಂದು ಅತ್ಯುತ್ತಮ ದಿವ್ಯೌಷಧಿಯಾಗಿದೆ ಎಂದು ವೈದ್ಯರು, ಲೇಖಕರು ಹಾಗೂ ಡಿಡಿ ಚಂದನದ ಥಟ್ ಅಂತ ಹೇಳಿ ಕಾರ್ಯಕ್ರಮದ ರೂವಾರಿ ಡಾ. ನಾ. ಸೋಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಆಧುನಿಕ ಜಗತ್ತಿನ ಒತ್ತಡದ ಬದುಕಿಗೆ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಒಂದು ಅತ್ಯುತ್ತಮ ದಿವ್ಯೌಷಧಿಯಾಗಿದೆ ಎಂದು ವೈದ್ಯರು, ಲೇಖಕರು ಹಾಗೂ ಡಿಡಿ ಚಂದನದ ಥಟ್ ಅಂತ ಹೇಳಿ ಕಾರ್ಯಕ್ರಮದ ರೂವಾರಿ ಡಾ. ನಾ. ಸೋಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.ತುಮಕೂರು ವಿವಿಯಲ್ಲಿ ಹಿರಿಯ ನಾಗರೀಕರ ಪರಿಸರ ವೇದಿಕೆ ಮತ್ತು ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಡಿ.ವಿ.ಜಿ ಅವರ ಕಗ್ಗಗಳ ವಾಚನ, ವ್ಯಾಖ್ಯಾನ ಮುಕ್ತಾಯ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೇವಲ ನಾಲ್ಕು ಸಾಲುಗಳಲ್ಲಿ ಇಡೀ ಬದುಕಿನ ಸಾರವನ್ನು ಹಿಡಿದಿಡುವ ಕಗ್ಗ, ಕನ್ನಡಿಗರ ಪಾಲಿನ ಆಧುನಿಕ ಭಗವದ್ಗೀತೆ ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಎಂಬ ಸಾಲುಗಳು ಮನುಷ್ಯನಿಗೆ ಇರಬೇಕಾದ ವಿನಯ ಮತ್ತು ಸಮಾಜಕ್ಕೆ ನೀಡಬೇಕಾದ ಕೊಡುಗೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸುತ್ತವೆ ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞತೆಯ ಅಗತ್ಯವಿದೆ. ವಿಧಿಯಾಟ ಮತ್ತು ಮನುಷ್ಯನ ಪುರುಷಾರ್ಥದ ನಡುವಿನ ಸಮತೋಲನವನ್ನು ಕಗ್ಗ ನಮಗೆ ಕಲಿಸಿಕೊಡುತ್ತದೆ. ವಿಜ್ಞಾನ ಮತ್ತು ಅಧ್ಯಾತ್ಮದ ಅಪೂರ್ವ ಸಂಗಮವೇ ಈ ಕೃತಿಯ ಯಶಸ್ಸಿನ ಗುಟ್ಟು ಎಂದು ವಿಶ್ಲೇಷಿಸಿದರು.ಕನ್ನಡ ಸಾಹಿತ್ಯ ಲೋಕದ ಅಮೂಲ್ಯ ರತ್ನವಾಗಿರುವ ಈ ಕೃತಿಯನ್ನು ಕೇವಲ ಓದುವುದಷ್ಟೇ ಅಲ್ಲದೆ, ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಯುವ ಪೀಳಿಗೆಯು ಇಂತಹ ಮೌಲ್ಯಯುತ ಸಾಹಿತ್ಯದತ್ತ ಒಲವು ತೋರಿದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದರು.ಡಿವಿಜಿ ಕಗ್ಗಗಳ ವಾಚನ, ವ್ಯಾಖ್ಯಾನಕಾರರು ಹಾಗೂ ವೈದ್ಯರಾದ ಡಾ.ಕೆ.ರಾಜಶೇಖರ್ ಮಾತನಾಡಿ ಇಂದಿನ ವೇಗದ ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಯುವ ಪೀಳಿಗೆಗೆ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ವಿಚಾರಗಳ ಅರಿವು ಅತ್ಯಂತ ಅಗತ್ಯವಾಗಿದೆ. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಸಾಹಿತ್ಯದ ಮೇಲೆ ಅಪಾರ ಅಭಿಮಾನ ಹೊಂದಿರುವ ಡಾ. ರಾಜಶೇಖರ್ ಅವರು, ಕಳೆದ ೯ ರಿಂದ ೧೦ ವರ್ಷಗಳ ಕಾಲ ಹಿರಿಯ ನಾಗರಿಕರಿಗೆ ಕಗ್ಗವನ್ನು ಪರಿಚಯ ಮಾಡಿಕೊಟ್ಟ ಸಾರ್ಥಕ ಕ್ಷಣಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಬದುಕು ಜಟಕಬಂಡಿ, ವಿಧಿ ಅದರ ಸಾಹೇಬ ಎಂಬ ಅಮೋಘ ಸಾಲುಗಳ ಮೂಲಕ ಜನಪ್ರಿಯರಾದ ಡಿವಿಜಿಯವರ ಸಾಹಿತ್ಯವು ಸಕಾಲಿಕವಾಗಿದೆ ಎಂದರು.ಮಂಕುತಿಮ್ಮನ ಕಗ್ಗ ಕೇವಲ ಪದ್ಯಗಳ ಸಂಕಲನವಲ್ಲ, ಅದು ಕನ್ನಡಿಗರ ಪಾಲಿನ ಆಧುನಿಕ ಭಗವದ್ಗೀತೆ. ಇದರಲ್ಲಿ ಆತ್ಮ, ಕರ್ಮ ಮತ್ತು ವಿಧಿಯ ಕುರಿತಾದ ಗಹನವಾದ ವಿಚಾರಗಳನ್ನು ಅತ್ಯಂತ ಸರಳವಾಗಿ ತಿಳಿಸಲಾಗಿದೆ. ಬದುಕಿನಲ್ಲಿ ಅಹಂಕಾರ ಮತ್ತು ಮಮಕಾರವನ್ನು ಬಿಟ್ಟು ಹೇಗೆ ಬಾಳಬೇಕು ಎಂಬುದೇ ಕಗ್ಗದ ನೈಜ ಅರ್ಥ ಎಂದು ಅವರು ವಿವರಿಸಿದರು.ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಜಿ.ದಾಕ್ಷಾಯಣಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್. ಆರ್. ರೇಣುಕ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಸಿಬಂತಿಪದ್ಮನಾಭ ಕೆ.ವಿ., ನಿವೃತ್ತ ಪ್ರಾಂಶುಪಾಲರಾದ ಪ್ರೊ.ಬಿ.ಕರಿಯಣ್ಣ, ಪ್ರಕಾಶ್ ಕುಮಾರ್ ಮತ್ತು ವಿವೇಕಾನಂದ ಶೆಟ್ಟಿ ಸೇರಿದಂತೆ ಹಿರಿಯ ನಾಗರೀಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರು ಧನಾತ್ಮಕ ಭಾವನೆ ರೂಢಿಸಿಕೊಳ್ಳಿ
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮನೋರಂಜನೆ ವಾರ